ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್‌ನವರು ಕರಾಳ ದಿನಾಚರಣೆ ಸಂಘಟಿಸುವುದು ತಪ್ಪು. ಬೇಕಿದ್ದರೆ ಅವರು ಮಹಾರಾಷ್ಟ್ರದಲ್ಲಿ ಕರಾಳ ದಿನ ಆಚರಿಸಲಿ. ತಪ್ಪು ಯಾರೇ ಮಾಡಿದರೂ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ ಆಗ್ರಹಿಸಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾಳ ದಿನಾಚರಣೆಗೆ ಮರಾಠಿ ಎಲ್ಲ ಭಾಷಿಕರ ಬೆಂಬಲ ಇಲ್ಲ. ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಕನ್ನಡ ಮತ್ತು ಮರಾಠಿ ಎರಡೂ ಭಾರತೀಯ ಭಾಷೆಗಳು. ಇದನ್ನು ಸಹಿಸದ ಎಂಇಎಸ್‌ನವರು ಕರಾಳ ದಿನ ಆಚರಿಸುತ್ತಿದ್ದಾರೆ. ಇಲ್ಲಿ ಕರಾಳ ದಿನ ಆಚರಿಸುವುದು ಬೇಡ. ಬೇಕಿದ್ದರೆ ಅವರು ಮಹಾರಾಷ್ಟ್ರ ರಾಜ್ಯದಲ್ಲಿ ಕರಾಳ ದಿನಾಚರಣೆ ಮಾಡಲಿ ಎಂದು ಹೇಳಿದರು.
ಮರಾಠಿ ಭಾಷಿಕರು ಕೂಡ ರಾಜ್ಯೋತ್ಸವದಲ್ಲಿ ಭಾಗಿಯಾಗಲಿ, ಭಾಷಾ ವಿವಾದದಿಂದ ಬೆಳಗಾವಿಯ ಹೆಸರು ಕೆಡುತ್ತಿದೆ. ಅಲ್ಲದೇ ಬೆಳಗಾವಿ ಅಭಿವೃದ್ಧಿ ಕುಂಠಿತವಾಗುತ್ತಿದೆ. ನ್ಯಾಯಾಲಯದಲ್ಲಿ ಗಡಿವಿವಾದದ ವಿಚಾರಣೆ ಬಾಕಿಯಿದೆ. ಕೆಲ ಜನರ ಆಚರಣೆಯಿಂದ ಇಡೀ ಸಮಾಜಕ್ಕೆ ತೊಂದರೆ ಬೇಡ ಎಂದು ಕಿವಿಮಾತು ಹೇಳಿದರು.ರಾಜ್ಯದಲ್ಲಿ ತುಘಲಕ್ ಸರ್ಕಾರ:
ಆರ್‌ಎಸ್‌ಎಸ್ ಸಂಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಸಂಘಟನೆಗೆ ನಿರ್ಬಂಧ ಹೇರಿರುವುದು, ಕನ್ಹೇರಿ ಮಠದ ಸ್ವಾಮೀಜಿಗೆ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧ ಹೇರಲಾಗಿದೆ. ಬೆಂಗಳೂರು, ಹುಬ್ಬಳ್ಳಿ ಆರ್‌ಎಸ್‌ಎಸ್ ಕಚೇರಿಗಳ ಮೇಲೆ ಕಾಂಗ್ರೆಸ್ಸಿಗರು ಮುತ್ತಿಗೆ ಹಾಕಿರುವುದು ನೋಡಿದರೆ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಶುರುವಾಗಿದೆ ಎನಿಸುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ ಆರೋಪಿಸಿದರು.ಕನ್ಹೇರಿ ಮಠದ ಶ್ರೀಗಳ ಹೇಳಿಕೆಗೆ ಸಂಬಂಧಿಸಿದಂತೆ ಶ್ರೀಗಳ ಭಾಷೆಯೇ ಆ ರೀತಿ ಆಗಿದೆ. ಅವರು ಮಾತನಾಡಿದ್ದು ತಪ್ಪಾಗಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಜಿಲ್ಲಾ ಪ್ರವೇಶ ನಿರ್ಬಂಧಿಸುವುದು ತುಘಲಕ್ ದರ್ಬಾರ್ ಆಗಿದೆ. ಆರ್‌ಎಸ್‌ಎಸ್ ಸಂಘಟನೆ ನಿಷೇಧಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಆರ್‌ಎಸ್‌ಎಸ್‌ಗೆ ಕೈ ಹಚ್ಚಿದರೆ ರಾಜ್ಯ ಸರ್ಕಾರ ನಿರ್ನಾಮವಾಗಲಿದೆ ಎಂದು ಕಿಡಿಕಾರಿದರು.
ಆರ್‌ಎಸ್‌ಎಸ್‌ಗೆ ಯಾವುದೇ ರೀತಿಯ ತೊಂದರೆ ಇಲ್ಲ. ದೇಶದ ಜನತೆಯಲ್ಲಿ ಆರ್‌ಎಸ್‌ಎಸ್ ಬಗ್ಗೆ ಜನಪ್ರಿಯತೆ ಹೆಚ್ಚಾಗುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆಗೆ ಇದನ್ನು ಸಹಿಸಲಾಗುತ್ತಿಲ್ಲ. ಹಾಗಾಗಿ ಈ ಸಂಘಟನೆ ನಿಷೇಧಿಸುವಂತೆ ಹೇಳುತ್ತಿರುವ ಈತ ಇನ್ ಮ್ಯಾಚುವರ್ಡ್ ಆಗಿದ್ದಾನೆ. ಆತನ ಮಾತು ಕೇಳಿದರೆ, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಹಾಳಾಗುತ್ತದೆ. ಇದೆಲ್ಲವೂ ಕಾಂಗ್ರೆಸ್ ಸರ್ಕಾರದ ಅಂತ್ಯ ಕಾಲ ಬಂದಂತಿದೆ. ಆರ್‌ಎಸ್‌ಎಸ್ ಸಂವಿಧಾನದಡಿ ಕೆಲಸ ಮಾಡುವ ಸಂಸ್ಥೆಯಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ಜಿರಲಿ, ಸುಭಾಷ ಪಾಟೀಲ, ಮುರುಘೇಂದ್ರಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.