ಕನ್ನಡಪ್ರಭ ವಾರ್ತೆ ರಾಮನಗರವಿಶ್ವಗುರು ಬಸವಣ್ಣನವರು ತಮ್ಮ ತತ್ವಾದರ್ಶ ಹಾಗೂ ಚಿಂತನೆಗಳ ಮೂಲಕ ಜಗತ್ತಿಗೆ ಬೆಳಕಾದವರು. ಅವರ ವಚನಗಳನ್ನು ಅರ್ಥ ಮಾಡಿಕೊಂಡು ಮುನ್ನಡೆದರೆ ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ ಸಾಹಿತಿ ವಿ.ಎಚ್. ರಾಜಶೇಖರ್ ಹೇಳಿದರು.ನಗರದ ಕಂದಾಯ ಭವನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬುಧವಾರ ನಡೆದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.ಮಹಾನ್ ದಾರ್ಶನಿಕ ಜಗಜ್ಯೋತಿ ಬಸವೇಶ್ವರರು ಅವರು ವಿಶ್ವದ ಮಹಾನ್ ಗುರು. 12 ನೇ ಶತಮಾನ ಇಡೀ ವಿಶ್ವದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ಕಾಲ. ಅಂದಿನ ಅನುಭವ ಮಂಟಪದಲ್ಲಿ ಎಲ್ಲಾ ಜಾತಿ ವರ್ಗದವರಿಗೆ ಅವಕಾಶ ಕಲ್ಪಿಸಿಕೊಟ್ಟು ಅಂದೇ ಸಮಾನತೆಯನ್ನು ಸಾರಿದ್ದರು. ಅದು ಇಂದಿನ ಸಂಸತ್‍ಗೆ ಮಾದರಿಯಾಗಿದೆ ಎಂದರು.ಅನುಭವ ಮಂಟಪ ಮೂಲಕ ನವ ಸಮಾಜ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಸಮಾಜದ ಎಲ್ಲಾ ವರ್ಗಗಳ ಸುಖ ಶಾಂತಿಗೆ ಬಸವೇಶ್ವರರು ಮುನ್ನುಡಿ ಬರೆದವರು. ಸಮಾಜ ಸುಧಾರಣೆಗಾಗಿ ಎಲ್ಲಾ ಜಾತಿ ಧರ್ಮಗಳನ್ನು ಒಂದೆಡೆ ಸೇರಿಸಿ ಸಾಮಾಜಿಕ ಆಂದೋಲನ ನಡೆಸಿ ಬದಲಾವಣೆಯತ್ತ ಸಮಾಜವನ್ನು ಕೊಂಡೊಯ್ದರು. ಧರ್ಮ ಸಂಘರ್ಷವನ್ನು ತಡೆಯಲು ದಯೆಯುಳ್ಳ ಧರ್ಮ ಸ್ಥಾಪನೆಗೆ ಅಡಿಗಲ್ಲು ಹಾಕಿದವರು ಎಂದು ರಾಜಶೇಖರ್ ತಿಳಿಸಿದರು.ವಚನ ಸಾಹಿತ್ಯ ಕೊಡುಗೆ:ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿ, ಸಾಮಾಜಿಕ ಆಂದೋಲನಕಾರರಾಗಿ ವಚನಕಾರರಾಗಿ ಅಂದಿನ ಕಾಲಘಟ್ಟದಲ್ಲಿ ಬಸವಣ್ಣ ಗುರುತಿಸಿಕೊಂಡವರು. ಬದಲಾವಣೆಯತ್ತ ಸಮಾಜವನ್ನು ಕೊಂಡೊಯ್ಯಬೇಕು ಎಂಬ ಮಹಾದಾಸೆ ಅವರಲ್ಲಿತ್ತು. ನುಡಿದಂತೆ ನಡೆದು ಯಾವ ಪದವಿಗೂ ಆಸೆ ಪಡೆದೆ ಜನರಲ್ಲಿ ಭಕ್ತಿಯ ಬೀಜ ಬಿತ್ತಿದವರು. ಶರಣರು ಅಜ್ಞಾನದ ಕಡೆ ತೆರಳದಂತೆ ನವ ಸಮಾಜ ನಿರ್ಮಾಣಕ್ಕೆ ಸಾಕ್ಷಿಯಾಗಿ ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯ ಕೊಡುಗೆ ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹೇಳಿದರು.ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ್ ಮಾತನಾಡಿ, ಬಸವಣ್ಣರವರು ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಬಯಸಿದವರು. ವಚನಗಳ ಮೂಲಕ ಜ್ಞಾನಭಂಡಾರವನ್ನು ಬಿತ್ತಿ ಶಿಲ್ಪದಂತೆ ಜ್ಞಾನವನ್ನು ಕೆತ್ತಿ ಮನುಕುಲಕ್ಕೆ ಜ್ಞಾನ ಬುತ್ತಿ ತುಂಬಿದರು. ಅವರು ಕೊಟ್ಟ ಜ್ಞಾನ ಮನುಕುಲದ ಸಾಮಾಜಿಕ ಒಗ್ಗಟ್ಟಿಗೆ ಇಂದು ಬುನಾದಿಯಾಗಿದೆ. ವಿಶ್ವಗುರು ಬಸವಣ್ಣನವರ ದಾರಿಯಲ್ಲಿ ಸಾಗಿದರೆ ಸಮಾಜ ಹಾಗೂ ಜೀವನ ಸುಖಕರವಾಗಿರುತ್ತದೆ. ಅವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ತಿಳಿಸಿದರು.