ಕಾಡಂಚಿನ ಗ್ರಾಮಕ್ಕೆ ಅಕ್ರಮ ಮದ್ಯದ ಘಾಟಿನ ಸಂಕಷ್ಟ!

KannadaprabhaNewsNetwork | Published : Apr 2, 2025 1:04 AM

ಸಾರಾಂಶ

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಮಹಿಳೆಯರು ಬೇಸತ್ತು ಹೋಗಿದ್ದು, ಮಂಗಳವಾರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಹೋಗಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಬಸವರಾಜ ಹಿರೇಮಠ

ಧಾರವಾಡ: ಪ್ರತಿ ಹಳ್ಳಿ-ಹಳ್ಳಿಗಳಲ್ಲೂ ಈಗ ಅಕ್ರಮವಾಗಿ ಮದ್ಯ ಸಿಗುತ್ತಿರುವುದು ಗೊತ್ತಿರುವ ಸಂಗತಿ. ಈ ಮೊದಲು ಕದ್ದು-ಮುಚ್ಚಿ ಅಕ್ರಮವಾಗಿ ಮಾರಾಟವಾಗುತ್ತಿದ್ದ ಮದ್ಯ, ಈಗ ಕಿರಾಣಿ ಅಂಗಡಿಗಳಲ್ಲೂ ಸರಳ-ಸುಲಭವಾಗಿ ಲಭ್ಯವಾಗುತ್ತಿದೆ. ಹೀಗೆ ಕಾಡಿನಂಚಿನಲ್ಲಿ ಗ್ರಾಮವೊಂದರಲ್ಲಿ ಸಿಗುತ್ತಿರುವ ಅಕ್ರಮ ಮದ್ಯದ ಘಾಟು ಇಡೀ ಗ್ರಾಮಸ್ಥರ ನಿದ್ದೆಗೆಡಿಸಿದೆ.

ಧಾರವಾಡದಿಂದ ಸುಮಾರು 24 ಕಿ.ಮೀ. ದೂರದ ಧಾರವಾಡ-ಹಳಿಯಾಳ ರಸ್ತೆಯ ಕಾಡಿನ ಅಂಚಿನಲ್ಲಿರುವ ಗ್ರಾಮ ಹೊಲ್ತಿಕೋಟಿ. ಮಲೆನಾಡಿನ ಈ ಗ್ರಾಮದ ಜನರು ನಿತ್ಯವೂ ಮೈ ಬಗ್ಗಿಸಿ ದುಡಿದು ಊಟ ಮಾಡಬೇಕು. ಮದ್ಯಕ್ಕಾಗಿ ಅವರು ದೂರದ ಧಾರವಾಡಕ್ಕೆ ಹೋಗಬೇಕಾದ ಅನಿವಾರ್ಯತೆ. ಹೀಗಾಗಿ, ಊರಿನ ಬಹುತೇಕ ಅಂಗಡಿಗಳಲ್ಲಿ ಅಕ್ರಮವಾಗಿ ಸಿಗುತ್ತಿರುವ ಮದ್ಯದಿಂದ ದುಡಿದ ಸಂಪಾದನೆ ಕರಗಿ ಹೋಗುತ್ತಿದೆ.

ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಮಹಿಳೆಯರು ಬೇಸತ್ತು ಹೋಗಿದ್ದು, ಮಂಗಳವಾರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಹೋಗಿ ಅವರನ್ನು ತರಾಟೆಗೆ ತೆಗೆದುಕೊಂಡಿರುವುದು ಹೊಸ ಬೆಳವಣಿಗೆ.

