ಕನ್ನಡಪ್ರಭ ವಾರ್ತೆ ಮಂಡ್ಯ
ಖಾಸಗಿ ವ್ಯಕ್ತಿ ನಿತಿನ್ ಪ್ರೇಮಾನಂದ ಮಹಾಲೆ, ಸರ್ವೇ ಸೂಪರ್‌ವೈಸರ್ ಯೋಗರಾಜ್, ಭೂಮಾಪಕರಾದ ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ಸಿ. ನೇಶಾ ಸಾರಿಕ ಮಲ್ಲಿ ಬಂಧಿತ ಆರೋಪಿಗಳು. ಎಡಿಎಲ್‌ಆರ್ ಮಹಮದ್ ಹುಸೇನ್ ತಲೆಮರೆಸಿಕೊಂಡಿದ್ದಾರೆ. ಇವರ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ ೬೧(೨), ೨೦೪, ೩೧೬ (೫), ೩೧೮ (೩), ೩೩೫, ೩೩೬ (೩), ೩೪೦ (೨), ೩೪೧, ೧೯೦ ಬಿಎನ್‌ಎಸ್-೨೦೨೩ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.
ಶ್ರೀರಂಗಪಟ್ಟಣ ತಹಸೀಲ್ದಾರ್ ಚೇತನ ಯಾದವ್, ಮಹದೇವಪುರ ಗ್ರಾಪಂ ಪಿಡಿಒ ಜಿ.ಆರ್.ನಾಗೇಂದ್ರ, ಸಹಾಯಕ ಭೂ ದಾಖಲೆಗಳ ನಿರ್ದೇಶಕ ಮಹಮದ್ ಹುಸೇನ್, ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಅವರುಗಳ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.ನಿತಿನ್ ಪ್ರೇಮಾನಂದ ಮಹಾಲೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸೋನಾರಕೇರಿ ಗ್ರಾಮದವನು. ಎಡಿಎಲ್‌ಆರ್ ಮಹಮದ್ ಹುಸೇನ್ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಗ್ರಾಮದವರು. ಹುಸೇನ್ ಈ ಹಿಂದೆ ಕರ್ತವ್ಯನಿರ್ವಹಿಸಿದ ಸಕಲೇಶಪುರ, ಹುಣಸೂರಿನ ಎಡಿಎಲ್‌ಆರ್ ಕಚೇರಿಗಳಲ್ಲಿ ನಿತಿನ್ ಪ್ರೇಮಾನಂದ ಮಹಾಲೆ ಎಂಬ ಖಾಸಗಿ ವ್ಯಕ್ತಿಯನ್ನು ಹೊರಗುತ್ತಿಗೆ ನೌಕರನ ಸೋಗಿನಲ್ಲಿ ಕಚೇರಿಯಲ್ಲಿ ಕರ್ತವ್ಯಕ್ಕೆ ನಿರ್ವಹಿಸಿಕೊಂಡಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ.
ಮೈಸೂರಿನ ಶ್ರೀ ಶಿವರಾತ್ರೀಶ್ವರ ನಗರದ ಏಳನೇ ಕ್ರಾಸ್‌ನಲ್ಲಿ ಇವರಿಬ್ಬರೂ ಒಂದೇ ಮನೆಯಲ್ಲಿ ವಾಸವಾಗಿದ್ದು ಆ ಮನೆಯಲ್ಲಿ ₹೧,೪೦,೨೦೦ ನಗದು ಹಣ ದೊರಕಿದ್ದು, ಹಣದ ಬಗ್ಗೆ ಸ್ಪಷ್ಟನೆ ನೀಡದ ಹಿನ್ನೆಲೆಯಲ್ಲಿ ವಶಪಡಿಸಿಕೊಂಡಿದ್ದಾರೆ. ನಿತಿನ್ ಪ್ರೇಮಾನಂದ ಮಹಾಲೆ ಹೊಂದಿರುವ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರು. ಹಣದ ವಹಿವಾಟು ನಡೆದಿರುವುದು ಕಂಡುಬಂದಿದೆ.
