ಅಕ್ರಮ ಪಡಿತರ ಅಕ್ಕಿ ಸಂಗ್ರಹ: ವರದಿಗೆ ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ

KannadaprabhaNewsNetwork | Published : Mar 25, 2025 12:48 AM

ಸಾರಾಂಶ

ಹಾವೇರಿಯ ಸಚಿನ ಕಬ್ಬೂರ ಎಂಬಾತನ ವಿರುದ್ಧ ಈ ಕುರಿತಂತೆ ದೂರು ದಾಖಲಿಸಲಾಗಿದೆ.

ಹಾವೇರಿ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರ ಕುರಿತು ವರದಿ ಮಾಡಲು ತೆರಳಿದ್ದ ಖಾಸಗಿ ಸುದ್ದಿವಾಹಿನಿಯ ವರದಿಗಾರ ಹಾಗೂ ಕ್ಯಾಮರಾಮನ್‌ಗೆ ವ್ಯಕ್ತಿಯೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ, ಜೀವಬೆದರಿಕೆ ಹಾಕಿರುವ ಘಟನೆ ನಗರದ ಅಕ್ಕಿಪೇಟೆಯಲ್ಲಿ ನಡೆದಿದೆ.

ಹಾವೇರಿಯ ಸಚಿನ ಕಬ್ಬೂರ ಎಂಬಾತನ ವಿರುದ್ಧ ಈ ಕುರಿತಂತೆ ದೂರು ದಾಖಲಿಸಲಾಗಿದೆ. ಘಟನೆಯಲ್ಲಿ ಅಕ್ಕಿಪೇಟೆಯ ಬಸವರಾಜ ಬಂಗಾರಪ್ಪ ಹಂದ್ರಾಳ ಎಂಬವರ ಮನೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು. ವಿಷಯ ತಿಳಿದು ಆಹಾರ ಇಲಾಖೆ ಅಧಿಕಾರಿ ವಿಜಯಕುಮಾರ ಗುಡಗೇರಿ ಭೇಟಿ ನೀಡಿ ಪರಿಶೀಲಿಸಿದ್ದರು.ಆಗ ಆರೋಪಿ ಇದು ಪಡಿತರ ಅಕ್ಕಿ ಎಂದು ಹೇಗೆ ಸಾಬೀತುಪಡಿಸುತ್ತಿರಿ ಎಂದು ಪ್ರಶ್ನಿಸಿದ್ದಾರೆ. ಬಳಿಕ ಪತ್ರಕರ್ತರು ನೀವು ಯಾರು? ಇದರ ಮಾಲೀಕರಾ? ಎಂದು ಆರೋಪಿತರನ್ನು ಪ್ರಶ್ನಿಸಿದಾಗ ನಾನು ಅವರ ಸಂಬಂಧಿಕ ಎಂದು ಹೇಳಿ ತಕ್ಷಣ ಸಿಟ್ಟಿಗೆದ್ದು, ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಹಲ್ಲೆ ನಡೆಸಲು ಮುಂದಾದ ಆರೋಪಿತ, ಘಟನಾ ದೃಶ್ಯಾವಳಿ ಚಿತ್ರೀಕರಿಸುತ್ತಿದ್ದ ಸುಮಾರು ₹3 ಲಕ್ಷ ಮೌಲ್ಯದ ಕ್ಯಾಮೆರಾ ಒಡೆದು ಹಾಳು ಮಾಡಿದ್ದಾನೆ. ನನ್ನ ಬಳಿ ಗನ್ ಇದೆ, ಹೆಚ್ಚಿಗೆ ಮಾತನಾಡಿದರೆ ಸುಟ್ಟು ಬಿಡುತ್ತೇನೆ ಎಂದು ಜೀವಬೆದರಿಕೆ ಹಾಕಿದ್ದಾನೆ ಎಂದು ಅಣ್ಣಪ್ಪ ಬಾರ್ಕಿ ದೂರಿನಲ್ಲಿ ತಿಳಿಸಿದ್ದಾರೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿ ವಶಕ್ಕೆ

ಹಾವೇರಿ: ಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಬಾಡಿಗೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ವ್ಯಕ್ತಿಯ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಾವೇರಿಯ ಯಾಲಕ್ಕಿ ಓಣಿ ನಿವಾಸಿ ಹಾಗೂ ಕಾಳುಕಡಿ ವ್ಯಾಪಾರಸ್ಥ ಬಸವರಾಜ ಹಂದ್ರಾಳ (42) ಎಂಬಾತನ ವಿರುದ್ಧ ದೂರು ದಾಖಲಿಸಲಾಗಿದೆ.

