ಧಾರವಾಡ-ಗದಗ ಗಡಿ ಭಾಗದಲ್ಲಿ ಅಕ್ರಮ ಡೀಸೆಲ್ ದಂಧೆ!

KannadaprabhaNewsNetwork |  
Published : Sep 03, 2026, 02:15 AM IST
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹಳ್ಳಿಯೊಂದರಲ್ಲಿ ಟ್ಯಾಂಕರ್‌ ಮೂಲಕ ಡೀಸೆಲ್‌ ಮಾರಾಟ ಮಾಡುತ್ತಿರುವುದು. | Kannada Prabha

ಸಾರಾಂಶ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ವ್ಯಾಪ್ತಿಯ ಹಳ್ಳಿಗಳಿಗೆ ಎರಡ್ಮೂರು ದಿನಕ್ಕೊಮ್ಮೆ ಟ್ಯಾಂಕರ್‌ಗಳು ಆಗಮಿಸುತ್ತವೆ. ಶಿರಹಟ್ಟಿ ತಾಲೂಕಿನ ಮಾಗಡಿಯಿಂದ ಇಂಧನ ತರುತ್ತೇವೆ ಎಂದು ಟ್ಯಾಂಕರ್‌ ಚಾಲಕರು, ಯಾವ ತೈಲ ಕಂಪನಿಗೆ ಸೇರಿದ್ದು, ಅಧಿಕೃತ ವಿತರಕರು ಯಾರು, ಮಾರಾಟಕ್ಕೆ ಪರವಾನಗಿ ಇದೆಯೇ ಎಂಬುದರ ಬಗ್ಗೆ ಮಾಹಿತಿ ನೀಡುತ್ತಲೇ ಇಲ್ಲ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಪೆಟ್ರೋಲ್‌ ಬಂಕ್‌ಗೆ ತೆರಳಿ ಡೀಸೆಲ್‌ ಖರೀದಿಸಬೇಕಿದ್ದ ಗ್ರಾಮಸ್ಥರ ಮನೆ ಬಾಗಿಲಿಗೇ ಟ್ಯಾಂಕರ್‌ ಬಂದು ಇಂಧನ ಪೂರೈಸುತ್ತಿವೆ. ಗದಗ-ಧಾರವಾಡ ಜಿಲ್ಲೆಗಳ ಗಡಿಭಾಗದ ಹಲವು ಗ್ರಾಮಗಳಲ್ಲಿ ಕಳೆದ 8-10 ತಿಂಗಳಿಂದ ಈ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕು ವ್ಯಾಪ್ತಿಯ ಹಳ್ಳಿಗಳಿಗೆ ಎರಡ್ಮೂರು ದಿನಕ್ಕೊಮ್ಮೆ ಟ್ಯಾಂಕರ್‌ಗಳು ಆಗಮಿಸುತ್ತವೆ. ಶಿರಹಟ್ಟಿ ತಾಲೂಕಿನ ಮಾಗಡಿಯಿಂದ ಇಂಧನ ತರುತ್ತೇವೆ ಎಂದು ಟ್ಯಾಂಕರ್‌ ಚಾಲಕರು, ಯಾವ ತೈಲ ಕಂಪನಿಗೆ ಸೇರಿದ್ದು, ಅಧಿಕೃತ ವಿತರಕರು ಯಾರು, ಮಾರಾಟಕ್ಕೆ ಪರವಾನಗಿ ಇದೆಯೇ ಎಂಬುದರ ಬಗ್ಗೆ ಮಾಹಿತಿ ನೀಡುತ್ತಲೇ ಇಲ್ಲ.

ಬಂಕ್‌ಗಿಂತ ಕಡಿಮೆ ದರ:

ಮಾರುಕಟ್ಟೆ ದರಕ್ಕಿಂತ ಲೀಟರ್‌ಗೆ ₹ 5ರಿಂದ ₹10ಕ್ಕೆ ಕಡಿಮೆ ಬೆಲೆಗೆ ಡೀಸೆಲ್‌ ದೊರೆಯುತ್ತದೆ ಎಂಬ ಕಾರಣಕ್ಕೆ ರೈತರು ಹಾಗೂ ಕೃಷಿ ವಾಹನಗಳ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ. ಕೆಲವರು ಒಮ್ಮೆಗೆ 100ರಿಂದ 200 ಲೀಟರ್‌ ವರೆಗೆ ಪಡೆಯುತ್ತಿದ್ದಾರೆ. ಮನೆ ಮುಂದೆಯೇ ಇಂಧನ ದೊರೆಯುವುದರಿಂದ ಗ್ರಾಹಕರಿಗೂ ಅನುಕೂಲವಾಗಿದೆ. ಆದರೆ, ಕಡಿಮೆ ದರದಲ್ಲಿ ಇಂಧನ ಮಾರಾಟ ಆಗುತ್ತಿರುವುದರ ಮೂಲವೇನು ಎಂಬುದು ಪ್ರಶ್ನೆಯಾಗಿದೆ. ಟ್ಯಾಂಕರ್‌ಗಳಲ್ಲಿ ಕಂಪನಿಯ ಹೆಸರು, ಅಧಿಕೃತ ಮಾರಾಟದ ವಿವರಗಳು ಕಾಣಿಸುವುದಿಲ್ಲ. ಖರೀದಿದಾರರಿಗೆ ಬಿಲ್ ನೀಡಲಾಗುತ್ತಿದೆಯೇ ಎಂಬುದಕ್ಕೂ ಸ್ಪಷ್ಟತೆ ಇಲ್ಲ.

