ಅನುದಾನ ನಿರೀಕ್ಷೆ ಕೈಗೂಡದೆ ಮನೆ ತೊರೆದ ಬಡ ದಂಪತಿ!

KannadaprabhaNewsNetwork |  
Published : May 01, 2025, 12:46 AM IST
32 | Kannada Prabha

ಸಾರಾಂಶ

ಅನುದಾನದ ಭರವಸೆ ಸಿಕ್ಕಿದರೂ ಪಂಚಾಂಗ ಮತ್ತು ಗೋಡೆ ವರೆಗಿನ ಕಾಮಗಾರಿ ಮಾತ್ರ ನಡೆದು, ವಾಸ್ತವ್ಯಕ್ಕೆ ಯೋಗ್ಯವಿಲ್ಲದ ಕಾರಣ ಗೀತಾ ವಾಸು ದಂಪತಿ ಮನೆ ತೊರೆದಿದ್ದಾರೆ.‌ ಸದ್ಯಕ್ಕೆ ವಿಟ್ಲ ಸಮೀಪದ ಸಾಲೆತ್ತೂರಿಲ್ಲಿರುವ ಗೀತಾ ತವರು ಮನೆಗೆ ತೆರಳಿದ್ದಾರೆಂದು ತಿಳಿದುಬಂದಿದೆ. ಇವರ ದುಃಸ್ಥಿತಿ ಬಗ್ಗೆ ೨೦೨೪ರಲ್ಲಿ ಕನ್ನಡಪ್ರಭ ವರದಿ ಪ್ರಕಟಿಸಿತ್ತು.

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳ

ಹೊಸಮನೆಯ ನಿರೀಕ್ಷೆಯಲ್ಲಿಯೇ ಹರಕು ಮನೆಯಲ್ಲಿ ವಾಸ್ತವ್ಯವಿದ್ದ ಬಡ ದಂಪತಿ ವಸತಿ ನಿಗಮದ ಅನುದಾನ‌ ಬಾರದೆ ಅರ್ಧಕ್ಕೆ ನಿಂತ ಮನೆಯ ಕಾಮಗಾರಿಯಿಂದ ಬೇಸತ್ತು ಮನೆಬಿಟ್ಟು ಹೋದ ಘಟನೆ ಮಾಣಿಯಲ್ಲಿ ನಡೆದಿದೆ.

ಈ ಘಟನೆ ನಡೆದಿರುವುದು ಮಾಣಿ ಗ್ರಾಮದ‌ ಲಕ್ಕಪ್ಪಕೋಡಿಯಲ್ಲಿ. ಇಲ್ಲಿನ ಹರಕು ಮನೆಯಲ್ಲಿ ವಾಸ್ತವ್ಯವಿದ್ದ ಕುಟುಂಬದ ದಯನೀಯ ಸ್ಥಿತಿ, ಮೇಲ್ಛಾವಣಿಯ ಶೇ.80 ರಷ್ಟು ಹಂಚುಗಳು ನೆಲಕ್ಕೆ ಬಿದ್ದು, ನೇತಾಡುವ ಸ್ಥಿತಿಯಲ್ಲಿದ್ದ ಪಕ್ಕಾಸುಗಳ ಬಗ್ಗೆ ಕಳೆದ 2024 ರ ಮಾ. 7 ರಂದು ‘ಕನ್ನಡಪ್ರಭ’ದಲ್ಲಿ ವರದಿ ಪ್ರಕಟವಾಗಿತ್ತು.

ಆದರೆ ಆ ಕುಟುಂಬಕ್ಕೆ 2023-24 ನೇ ಸಾಲಿನ ಮಳೆಹಾನಿ ಯೋಜನೆಯಡಿ ನೆರೆಸಂತ್ರಸ್ತರ ಪುನರ್ವಸತಿ ಯೋಜನೆಯಡಿ ಮನೆಮಂಜೂರಾಗಿತ್ತು. ಈ ವಿಚಾರವನ್ನು ಪಂಚಾಯಿತಿ ಆಡಳಿತ ಕೂಡ ಗೀತಾ ಕುಟುಂಬಕ್ಕೆ ತಿಳಿಸಿರಲಿಲ್ಲ. ಗೀತಾ ಅವರ ಖಾತೆಗೆ ಮೊದಲ ಹಂತದಲ್ಲಿ ತಾಲೂಕು ಖಾತೆಯಿಂದ ಸುಮಾರು 95 ಸಾವಿರ ರು. ಹಣ ಕೂಡ ಮಂಜೂರಾಗಿತ್ತು.

