ಕನ್ನಡಪ್ರಭ ವಾರ್ತೆ ಮೇಲುಕೋಟೆ
ಬೇಸಿಗೆ ಶಿಬಿರದಲ್ಲಿ ಭಾಗವಹಿಸಿರುವ ಸರ್ಕಾರಿ ಶಾಲೆ ಮಕ್ಕಳಿಗೆ ಮನ್ಮುಲ್ ಒಕ್ಕೂಟದ ದರ್ಶನ ಮಾಡಿಸಿ ಅಲ್ಲಿನ ಚಟುವಟಿಕೆ ಪರಿಚಯಿಸಲಾಗುತ್ತದೆ ಎಂದು ನಿರ್ದೇಶಕ ಶಿವಕುಮಾರ್ ತಿಳಿಸಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಪಂ, ಶಾಲಾ ಶಿಕ್ಷಣ ಇಲಾಖೆ ಗ್ರಂಥಾಲಯ ಇಲಾಖೆ ಹಾಗೂ ಕಾಲಭೈರವೇಶ್ವರ ಜಾನಪದಕಲಾ ತಂಡದ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರ ಅಕ್ಕರೆಯ ಅಂಗಳದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಪಂ ಸಿಇಒ ನಂದಿನಿಯವರ ಕಾಳಜಿಯಿಂದಾಗಿ ಬೇಸಿಗೆ ವೇಳೆಯಲ್ಲಿ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಜಿಲ್ಲಾದ್ಯಂತ ಬೇಸಿಗೆ ಶಿಬಿರದ ಮೂಲಕ ಹತ್ತಾರು ಚಟುವಟಿಕೆ ಆಯೋಜಿಸಿ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಲಾಗಿದೆ ಎಂದರು.ಶಿಬಿರದಲ್ಲಿ ಭಾಗಿಯಾದ ಮಕ್ಕಳಿಗೆ ನಾನೇ ಸ್ವಂತ ಖರ್ಚಿನಲ್ಲಿ ಬಸ್ ವ್ಯವಸ್ಥೆ ಮಾಡಿ ರೈತರ ಜೀವನಾಡಿ ಮನ್‌ಮುಲ್ ಕಾರ್ಯ ವೈಖರಿಯನ್ನು ಪರಿಚಯ ಮಾಡಿಸುತ್ತೇನೆ ಎಂದರು.
45 ದಿನಗಳಕಾಲ ನಡೆದ ಶಿಬಿರದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ರಾಘು ಪಾಲ್ಗೊಂಡು ಮಕ್ಕಳಿಗೆ ತರಬೇತಿ ನೀಡಿದರು. ದೇಗುಲದ ಇಒ ಶೀಲಾ ಮಕ್ಕಳಿಗೆ ಲೇಖನ ಸಾಮಗ್ರಿಯ ಪೌಚ್ ಕೊಡುಗೆ ನೀಡಿದರು.
ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಭವಾನಿ ಹರಿಧರ್, ಉಪಾಧ್ಯಕ್ಷ ಜಯರಾಮೇಗೌಡ, ಪಿಡಿಒ ರಾಜೇಶ್ವರ್, ಸದಸ್ಯೆ ಮಣಿಮುರುಗನ್, ಕಾಲಭೈರವೇಶ್ವರ ಕಲಾತಂಡದ ಜಯಲಕ್ಷ್ಮಿಪುಟ್ಟರಾಜು, ಕನಗೋನಹಳ್ಳಿ ಕಾಂತರಾಜು ಪರಿಸರ ತಜ್ಞ ಸಂತೋಷ್ ಕೌಲಗಿ, ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರೀತಿ ಮಹದೇವ್, ಪುಟ್ಟಸ್ವಾಮಿ ಶಿಬಿರದ ನೋಡಲ್ ಅಧಿಕಾರಿ ನಿರ್ಮಲ, ಬಾಲಕರ ಶಾಲೆಯ ಮುಖ್ಯಶಿಕ್ಷಕ ಸಂತಾನರಾಮನ್ ಶಿಭಿರದ ಸಹ ನಿರ್ದೇಶಕ ಮನು ಭಾಗವಹಿಸಿದ್ದರು.
ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ಕಂಸಾಳೆ, ಅಡವಿದೇವಿ ಮುಂತಾದ ನೃತ್ಯ ಹಾಗೂ ಕುಡಿತದ ಚಟದ ಪರಿಣಾಮದ ಜಾಗೃತಿ ನಾಟಕ ಪ್ರದರ್ಶಿಸಿದರು. ಶಂಬೂನಹಳ್ಳಿ ಆನಂದ್ ಪ್ರಾಯೋಜಿಸಿದ ಸ್ಮರಣಿಕೆಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಇದೇ ವೇಳೆ ಶಿಬಿರದ ಶಿಕ್ಷಕಿಯಾದ ಮಕ್ಕಳಮನೆ ಶಿಕ್ಷಕಿ ಕವಿತಾ, ಸಹಾಯಕಿ ಸವಿತ, ಗ್ರಂಥಪಾಲಕಿ ಗುಣವತಿ ಹಾಗೂ ಶಿಬಿರದ ನಿರ್ದೇಶಕ ರಾಷ್ಟ್ರ ಪ್ರಶಸ್ತಿ ವಿಜೇತ ರಾಘುರನ್ನು ಅಭಿನಂದಿಸಲಾಯಿತು.