ಮಾರ್ಕೆಟ್‌ ಫುಟ್ಪಾತ್‌ ಮಳಿಗೆಗಳಿಂದ ಅಕ್ರಮ ಬಾಡಿಗೆ ವಸೂಲಿ!

KannadaprabhaNewsNetwork |  
Published : Aug 07, 2026, 02:00 AM IST
KR Market

ಸಾರಾಂಶ

ಕೆ.ಆರ್.ಮಾರುಕಟ್ಟೆ ಹಾಗೂ ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್, ಕೋಟೆ ಕಾಂಪೌಂಡ್ ಹೊಂದಿಕೊಂಡಂತಿರುವ ಪಾದಚಾರಿ ಮಾರ್ಗ, ಫ್ಲೈಓವರ್ ಕೆಳಭಾಗದಲ್ಲಿನ ಪಾಲಿಕೆಗೆ ಸೇರಿದ ಜಾಗದಲ್ಲಿನ ಅಕ್ರಮ ಮಳಿಗೆಗಳಿಂದ ಕೆಲವು ಪ್ರಭಾವಿಗಳು ಮಾಸಿಕ ಲಕ್ಷಾಂತರ ರು. ಬಾಡಿಗೆ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

 ಬೆಂಗಳೂರು :  ಕೆ.ಆರ್.ಮಾರುಕಟ್ಟೆ ಹಾಗೂ ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್, ಕೋಟೆ ಕಾಂಪೌಂಡ್ ಹೊಂದಿಕೊಂಡಂತಿರುವ ಪಾದಚಾರಿ ಮಾರ್ಗ, ಫ್ಲೈಓವರ್ ಕೆಳಭಾಗದಲ್ಲಿನ ಪಾಲಿಕೆಗೆ ಸೇರಿದ ಜಾಗದಲ್ಲಿನ ಅಕ್ರಮ ಮಳಿಗೆಗಳಿಂದ ಕೆಲವು ಪ್ರಭಾವಿಗಳು ಮಾಸಿಕ ಲಕ್ಷಾಂತರ ರು. ಬಾಡಿಗೆ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಕೆ.ಆರ್.ಮಾರುಕಟ್ಟೆ ಸುತ್ತಲಿನ ಪ್ರದೇಶಗಳಲ್ಲಿ ಪಾಲಿಕೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಸುಮಾರು 250 ಮಳಿಗೆಗಳನ್ನು ಕಳೆದ ಎರಡ್ಮೂರು ದಿನಗಳಲ್ಲಿ ಜೆಸಿಬಿ ಬಳಸಿ ತೆರವುಗೊಳಿಸಲಾಗಿದೆ. ಆದರೆ, ಇಲ್ಲಿನ ಅನೇಕ ಮಳಿಗೆಗಳಿಂದ ಸ್ಥಳೀಯ ಪ್ರಭಾವಿಗಳು ಪ್ರತಿ ತಿಂಗಳು ಸುಮಾರು 20 ರಿಂದ 50 ಸಾವಿರ ರು. ಬಾಡಿಗೆ ವಸೂಲಿ ಮಾಡುತ್ತಿದ್ದರು ಎಂದು ಗೊತ್ತಾಗಿದೆ.

ಅನೇಕ ವರ್ಷಗಳಿಂದ ಪಾದಚಾರಿ ಮಾರ್ಗ ಮತ್ತು ಫ್ಲೈಓವರ್ ಅಕ್ಕ ಪಕ್ಕದಲ್ಲಿನ ಜಾಗವನ್ನು ಒತ್ತುವರಿ ಮಾಡಿಕೊಂಡು ಸಣ್ಣ ಮಳಿಗೆಗಳನ್ನು ನಿರ್ಮಿಸಿ ಅವುಗಳನ್ನು ಬಾಡಿಗೆಗೆ ನೀಡಲಾಗಿದೆ. ಬಟ್ಟೆ, ಬ್ಯಾಗ್, ಸ್ಟೇಷನರಿ, ಆಟಿಕೆ, ತಿಂಡಿ ತಿನಿಸು, ಚಪ್ಪಲಿ, ಮೊಬೈಲ್ ಬಿಡಿ ಭಾಗಗಳು, ಹಣ್ಣು-ತರಕಾರಿ ಸೇರಿದಂತೆ ವಿವಿಧ ಮಾದರಿಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳಿಗೆ ಯಾವುದೇ ಅಧಿಕೃತ ಟ್ರೇಡ್ ಲೈಸನ್ಸ್ ಇರಲಿಲ್ಲ. ಪಾಲಿಕೆಗೆ ಅಧಿಕೃತವಾಗಿ ಯಾವುದೇ ತೆರಿಗೆ ಪಾವತಿಸುತ್ತಿರಲಿಲ್ಲ. ನೂರಾರು ಮಳಿಗೆಗಳಿಂದ ಕೋಟ್ಯಂತರ ರು. ವಹಿವಾಟು ಆಗುತ್ತಿತ್ತು. ಕೆಲವು ಮಳಿಗೆಗಳನ್ನು ಸ್ಥಳೀಯ ಪ್ರಭಾವಿಗಳೇ ನಡೆಸುತ್ತಿದ್ದರು. ಅಕ್ರಮವಾಗಿ ಲಕ್ಷಾಂತರ ಹಣ ಗಳಿಸುತ್ತಿದ್ದರು ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಸಾರ್ವಜನಿಕ ಪ್ರಶಂಸೆ:

ಕೆ.ಆರ್. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ ಕಾಂಪೌಂಡ್ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಫುಟ್‌ಪಾತ್ ಒತ್ತುವರಿ ಕಾರ್ಯಾಚರಣೆಯನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ಕೆ.ಆರ್. ಮಾರುಕಟ್ಟೆ ಬಸ್ ನಿಲ್ದಾಣ, ಮೆಟ್ರೋ ನಿಲ್ದಾಣ, ವಿಕ್ಟೋರಿಯಾ ಆಸ್ಪತ್ರೆಯ ಗೇಟ್‌ನಿಂದ ಮೈಸೂರು ರಸ್ತೆಯ ಕಡೆಗೆ ಓಡಾಡಲು ಆಗದಂತೆ ಸಂಪೂರ್ಣವಾಗಿ ಅಂಗಡಿ ಮುಂಗಟ್ಟುಗಳು ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡಿದ್ದವು. ಅಲ್ಲದೇ ವಸ್ತುಗಳನ್ನು ತಲೆಗೆ ತಾಕುವಂತೆ ನೇತು ಹಾಕುತ್ತಿದ್ದರು. ಜನರು ಪಾದಚಾರಿ ಮಾರ್ಗ ಬಿಟ್ಟು ಭಾರಿ ದಟ್ಟಣೆಯ ರಸ್ತೆಯಲ್ಲಿ ಓಡಾಡಬೇಕಾಗಿತ್ತು. ಇದರಿಂದ ಆಂಬ್ಯುಲೆನ್ಸ್‌ಗಳ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಈಗ ಫುಟ್‌ಪಾತ್‌ಗಳಲ್ಲಿ ಓಡಾಡುವಂತಾಗಿದೆ ಎಂದು ಅನೇಕರು ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ‘ಇಷ್ಟೆಲ್ಲಾ ಜಾಗ ಪಾಲಿಕೆಗೆ ಸೇರಿದ್ದು ಮತ್ತು ಅಕ್ರಮವಾಗಿ ಮಳಿಗೆ ನಡೆಸಲಾಗುತ್ತಿತ್ತು ಎಂಬುದು ಈಗಲೇ ಗೊತ್ತಾಗಿದ್ದು’ ಎಂದು ಲೋಕೇಶ್ ಎಂಬುವರು ಪ್ರತಿಕ್ರಿಯಿಸಿದ್ದಾರೆ. ಕೆ.ಆರ್. ಮಾರುಕಟ್ಟೆಯಿಂದ ಕೆ.ಜಿ ರಸ್ತೆವರೆಗಿನ ಅವಿನ್ಯೂ ರಸ್ತೆಯ ಪಾದಚಾರಿ ಮಾರ್ಗ ಸಂಪೂರ್ಣವಾಗಿ ಒತ್ತುವರಿಯಾಗಿದೆ. ಅದನ್ನು ಮೊದಲು ತೆರವುಗೊಳಿಸಿ ಎಂದು ಅನೇಕರು ಆಗ್ರಹಿಸಿದ್ದಾರೆ.

ಅಕ್ರಮ ಬಾಡಿಗೆ ದಂಧೆಗೆ ಕಡಿವಾಣ: ಅಧಿಕಾರಿ

ಅಕ್ರಮ ಬಾಡಿಗೆ ದಂಧೆ ನಡೆಯುತ್ತಿರುವುದನ್ನು ‘ಕನ್ನಡಪ್ರಭಕ್ಕೆ’ ಪತ್ರಿಕೆಗೆ ಖಚಿತಪಡಿಸಿರುವ ಕೇಂದ್ರ ನಗರ ಪಾಲಿಕೆಯ ಅಧಿಕಾರಿಯೊಬ್ಬರು, ಅಕ್ರಮವಾಗಿಬಾಡಿಗೆ ಸಂಗ್ರಹಿಸುತ್ತಿರುವ ಮಾಹಿತಿ, ದೂರುಗಳು ಇವೆ. ಒತ್ತುವರಿ ತೆರವು ಕಾರ್ಯಾಚರಣೆಯಿಂದ ಈ ಎಲ್ಲ ಅಕ್ರಮಗಳು ಬಂದ್ ಆಗುತ್ತವೆ. ಇದರಿಂದ ಪಾಲಿಕೆ ಸ್ವತ್ತನ್ನು ಸಾರ್ವಜನಿಕರ ಬಳಕೆ ಒದಗಿಸಿದಂತಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಮರ್ಪಕ ವಿದ್ಯುತ್‌, ಬರ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಮಕ್ಕಳ ಮನೋವಿಕಾಸಕ್ಕೆ ಸ್ಪರ್ಧೆಗಳು ಅವಶ್ಯಕ: ಭೀಮಸೇನ್ ಆಚಾರ್ಯ