ಇದು ಗೀತಾ ಅವರ ಗಮನಕ್ಕೂ ಬಂದಿರಲಿಲ್ಲ. ‘ಕನ್ನಡಪ್ರಭ’ ವರದಿಯಿಂದ ಎಚ್ಚೆತ್ತ ಕಂದಾಯ ಇಲಾಖೆ ಗ್ರಾಮ ಪಂಚಾಯಿತಿ ಮೂಲಕ ಗೀತಾ ಕುಟುಂಬಕ್ಕೆ ವಿಚಾರ ತಿಳಿಸಿ, ಸ್ಥಳೀಯರ ಮಾರ್ಗದರ್ಶನದೊಂದಿಗೆ ಮನೆ ಕೆಲಸವನ್ನೂ ಆರಂಭಿಸಲಾಯಿತು. ಇದ್ದ ಹಣದಲ್ಲಿ ಏನೆಲ್ಲ ಆಗುತ್ತದೋ ಅದನ್ನು ಮಾಡಿಸಿ ಮುಂದಿನ ಕಂತಿಗೆ ಕಾದವರಿಗೆ ನಿರಾಸೆ ಕಾದಿತ್ತು.

ಯಾಕೆಂದರೆ ಆ ಬಳಿಕದ‌ ಅನುದಾನ ಮಂಜೂರಾಗಬೇಕೆಂದರೆ ಈಗಿನ ಮನೆ ಕಾಮಗಾರಿಯ ಫೊಟೋ ಸಂಬಂಧಪಟ್ಟ ನಿಗಮಕ್ಕೆ‌ ಸಲ್ಲಿಸಬೇಕಿತ್ತು. ಆದರೆ ಗ್ರಾ.ಪಂ‌.ಅಭಿವೃದ್ಧಿ ಅಧಿಕಾರಿ‌ ಪ್ರಯತ್ನಿಸಿದರೂ, ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಇವರ ಖಾತೆ ಬ್ಲಾಕ್ ಆಗಿದೆ. ನಂತರದ ಬೆಳವಣಿಗೆಯಲ್ಲಿ ತಹಸೀಲ್ದಾರ್ ಅವರ ಬೇಡಿಕೆಯಂತೆ ಬ್ಲಾಕ್ ತೆರವಿಗೆ ಜಿಲ್ಲಾಧಿಕಾರಿ ಕಚೇರಿಯಿಂದ ರಾಜೀವ್ ಗಾಂಧಿ‌ ವಸತಿ ನಿಗಮಕ್ಕೆ ಮನವಿ‌ ಸಲ್ಲಿಸಲಾಗಿದೆ. ಆದರೆ ಯಾವುದೇ ಸ್ಪಂದನೆ‌ ಬಂದಿಲ್ಲ.

ಹೀಗಾಗಿ ಪಂಚಾಂಗ ಮತ್ತು ಗೋಡೆ ವರೆಗಿನ ಕಾಮಗಾರಿ ಮಾತ್ರ ನಡೆದು, ವಾಸ್ತವ್ಯಕ್ಕೆ ಯೋಗ್ಯವಿಲ್ಲದ ಕಾರಣ ಗೀತಾ ವಾಸು ದಂಪತಿ ಮನೆ ತೊರೆದಿದ್ದಾರೆ.‌ ಸದ್ಯಕ್ಕೆ ವಿಟ್ಲ ಸಮೀಪದ ಸಾಲೆತ್ತೂರಿಲ್ಲಿರುವ ಗೀತಾ ತವರು ಮನೆಗೆ ತೆರಳಿದ್ದಾರೆಂದು ತಿಳಿದುಬಂದಿದೆ.