ಗುಣಮಟ್ಟದ ಆತಂಕ:

ಅಧಿಕೃತ ಮಾರಾಟ ಜಾಲದ ಹೊರಗೆ ಡೀಸೆಲ್‌ ಪೂರೈಕೆ ಆಗುತ್ತಿರುವುದರಿಂದ ಗುಣಮಟ್ಟದ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ. ಇಂಧನದಲ್ಲಿ ಇತರೆ ದ್ರವ್ಯಗಳ ಮಿಶ್ರಣವಾಗಿದೆಯೇ ಎಂಬುದನ್ನು ಅಧಿಕಾರಿಗಳು ಮಾದರಿ ಸಂಗ್ರಹಿಸಿ ಪರೀಕ್ಷಿಸಬೇಕಿದೆ. ಕಳಪೆ ಗುಣಮಟ್ಟದಿಂದ ವಾಹನಗಳಿಗೆ ಹಾನಿಯಾದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಎದುರಾಗಿದೆ. ಜತೆಗೆ, ವಸತಿ ಪ್ರದೇಶಗಳಲ್ಲಿಯೇ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಟ್ಯಾಂಕರ್‌ನಿಂದ ನೇರವಾಗಿ ಇಂಧನ ಮಾರಾಟ ಮಾಡಲಾಗುತ್ತಿದೆ. ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರೆಂಬುದು ಯಕ್ಷಪ್ರಶ್ನೆಯಾಗಿದೆ.

ಎಲ್ಲೆಲ್ಲಿ ಮಾರಾಟ?:

ಗದಗ-ಧಾರವಾಡ ಜಿಲ್ಲೆಗಳ ಗಡಿಭಾಗದ ಹಳ್ಳಿಗಳಾದ ಯಳವತ್ತಿ, ಯತ್ನಳ್ಳಿ, ಮಾಡೊಳ್ಳಿ, ಮಾಗಡಿ, ಸಂಶಿ, ಹಿರೇಗುಂಜಾಳ ಸಮೀಪ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ರಾಜಾರೋಷವಾಗಿ ಇಂತಹ ವಹಿವಾಟು ನಡೆಯುತ್ತಿದೆ. ಹಲವು ಬಾರಿ ಗ್ರಾಮಸ್ಥರು ಟ್ಯಾಂಕರ್‌ ಮಾಲಿಕರಿಗೆ ಎಲ್ಲಿಂದ ಇಂಧನ ತರುತ್ತೀರಿ ಎಂದು ಪ್ರಶ್ನಿಸಿದರೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿಯಿಂದ ತರುತ್ತೇವೆ ಎನ್ನುತ್ತಾರೆ.

ಗದಗ-ಧಾರವಾಡ ಗಡಿ ಪ್ರದೇಶದ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿರುವುದರಿಂದ ಅಧಿಕಾರಿಗಳ ವ್ಯಾಪ್ತಿಯ ವಿಚಾರದಲ್ಲಿ ಗೊಂದಲವಿದ್ದರೂ, ಸಂಬಂಧಿಸಿದ ಇಲಾಖೆಗಳು ಜಂಟಿಯಾಗಿ ಪರಿಶೀಲನೆ ನಡೆಸಬೇಕಿದೆ. ಜತೆಗೆ ಟ್ಯಾಂಕರ್‌ಗಳ ಮಾಲೀಕತ್ವ, ಇಂಧನದ ಮೂಲ, ಸಾಗಣೆ ದಾಖಲೆ, ಮಾರಾಟದ ಅನುಮತಿ ಹಾಗೂ ಗುಣಮಟ್ಟ ಪರಿಶೀಲಿಸಿ, ನಿಯಮ ಉಲ್ಲಂಘನೆಯಾಗಿದ್ದರೆ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.ಗಡಿ ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ಡೀಸೆಲ್‌ ಮಾರಾಟವಾಗುತ್ತಿರುವ ಕುರಿತು ಮಾಹಿತಿ ಇಲ್ಲ. ಕೂಡಲೇ ಪರಿಶೀಲಿಸಿ, ನಿಯಮ ಉಲ್ಲಂಘನೆ ಕಂಡುಬಂದರೆ ಕ್ರಮಕೈಗೊಳ್ಳಲಾಗುವುದು.

ಟಿ.ಕೆ. ರಾಥೋಡ, ಲಕ್ಷ್ಮೇಶ್ವರ ಠಾಣೆ ಪ್ರಭಾರಿ ಪಿಎಸ್‌ಐ, ಶರಣಪ್ಪ ಸಂಗಳದ, ಕುಂದಗೋಳ ಠಾಣೆ ಪಿಎಸ್‌ಐಬಂಕ್‌ಗಿಂತ ಲೀಟರ್‌ಗೆ ₹5ರಿಂದ ₹ 10 ಕಡಿಮೆ ಬೆಲೆಗೆ ಮನೆ ಮುಂದೆಯೇ ಡೀಸೆಲ್‌ ದೊರೆಯುತ್ತಿರುವುದರಿಂದ ನಾವು ಇಲ್ಲಿಯೇ ಖರೀದಿಸುತ್ತೇವೆ. ಆದರೆ, ನಮಗೆ ಅವರು ಯಾವ ಕಂಪನಿಯ ಇಂಧನ ನೀಡುತ್ತಿದ್ದಾರೆ ಎಂಬುದು ತಿಳಿದಿಲ್ಲ.

ಯತ್ನಳ್ಳಿ ಗ್ರಾಮಸ್ಥರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ನಿಯಮ ತಿದ್ದುಪಡಿ ಕೈಬಿಡಲು ಆಗ್ರಹ
ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಕ್ರೀಡೆ ಪೂರಕ: ಸುನೀಲ ಮಹಾಂತಶೆಟ್ಟರ