ಅನಧಿಕೃತ ಡಿಜಿಟಲೀಕರಣ:
ರೆವಿನ್ಯೂ, ಸರ್ಕಾರಿ ಇಲಾಖೆಯ ವ್ಯವಹರಣೆಗೆ ಸಂಬಂಧಿಸಿದ ಸರ್ಕಾರಿ ದಾಖಲೆ, ನಮೂನೆಗಳನ್ನು ಬಳಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವುಗಳನ್ನು ಅಸಲಿ ದಾಖಲೆಗಳೆಂದು ಬಳಕೆ ಮಾಡುವ ಉದ್ದೇಶದಿಂದ ನಿತಿನ್ ಪ್ರೇಮಾನಂದ ಮಹಾಲೆ ಹಾಗೂ ಮಹಮದ್ ಹುಸೇನ್ ಅವರು ನಕಲಿ ಸೀಲುಗಳು, ನಕಲಿ ಸಹಿ, ದಾಖಲೆಗಳನ್ನು ಸೃಷ್ಟಿಸಿ ತಮ್ಮ ವಶದಲ್ಲಿಟ್ಟುಕೊಂಡು ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಗೊತ್ತಾಗಿದೆ.
ಮಹಾಲೆ ಸರ್ಕಾರಿ ಸೋಗಿನಲ್ಲಿ ಹುಣಸೂರು ಎಡಿಎಲ್‌ಆರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುವಾಗ ಎಸ್.ಪ್ರಿಯಾ ಎಂಬುವರಿಗೆ ಅವಾಚ್ಯಶಬ್ಧಗಳಿಂದ ಮಾತನಾಡಿ ಹಣ ಕೇಳಿರುವ ಬಗ್ಗೆ ದೂರನ್ನು ಎಡಿಎಲ್‌ಆರ್ ಮಹಮದ್ ಹುಸೇನ್ ಅವರಿಗೆ ನೀಡಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಎಸ್.ಪ್ರಿಯಾ ನೀಡಿರುವ ದೂರಿನಲ್ಲಿ ನಿತಿನ್ ಪ್ರೇಮಾನಂದ ಮಹಾಲೆಯನ್ನು ಲೈಸೆನ್ಸ್ ಸರ್ವೇಯರ್ ಎಂದು ನಮೂದಿಸಿದ್ದು, ಸಾರ್ವಜನಿಕರಿಗೆ ಆ ವ್ಯಕ್ತಿಯನ್ನು ಸರ್ಕಾರಿ ನೌಕರ ಎಂಬಂತೆ ಬಿಂಬಿಸಿರುವುದು ಕಂಡುಬಂದಿದೆ.
ಲೋಕಾಯುಕ್ತ ಡಿವೈಎಸ್ಪಿ ಎಚ್.ಟಿ.ಸುನಿಲ್‌ಕುಮಾರ್, ಪೊಲೀಸ್ ನಿರೀಕ್ಷಕರಾದ ಎಂ.ರವಿಕುಮಾರ್, ಬಿ.ಪಿ.ಬ್ಯಾಟರಾಯಗೌಡ, ಆರ್.ಜಿ.ಲೇಪಾಕ್ಷಮೂರ್ತಿ ಇತರರು ಉಪ ಲೋಕಾಯುಕ್ತ ಬಿ.ವೀರಪ್ಪ ಆದೇಶದಂತೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಸುರೇಶ್‌ಬಾಬು ಮಾರ್ಗದರ್ಶನದಲ್ಲಿ ನಾಲ್ಕು ತಂಡಗಳನ್ನು ರಚಿಸಿಕೊಂಡು ನಾಲ್ಕು ಸ್ಥಳಗಳಲ್ಲಿ ಶೋಧನೆ ನಡೆಸಿದ್ದರು.