ಆರೋಪಿತ ಪಡಿತರ ಫಲಾನುಭವಿಗಳಿಗೆ ನೀಡಿದ ಅಕ್ಕಿಯನ್ನು ಕಡಿಮೆ ಬೆಲೆಗೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಂಡಿದ್ದ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಆರೋಪಿತರಿಂದ ಸುಮಾರು ₹69,700 ಮೌಲ್ಯದ 2050 ಕೆಜಿ ಪಡಿತರ ಅಕ್ಕಿಯನ್ನು ಹಾಗೂ 40 ಖಾಲಿ ಗೋಣಿ ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಹಾರ ಇಲಾಖೆ ಪ್ರಭಾರ ಆಹಾರ ನಿರೀಕ್ಷಕಿ ಪ್ರಭಾವತಿ ಶಂಕ್ರಿಕೊಪ್ಪ ದೂರು ದಾಖಲಿಸಿದ್ದಾರೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಮಾಧ್ಯಮ ಪ್ರತಿನಿಧಿಗಳ ಮೇಲಿನ ಹಲ್ಲೆಗೆ ಖಂಡನೆ

ಹಾವೇರಿ: ಪಡಿತರ ಅಕ್ಕಿ ಅಕ್ರಮ ದಾಸ್ತಾನಿನ ಮೇಲೆ ಅಧಿಕಾರಿಗಳು ದಾಳಿ ಮಾಡಿದಾಗ ಅದರ ವರದಿಗಾಗಿ ತೆರಳಿದ್ದ ಖಾಸಗಿ ಸುದ್ದಿವಾಹಿನಿಯ ಕ್ಯಾಮೆರಾಮನ್ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಹಾಗೂ ಆರೋಪಿ ಬಂಧನಕ್ಕೆ ಆಗ್ರಹಿಸಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸೋಮವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ವರದಿಗೆ ತೆರಳಿದ್ದ ಮಾಧ್ಯಮದವರ ಮೇಲೆ ಅಕ್ರಮ ದಂಧೆಕೋರರು ಹಲ್ಲೆ ಮಾಡಿದ್ದಾರೆ. ಹಲ್ಲೆಗೈದ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹಾಗೂ ಎಸ್‌ಪಿ ಅಂಶುಕುಮಾರ ಅವರಿಗೆ ಸಂಘದಿಂದ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು. ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾಧ್ಯಕ್ಷ ನಾಗರಾಜ ಕುರವತ್ತೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರೇಶ ಮಡ್ಲೂರ, ಬಸವರಾಜ ಮರಳಿಹಳ್ಳಿ, ಕೇಶವಮೂರ್ತಿ ವಿ.ಬಿ., ಅಣ್ಣಪ್ಪ ಬಾರ್ಕಿ, ಫಕ್ಕೀರಯ್ಯ ಗಣಾಚಾರಿ, ಪವನಕುಮಾರ ಮುಳಗುಂದಮಠ, ಮಾರುತಿ ಬಿ.ಎಂ., ಶಿವಕುಮಾರ ಹುಬ್ಬಳ್ಳಿ, ಕಿರಣ ಮಾಸಣಗಿ, ರಾಜೇಂದ್ರ ರಿತ್ತಿ, ವೀರೇಶ ಬಾರ್ಕಿ, ಪ್ರಶಾಂತ ಮರೆಮ್ಮನವರ, ಶಿವು ಮಡಿವಾಳರ, ಮಂಜುನಾಥ ದಾಸಣ್ಣನವರ, ವಿನಾಯಕ ಹುದ್ದಾರ, ಎಂ.ಡಿ. ಹಣಗಿ, ನಿಂಗಪ್ಪ ಆರೇರ, ರವಿ ಹೂಗಾರ, ಫಕ್ಕೀರಗೌಡ ಪಾಟೀಲ, ನಾಗರಾಜ ಮೈದೂರ, ಶಂಕರ ಕೊಪ್ಪದ, ರಾಜು ಗಾಳೆಮ್ಮನವರ, ನಿಂಗಪ್ಪ ಕಡಪಟ್ಟಿ, ಫಕ್ಕೀರಸ್ವಾಮಿ ಮಟ್ಟೆಣ್ಣನವರ, ವೀರೇಶ ಹ್ಯಾಡ್ಲ, ಮದರಸಾಬ ಮಂಜಲಾಪುರ ಇತರರು ಇದ್ದರು. ತನಿಖೆಗೆ ಉಸ್ತುವಾರಿ ಸಚಿವರ ಸೂಚನೆ

ದೃಶ್ಯ ಮಾಧ್ಯಮದ ಕೆಲವು ಪತ್ರಕರ್ತರ ಮೇಲೆ ನಡೆದ ಹಲ್ಲೆ ಯತ್ನ ಪ್ರಕರಣದ ತನಿಖೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಎಸ್ಪಿಗೆ ನಿರ್ದೇಶನ ನೀಡಿದ್ದಾರೆ.ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ದಾಸ್ತಾನು ಶಂಕೆ ಹಿನ್ನೆಲೆ ದೃಶ್ಯ ಮಾಧ್ಯಮದ ಕೆಲವು ಪತ್ರಕರ್ತರು ವರದಿ ಮಾಡಲು ಸ್ಥಳಕ್ಕೆ ತೆರಳಿದಾಗ ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಅಕ್ಕಿ ದಾಸ್ತಾನಿನ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಕ್ಯಾಮೆರಾಮನ್‌ಗಳ ಮೇಲೂ ಹಲ್ಲೆಗೆ ಯತ್ನಿಸಿ ಅವರ ಕ್ಯಾಮೆರಾವನ್ನು ನಾಶಪಡಿಸಲಾಗಿದೆ ಎಂದು ಗೊತ್ತಾಗಿದೆ. ಈ ಪ್ರಕರಣದ ಆರೋಪಿಗಳ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ನೀಡಿದ್ದಾರೆ.

Share this article