ಚಿತ್ರದುರ್ಗ: ಮಹಾವೀರರ ಅರ್ಥ ಮಾಡಿಕೊಂಡರೆ ಮನದ ಮೂಸೆಗೂ ಹಿಂಸೆ ಹತ್ತಿರ ಸುಳಿಯದೆಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಅಭಿಪ್ರಾಯಪಟ್ಟರು.
ಸತ್ಯ ಹೇಳುವುದು, ಪರರನ್ನು ಹಾಗೂ ಸಕಲ ಜೀವಗಳ ಎಡೆಗೆ ಅಹಿಂಸಾ ಭಾವದಿಂದ ನಡೆದುಕೊಳ್ಳುವುದು, ಶುದ್ಧ ಚಾರಿತ್ರ್ಯ ಕಾಪಾಡಿಕೊಳ್ಳುವುದು, ಪರ ವಸ್ತುಗಳನ್ನು ಕದಿಯದಿರುವುದು, ಎಲ್ಲಾ ಭವ ಬಂಧನಗಳಿಂದ ಮುಕ್ತವಾಗಿರಬೇಕು ಎಂಬುದು ಮಹಾವೀರರ ಬೋಧನೆ ತಿರುಳು. ಈ ಬೋಧನೆಗಳು ಸರಳ ಪದಗಳಲ್ಲಿ ಇವೆ. ಇವುಗಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ. ಇದರಿಂದ ಹಿಂಸೆ, ಯುದ್ಧಗಳು ಭೀತಿಯಿಲ್ಲದೆ ಎಲ್ಲರೂ ಪ್ರಗತಿ ಕಾಣಬಹುದು ಎಂದರು.
ಜೈನ ಸಮಾಜದ ಮುಖಂಡ ವಸ್ತಿಮಲ್ ಮಾತನಾಡಿ, ಮಹಾವೀರ ಸರಳ ಬೋಧನೆ ಎಂದರೆ ಜಿಯೋ ಜೀನೇದೋ ಎಂಬುದಾಗಿದೆ. ನೀವು ಬದುಕಿ ಇತರರಿಗೆ ಬದುಕಲು ಬಿಡಿ ಎಂದರ್ಥ. ಕಾಮ, ಕ್ರೋಧ, ಮೋಹ, ಮದ, ಮಾತ್ಸರ್ಯಗಳನ್ನು ಜಯಿಸಿದರೆ ಮುಕ್ತಿ ಪಡೆಯಬಹುದಾಗಿದೆ. ರಾಜ ಮನೆತನದಲ್ಲಿ ಹುಟ್ಟಿದರೂ ವೈಭೋಗ ತೊರೆದು ಸನ್ಯಾಸತ್ವನ್ನು ಮಹಾವೀರರು ಪಡೆದುಕೊಂಡರು. ಇದೇ ಹಾದಿಯಲ್ಲಿ ಇಂದಿಗೂ ಹಲವಾರು ಕೋಟ್ಯಾಧಿಪತಿಗಳು ಎಲ್ಲಾ ಆಸ್ತಿ ಪಾಸ್ತಿಗಳನ್ನ ದಾನ ಮಾಡಿ ಸನ್ಯಾಸ ದೀಕ್ಷೆ ಪಡೆಯುವುದನ್ನು ನೋಡಬಹುದು ಎಂದರು.ಲೋಕಸಭಾ ಸಾರ್ವತ್ರಿಕ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ ಸರಳವಾಗಿ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ನಾಡಗೀತೆ ಪ್ರಸ್ತುತ ಪಡಿಸುವುದರೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ತಹಸೀಲ್ದಾರ್ ಡಾ.ನಾಗವೇಣಿ, ಜೈನ ಸಮುದಾಯದ ಮುಖಂಡರಾದ ಪ್ರೇಮ್‍ಚಂದ್, ಮನ್ಸಿರಾಜ್ ಸೇರಿದಂತೆ ಮತ್ತಿತರರು ಇದ್ದರು.-------
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಭಾಂಗಣದಲ್ಲಿ ಭಾನುವಾರ ನಡೆದ ಮಹಾವೀರ ಜಯಂತಿಯಲ್ಲಿ ಉಪ ವಿಭಾಗಾಧಿಕಾರಿ ಕಾರ್ತಿಕ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.- 21 ಸಿಟಿಡಿ -1