ಪ್ಯಾಕೆಟ್‌ ಆರಿಸೋ ಕೆಲಸ

ಗ್ರಾಮದಲ್ಲಿ ಅಕ್ರಮ ಮದ್ಯದ ಘಾಟು ಎಷ್ಟೆಂದರೆ, ಅಂಗನವಾಡಿ, ಶಾಲೆ, ದೇವಸ್ಥಾನ, ನೀರಿನ ತೊಟ್ಟಿಗಳು ಹೀಗೆ ಎಲ್ಲೆಂದರಲ್ಲಿ ಹರಿದ ಮದ್ಯದ ಪಾಕೆಟುಗಳೇ ರಾರಾಜಿಸುತ್ತಿದ್ದವು. ಗ್ರಾಮದ ಕಿರಾಣಿ ಸೇರಿದಂತೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಕಾರಣ ಮದ್ಯ ಪ್ರಿಯರ ಸಂಖ್ಯೆ ಊರು ತುಂಬಿದೆ. ಗ್ರಾಮದ ಕುಡಿಯುವ ನೀರಿನ ಟ್ಯಾಂಕ್‌ ಬಳಿ ಪ್ಯಾಕೇಟುಗಳನ್ನು ಕತ್ತರಿಸಿ, ಮದ್ಯ ಕುಡಿದು, ಖಾಲಿ ಪ್ಯಾಕೇಟುಗಳನ್ನು ಅಲ್ಲಿಯೇ ಎಸೆದು ಹೋಗುತ್ತಿರುವವರೇ ಹೆಚ್ಚಾಗಿದ್ದಾರೆ. ಇದರಿಂದಾಗಿ ಶಾಲೆಗೆ ಬರುವ ವಿದ್ಯಾರ್ಥಿಗಳು ಹಾಗೂ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅವನ್ನೆಲ್ಲ ಆರಿಸುವುದೇ ದೊಡ್ಡ ಕೆಲಸವಾಗಿದೆ ಎಂದು ಗ್ರಾಮಸ್ಥ ಕರಿಯಪ್ಪ ಬೇಸರ ವ್ಯಕ್ತಪಡಿಸಿದರು.

ಉಸ್ತುವಾರಿ ಸಚಿವರ ಕ್ಷೇತ್ರ

ಮದ್ಯ ಸೇವನೆ ವಿರುದ್ಧ ನಿರಂತರವಾಗಿ ಹರಿಹಾಯುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಕ್ಷೇತ್ರದಲ್ಲಿಯೇ ಈ ಗ್ರಾಮ ಬರುತ್ತಿದ್ದು, ಅಬಕಾರಿ ಇಲಾಖೆ ಇಲ್ಲಿ ವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಅಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳಿಗೆ ಹೋಗಿ ನಾವು ಎಚ್ಚರಿಕೆ ನೀಡಿದರೂ ಅವರು ಕೇಳುತ್ತಿಲ್ಲ, ಹೀಗೆ ಮುಂದುವರೆದರೆ ಅಂಗಡಿಗಳಿಗೆ ಹೊಕ್ಕು ಹೊಡೆದು ಬುದ್ಧಿ ಕಲಿಸಬೇಕಾಗುತ್ತದೆ ಎಂದು ಗ್ರಾಮದ ಮಹಿಳೆಯರು ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡಿದರು.

ಹೊಸ ವ್ಯಸನಿಗಳ ಉದಯ

ಗ್ರಾಮದಲ್ಲಿನ ಕೆಲವು ಯುವಕರು ಮದ್ಯದ ದಾಸರಾಗಿ ಹೋಗಿದ್ದಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಮಕ್ಕಳು ಕೂಡ ಮದ್ಯ ಸೇವನೆಯಲ್ಲಿ ತೊಡಗಿದ್ದಾರೆ. ಇದರಿಂದಾಗಿ ಪಾಲಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಗ್ರಾಮದ ಯುವಕನೊಬ್ಬ ಇದೇ ರೀತಿ ಮದ್ಯದ ದಾಸನಾಗಿದ್ದನು. ಆತನನ್ನು ಉಳಿಸಿಕೊಳ್ಳಲು ಆತನ ತಂದೆ ಬರೋಬ್ಬರಿ ಐದು ಲಕ್ಷ ರೂಪಾಯಿ ಖರ್ಚು ಮಾಡಿಕೊಂಡಿದ್ದರು. ಆತನಿಗೆ ಮತ್ತೆ ಮದ್ಯ ಕೊಡಬೇಡಿ ಎಂದು ವೈದ್ಯರು ಎಚ್ಚರಿಸಿದ್ದರೂ ಅಕ್ರಮವಾಗಿ ಆತನಿಗೆ ಮದ್ಯ ಸಿಗುತ್ತಿದೆ. ಗ್ರಾಮದಲ್ಲಿ ನಿತ್ಯವೂ ಹೊಸ ಹೊಸ ಮದ್ಯವ್ಯಸನಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಅಬಕಾರಿ ಇಲಾಖೆ ಹಾಗೂ ಪೊಲೀಸರು ಅಕ್ರಮ ಮದ್ಯ ಮಾರಾಟಗಾರರಿಂದ ಹಣ ಪಡೆದು ಸುಮ್ಮನಾಗುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Share this article