ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಾಂಸ್ಕೃತಿಕ ಸಮಿತಿ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಅದೇಶದಂತೆ ‘ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ’ ಎಂಬ ಧ್ಯೇಯದೊಂದಿಗೆ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಯಿತು.ಈ ಕಾರ್ಯಕ್ರಮದಲ್ಲಿ ಈ ಪ್ರದೇಶದ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ ತೊಡುಗೆ ಹಾಗೂ ಸ್ಥಳೀಯ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿತ್ತು.
ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಜಿಲ್ಲೆ ಸಂಸ್ಕೃತಿಗೆ ಹಾಗೂ ಆಚರಣೆಗಳಿಗೆ ಪ್ರಸಿದ್ಧವಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಆಚಾರ ವಿಚಾರಗಳು ಎಲ್ಲರಿಗೂ ಮಾದರಿ. ಪ್ರಾದೇಶಿಕ ಸಾಂಸ್ಕೃತಿಕ ಪರಂಪರೆ ಹಾಗೂ ಆಚರಣೆಗಳಿಂದ ಜೀವನೋತ್ಸಾಹದ ಜೊತೆಗೆ ಉತ್ತಮ ಸಂಸ್ಕಾರವು ನಮ್ಮದಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿಯ ಪರಿಚಯ ಅವರ ಕುಟುಂಬ ವ್ಯವಸ್ಥೆಯ ಮೂಲಕ ಆಗುತ್ತದೆ. ಇಂತಹ ಜಾನಪದ ಸಾಂಸ್ಕೃತಿಕ ಅಭಿವ್ಯಕ್ತಿಗಳು ನಮ್ಮ ಪರಂಪರೆಯನ್ನು ಸದೃಢವಾಗಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಕಾಲೇಜಿನ ಪ್ರಾಧ್ಯಾಪಕರಾದ ಹಮೀದಾ ಬಾನು ಬೇಗಂ, ಡಾ. ಶ್ರೀಧರ ಭಟ್, ಐಕ್ಯೂಎಸಿ ಸಂಚಾಲಕ ಡಾ. ಮೇವಿ ಮಿರಾಂದ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಸುಷ್ಮಾ ಟಿ., ದೈಹಿಕ ಶಿಕ್ಷಣ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಇದ್ದರು.ಜಾನಪದ ಸಂಭ್ರಮದ ಸಂಘಟಕರು ಹಾಗೂ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ. ಉದಯ ಶೆಟ್ಟಿ ಕೆ. ಸ್ವಾಗತಿಸಿದರು. ಶರಣ್ಯ ಕಾರ್ಯಕ್ರಮ ನಿರೂಪಿಸಿದರು. ನೈನಾ ವಂದಿಸಿದರು. ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ದೇಶೀ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟದಲ್ಲಿ ಭಾಗವಹಿಸಿದರು.