ಕನ್ನಡಪ್ರಭ ವಾರ್ತೆ ಹೊಸದುರ್ಗ
ದುಡ್ಡು ದುಡಿಯಲು ವೈದ್ಯಗಿರಿ ಮಾಡುವುದಾದರೆ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ನಿಮ್ಮ ಖಾಸಗಿ ಕ್ಲಿನಿಕ್ ಗಳಲ್ಲಿಯೇ ಇರೀ. ನಿಮಗೆ ಡಿ.20ರವರೆಗೆ ಗಡುವು ನೀಡುತ್ತೇನೆ ಯಾರು ಸರಿಯಾಗಿ ಕೆಲಸ ಮಾಡುತ್ತೀರಾ ಅವರು ಮಾತ್ರ ಇಲ್ಲಿರಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ವ್ಯದ್ಯರ ವಿರುದ್ಧ ತೀವ್ರವಾಗಿ ಕಿಡಿ ಕಾರಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಆರೋಗ್ಯ ಇಲಾಕೆಗೆ ಕೋಟ್ಯಂತರ ಹಣ ಖರ್ಚು ಮಾಡುತ್ತಿದೆ ಆದರೆ ಅದರ ಉಪಯೋಗ ಬಡರೋಗಿಗಳಿಗೆ ಸಿಗುತ್ತಿಲ್ಲ. ಆಸ್ಪತ್ರೆಯಲ್ಲಿ ಖರ್ಚಾಗುವುದು ತಪ್ಪುತ್ತಿಲ್ಲ ಇತ್ತ ಬಡ ರೋಗಿಗಳಿಂದ ತಮ್ಮ ಖಾಸಗಿ ಕ್ಲಿನಿಕ್‌ಗಳಲ್ಲಿ ಹಣ ವಸೂಲಿಯೂ ತಪ್ಪುತ್ತಿಲ್ಲ ಈಗಾದರೆ ಹೇಗೆ ಎಂದು ಸಭೆಯಲ್ಲಿದ್ದ ವ್ಯದ್ಯರುಗಳನ್ನು ಪ್ರಶ್ನಿಸಿದರು.
ಸಾರ್ವಜನಿಕರಿಂದ ಸರ್ಕಾರಿ ಆಸ್ಪತ್ರೆ ವ್ಯದ್ಯರ ಬಗ್ಗೆ ಸಾಕಷ್ಟು ದೂರು ಬಂದರೂ ಇವತ್ತಿಲ್ಲ ನಾಳೆ ಸರಿಯಾಗುತ್ತೀರಾ ಎಂದು ಸುಮ್ಮನಿದ್ದೆ ಆದರೆ ನೀವುಗಳು ಸರಿಯಾದಂತೆ ಕಾಣುತ್ತಿಲ್ಲ ನಿಮಗೆ ದುಡಿಮೆಯೇ ಮುಖ್ಯವಾಗಿದೆ. ನಿಮ್ಮ ಈ ಬೇಜವಬ್ದಾರಿ ವರ್ತನೆಯ ಬಗ್ಗೆ ಸಚಿವಾಲಯದ ತನಕ ದೂರುಗಳು ಹೋಗಿವೆ. ಇನ್ನು ಸುಮ್ಮನಿರಲು ಸಾಧ್ಯವಿಲ್ಲ. ಇಲ್ಲಿ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ರಾಜೀನಾಮೆ ನೀಡಿ. ಬೇರೆ ವೈದ್ಯರು ಬರುವುದು ಒಮದೆರೆಡು ದಿನ ತಡವಾಗಬಹುದು ಆದರೂ ಪರವಾಗಿಲ್ಲ ಬೇರೆ ವೈದ್ಯರನ್ನು ಹಾಕಿಸಿಕೊಂಡು ಬರುತ್ತೇನೆ ಎಂದು ತೀಕ್ಷ್ಣವಾಗಿ ತಿಳಿಸಿದರು.ಸರ್ಕಾರಿ ಆಸ್ಪತ್ರೆಯಲ್ಲಿಯೇ ಲ್ಯಾಬ್ ಇದೆ, ರಕ್ತ ಪರೀಕ್ಷಾ ಘಟಕ ವಿದೆಯಾದರೂ ಖಾಸಗಿ ಲ್ಯಾಬ್‌ಗಳಿಗೆ ಚೀಟಿ ಬರೆಯಲಾಗುತ್ತಿದೆ ಅಲ್ಲದೆ ಔಷದಿಗಳ ಚೀಟಿಗಳನ್ನು ಖಾಸಗಿ ಮೆಡಿಕಲ್ ಶಾಪ್‌ಗಳಿಗೆ ಬರೆಯಲಾಗುತ್ತಿದೆ ಯಾಕೇ ಇಲ್ಲಿ ಲ್ಯಾಬ್ ಸರಿಯಿಲ್ಲವೆ. ಅಥವಾ ಸಿಬ್ಬಂದಿಯ ಕೊರತೆಯೇ ಎಂದು ಆಡಳಿತ ವ್ಯದ್ಯಾಧಿಕಾರಿಗಳನ್ನು ಪ್ರಶ್ನಿಸಿದ ಶಾಸಕರು ನಿಮ್ಮ ಬೇಜವಬ್ದಾರಿತನದಿಂದ ಸರ್ಕಾರದ ಯೋಜನೆಗಳು ಜನರಿಗೆ ಸಿಗದಂತಾಗುತ್ತಿವೆ ಎಂದು ಬೇಸರ ವ್ಯಕ್ತ ಪಡಿಸಿದರು. ಸಭೆಯಲ್ಲಿ ಆರೋಗ್ಯ ರಕ್ಷ ಸಮಿತಿಯ ಸದಸ್ಯರು ಹಾಗೂ ಆರೋಗ್ಯ ಇಲಾಕೆ ಸಿಬ್ಬಂದಿ ಹಾಜರಿದ್ದರು.