ಜನರೊಂದಿಗೆ ಬೆರೆತರೆ ನೈಜ ಸಮಸ್ಯೆ ಗುರುತಿಸಬಹುದು

KannadaprabhaNewsNetwork |  
Published : Dec 24, 2025, 02:00 AM IST
23ಎಚ್ಎಸ್ಎನ್11 : ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಡಾ.ಸಿ.ವಿ.ವೆಂಕಟೇಶ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಜನರೊಂದಿಗೆ ಬೆರೆತಾಗ ಮಾತ್ರ ಸಮಾಜದ ನೈಜ ಸಮಸ್ಯೆಗಳನ್ನು ಗುರುತಿಸಲು ಸಾಧ್ಯ ಎಂದು ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಸಿ.ವಿ. ವೆಂಕಟೇಶ್ ಅವರು ಅಭಿಪ್ರಾಯಪಟ್ಟರು. ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿರುವ ಎಂಜಿನಿಯರಿಂಗ್ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಓದಿನ ಜೊತೆಗೆ ಅಗತ್ಯ ಕೌಶಲಗಳನ್ನು ಕಲಿಯಲು ಕೂಡ ಆದ್ಯತೆ ನೀಡಿ. ತಂಡದಲ್ಲಿ ಕೆಲಸ ಮಾಡುವ ಗುಣ ಮೈಗೂಡಿಸಿಕೊಳ್ಳಿ. ಉದ್ಯೋಗಕ್ಕೆ ಸೇರಿದ ನಂತರ ತಂಡದ ಭಾಗವಾಗಿ ಕೆಲಸ ಮಾಡುವ ಅಗತ್ಯತೆ ಎದುರಾಗಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಜನರೊಂದಿಗೆ ಬೆರೆತಾಗ ಮಾತ್ರ ಸಮಾಜದ ನೈಜ ಸಮಸ್ಯೆಗಳನ್ನು ಗುರುತಿಸಲು ಸಾಧ್ಯ ಎಂದು ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಡಾ. ಸಿ.ವಿ. ವೆಂಕಟೇಶ್ ಅವರು ಅಭಿಪ್ರಾಯಪಟ್ಟರು.

ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಮೂರನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನೈಜ ಸಮಸ್ಯೆಗಳನ್ನು ಪರಿಹರಿಸಲು ಎಂಜಿನಿಯರಿಂಗ್ ಜ್ಞಾನವನ್ನು ಅನ್ವಯಿಸಿ. ಎಲ್ಲರ ಜೊತೆ ಬೆರೆಯುವ ಗುಣ ಬೆಳೆಸಿಕೊಳ್ಳಿ. ಎಂಜಿನಿಯರಿಂಗ್ ವೃತ್ತಿಪರ ಕೋರ್ಸ್ ಆಗಿರುವುದರಿಂದ ಪದವಿ ಮುಗಿಸಿ ಹೊರಬರುವ ವೇಳೆಗೆ ವೃತ್ತಿಪರ ಕೌಶಲ ಹೊಂದಿರುವ ವ್ಯಕ್ತಿತ್ವವಾಗಿ ಹೊರಹೊಮ್ಮಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಜಾಗತಿಕ ಮಟ್ಟದಲ್ಲಿ ಮನ್ನಣೆ ಹೊಂದಿರುವ ಎಂಜಿನಿಯರಿಂಗ್ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಓದಿನ ಜೊತೆಗೆ ಅಗತ್ಯ ಕೌಶಲಗಳನ್ನು ಕಲಿಯಲು ಕೂಡ ಆದ್ಯತೆ ನೀಡಿ. ತಂಡದಲ್ಲಿ ಕೆಲಸ ಮಾಡುವ ಗುಣ ಮೈಗೂಡಿಸಿಕೊಳ್ಳಿ. ಉದ್ಯೋಗಕ್ಕೆ ಸೇರಿದ ನಂತರ ತಂಡದ ಭಾಗವಾಗಿ ಕೆಲಸ ಮಾಡುವ ಅಗತ್ಯತೆ ಎದುರಾಗಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಫಲಿತಾಂಶ ಆಧಾರಿತ ಶಿಕ್ಷಣ, ವಿದ್ಯಾರ್ಥಿ ಕೇಂದ್ರಿತವಾಗಿ ಬೋಧನಾ-ಕಲಿಕಾ ಚಟುವಟಿಕೆಗಳನ್ನು ವಿನ್ಯಾಸಗೊಳಿಸುವ ಪರಿಕಲ್ಪನೆಯನ್ನು ಒಳಗೊಂಡಿದೆ. ತಮ್ಮ ಓದಿಗೆ ತಕ್ಕ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಮೈಗೂಡಿಸಲು ಇದರ ಮೂಲಕ ಒತ್ತು ನೀಡಲಾಗಿದೆ ಎಂದು ತಿಳಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆಯುವ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲೂ ವೃತ್ತಿ ಬದುಕು ಕಟ್ಟಿಕೊಳ್ಳಬಹುದು. ಎಂಜಿನಿಯರಿಂಗ್ ಕ್ಷೇತ್ರಕ್ಕೆ ಭೌತಶಾಸ್ತ್ರದ ಮೂಲತತ್ವಗಳ ಕೊಡುಗೆ ಹೆಚ್ಚಿದೆ. ಮೂರು-ನಾಲ್ಕನೇ ಸೆಮಿಸ್ಟರ್‌ನಲ್ಲಿ ಓದುವಾಗ ಭೌತಶಾಸ್ತ್ರದ ಮೂಲನಿಯಮಗಳನ್ನು ಕಲಿಯಲು ಹೆಚ್ಚಿನ ಒತ್ತು ನೀಡಿ ಎಂದರು.

ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಜಿಲ್ ವಣ್ಣನ್ ಅವರು ಮಾತನಾಡಿ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಎಂಟನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡುವ ಅವಕಾಶವಿದೆ. ಈ ವೇಳೆ ಕಲಿಯುವ ಜೊತೆಗೆ ಹಣ ಕೂಡ ಸಂಪಾದಿಸಬಹುದು. ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಓದುತ್ತಿರುವ ಶೇ. ೯೦ಕ್ಕಿಂತ ಹೆಚ್ಚು ಅಂತಿಮ ವರ್ಷದ ವಿದ್ಯಾರ್ಥಿಗಳು ಶಿಷ್ಯವೇತನದೊಂದಿಗೆ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡಲು ಆಯ್ಕೆಯಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಉದ್ಯೋಗ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ವಿಜಯ್ ಕುಮಾರ್ ತಿಲೆ ಅವರು ಮಾತನಾಡಿ, ಸಮಾಜಮುಖಿ ಕೆಲಸಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಸಲುವಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಚಟುವಟಿಕೆ ಪಾಯಿಂಟ್‌ಗಳನ್ನು ಪರಿಚಯಿಸಿದೆ. ನಿಗದಿತ ಸಂಖ್ಯೆಯಲ್ಲಿ ಚಟುವಟಿಕೆ ಪಾಯಿಂಟ್‌ಗಳನ್ನು ಗಳಿಸದಿದ್ದರೆ ಪದವಿ ಪ್ರಮಾಣಪತ್ರ ಪಡೆಯಲು ಅರ್ಹತೆ ದೊರೆಯುವುದಿಲ್ಲ. ಪಾಯಿಂಟ್‌ಗಳನ್ನು ಗಳಿಸಲು ಎಐಸಿಟಿಇ ಸೂಚಿಸಿರುವ ಚಟುವಟಿಕೆಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಕಾರಿ ಎಂದರು.ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. -------

ಫೋಟೊ ೧:

ನಗರದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಓರಿಯಂಟೇಷನ್ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಡಾ. ಸಿ.ವಿ.ವೆಂಕಟೇಶ್ ಅವರು ಉದ್ಘಾಟಿಸಿದರು. ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಜಿಲ್ ವಣ್ಣನ್, ಪ್ರಾಧ್ಯಾಪಕರಾದ ಎಸ್. ಎಲ್.ದಿನೇಶ್ ಹಾಗೂ ಜಿ.ಸಿ.ಗೋಪಾಲಕೃಷ್ಣ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