ಜನಪ್ರತಿನಿಧಿಗಳು ಕಣ್ತೆರೆಯಬೇಕಿದೆ:

ಗ್ರಾಮಪಂಚಾಯಿತಿ ವ್ಯಾಪ್ತಿಯ ದಲಿತ ಕುಟುಂಬವೊಂದು ಬಡತನದ ಕಾರಣದಿಂದ ಬೇಸತ್ತು ಮನೆಯೂ ಇಲ್ಲದ ಸ್ಥಿತಿಯಲ್ಲಿ‌ರುವಾಗ ಇಂತಹಾ ದಯನೀಯ ಸ್ಥಿತಿ ಗ್ರಾಮ ಪಂಚಾಯಿತಿ ಆಡಳಿತದ ಕಣ್ಣಿಗೆ ಬೀಳದಿರುವುದು ಸೋಜಿಗವೇ ಸರಿ. ಜೊತೆಗೆ ಕ್ಷೇತ್ರದ ಶಾಸಕರು, ಜಿಲ್ಲೆಯ ಸಂಸದರು ಈ ಬಗ್ಗೆ ಸರ್ಕಾರಿ‌ ಮಟ್ಟದಲ್ಲಿ ಅಥವಾ ಸಂಘ ಸಂಸ್ಥೆಗಳ ನೆರವಿನಿಂದ ಅರ್ಧಕ್ಕೆ ನಿಂತಿರುವ ಈ‌ ಮನೆಯನ್ನು ವಾಸ್ತವ್ಯಕ್ಕೆ ಯೋಗ್ಯವಾಗಿಸಿಕೊಟ್ಟರೆ ಅನುಕೂಲವಾದೀತು.

ತಾಲೂಕಿನಲ್ಲಿ ಇಂತಹ ಹಲವು ಪ್ರಕರಣಗಳಿವೆ:

ರಾಜೀವ್ ಗಾಂಧಿ ವಸತಿ‌ ನಿಗಮದಿಂದ‌ ಮಂಜೂರಾದ ತಾಲೂಕಿನ ಹಲವು ಮನೆಗಳಿಗೆ ಅನುದಾನ‌ ದೊರಕಿಲ್ಲ ಎನ್ನುವ ಸಂಗತಿ ಇದೀಗ ಬಹಿರಂಗಗೊಂಡಿದೆ.

ಸರ್ಕಾರದ ಯೋಜನೆ ನಂಬಿ ಮನೆ ಕಟ್ಟಲು‌ ಹೊರಟ‌ ಹಲವು ಮಂದಿ, ಅನುದಾನ ಬಾರದೆ ಸಾಲ ಮಾಡಿ, ಮನೆ ಕೆಲಸ ಪೂರ್ಣಗೊಳಿಸಿ ಮನೆಯಲ್ಲಿ ವಾಸ್ತವ್ಯ ಹೂಡಿದವರೂ ಇದ್ದಾರೆ. ನಮ್ಮ ಗಮನಕ್ಕೆ ಬಂದ ಎಲ್ಲ ಕೇಸ್ ಗಳನ್ನೂ ಮೇಲಧಿಕಾರಿಯ ಗಮನಕ್ಕೆ ತರುತ್ತಿದ್ದೇವೆ ಎನ್ನುತ್ತಾರೆ ತಾಲೂಕು ಕಚೇರಿ ಸಿಬ್ಬಂದಿ ಜೀವನ್.

--------------

ಗೀತಾ ವಾಸು ದಂಪತಿಯ ಮನೆಯ ಅನುದಾನ‌ಬಿಡುಗಡೆ ಸಂಬಂದಿಸಿ ಬ್ಲಾಕ್ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ, ಅಲ್ಲಿಂದ ನಿಗಮಕ್ಕೆ ಪತ್ರ ಬರೆಯಲಾಗಿದೆ. ಮುಂದಿನ ಬೆಳವಣಿಗೆ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ.

- ಅರ್ಚನಾ‌ ಭಟ್, ತಹಸೀಲ್ದಾರ್‌, ಬಂಟ್ವಾಳ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