ಹಿರಿಯೂರಿನಲ್ಲಿ ಮಿತಿ ಮೀರಿದ ಅಕ್ರಮ ಮದ್ಯ ಮಾರಾಟ

KannadaprabhaNewsNetwork | Published : Dec 15, 2024 2:00 AM

ಸಾರಾಂಶ

ತಾಲೂಕಿನ ಹಳ್ಳಿಗಳ ಜೊತೆಗೆ ಈಗ ನಗರ ಭಾಗದಲ್ಲೂ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದೆ. ಬಾರುಗಳ ಜೊತೆಗೆ ವಾರ್ಡ್‌ಗಳಲ್ಲೂ ಅಲ್ಲಲ್ಲಿ ಅಂಗಡಿಗಳಲ್ಲಿ ಮದ್ಯ ಮಾರಲಾಗುತ್ತದೆ ಎಂಬುದು ಹಳೆಯ ಸುದ್ದಿಯಾದರೂ ಇತ್ತೀಚಿಗೆ ಅದು ಮಿತಿ ಮೀರಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಹಳ್ಳಿಗಳ ಜೊತೆಗೆ ಈಗ ನಗರ ಭಾಗದಲ್ಲೂ ಅಕ್ರಮ ಮದ್ಯ ಮಾರಾಟ ಮಿತಿ ಮೀರಿದೆ. ಬಾರುಗಳ ಜೊತೆಗೆ ವಾರ್ಡ್‌ಗಳಲ್ಲೂ ಅಲ್ಲಲ್ಲಿ ಅಂಗಡಿಗಳಲ್ಲಿ ಮದ್ಯ ಮಾರಲಾಗುತ್ತದೆ ಎಂಬುದು ಹಳೆಯ ಸುದ್ದಿಯಾದರೂ ಇತ್ತೀಚಿಗೆ ಅದು ಮಿತಿ ಮೀರಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ನಗರದ ಬಹುತೇಕ ವಾರ್ಡ್‌ಗಳಲ್ಲಿ ಅಕ್ರಮವಾಗಿ ಮದ್ಯ ಮಾರುತ್ತಿದ್ದು, ಅವರಿಗೆಲ್ಲ ಬಾರುಗಳಿಂದಲೇ ಮದ್ಯ ಸರಬರಾಜು ಆಗುತ್ತಿದೆ. ತಾಲೂಕಿನ ಸುಮಾರು 50ರಷ್ಟು ಬಾರುಗಳಲ್ಲಿ ಸಮಯ ಪಾಲನೆ ಮಾಡದ, ಸ್ವಚ್ಛತೆ ಇಲ್ಲದ ಬಾರುಗಳ ಸಂಖ್ಯೆಯೇ ಹೆಚ್ಚಿದೆ. ಹಳ್ಳಿಗಳಿಗೆ ಹಾಡಹಗಲೇ ಕೇಸುಗಟ್ಟಲೇ ಅಕ್ರಮ ಮದ್ಯ ಸಾಗಿಸುವವರು, ಡಾಬಾಗಳಿಗೆ, ನಗರದ ವಾರ್ಡ್‌ಗಳಿಗೆ ಅಕ್ರಮವಾಗಿ ಮದ್ಯ ಸಾಗಿಸುವುದನ್ನೇ ಕಾಯಕ ಮಾಡಿಕೊಂಡವರ ಸಂಖ್ಯೆ ದುಪ್ಪಟ್ಟಾಗಿದೆ.

ತಾಲೂಕಿನ ಹಳ್ಳಿಗಳಲ್ಲಂತು ದಿನಸಿ ಸಿಗದಿದ್ದರೂ ಮದ್ಯ ಸಿಗುತ್ತದೆ. ತಮಾಷೆ ಎಂದರೆ ಸ್ವಾತಂತ್ರ್ಯ ಬಂದು 75 ವರ್ಷದ ಮೇಲಾದರೂ ಇನ್ನೂ ಕೆಲವು ಹಳ್ಳಿಗಳು ಬಸ್ ಸೌಲಭ್ಯ ಹೊಂದಿಲ್ಲ. ಅಂತಹ ಬಸ್ಸೇ ಬರದ ಊರಲ್ಲೂ ನಾಲ್ಕೈದು ಕಡೆ ಅಕ್ರಮವಾಗಿ ಮದ್ಯ ಮಾರಲಾಗುತ್ತಿದೆ. ಸೂಪರ್ ಚೀಲಗಳಲ್ಲಿ ಪ್ರಧಾನ ರಸ್ತೆಯಲ್ಲೇ ಮದ್ಯ ಹೊತ್ತು ಬಸ್ ಹತ್ತಿ ಹಳ್ಳಿ ಮುಟ್ಟುವ ಜನರು ಪ್ರತಿನಿತ್ಯ ಸಿಗುತ್ತಾರೆ. ಅವರಿಗೆ ಯಾರ ಭಯವೂ ಇಲ್ಲ. ಅಕ್ರಮ ಮದ್ಯ ಮಾರಾಟಗಾರರಿಗೆ ಅಕ್ರಮ ಮದ್ಯ ಸಾಗಾಟಗಾರರ ಅಭಯ.

ಈಗಾಗಲೇ ನಗರದ ಕೆಲ ಬಾರುಗಳು ಬೆಳಗಿನ ಸಮಯದಲ್ಲೇ ಗ್ರಾಹಕರಿಗೆ ಹಿಂಬಾಗಿಲ ಮೂಲಕ ಮದ್ಯ ಸರಬರಾಜು ಮಾಡುತ್ತವೆ ಎಂಬುದು ನಗರ ಪ್ರದೇಶಕ್ಕೆ ಹಳೆಯ ಸುದ್ದಿಯಾಗಿದೆ. ರಾತ್ರಿ ಹೊತ್ತು ಅವರು ಬಾರುಗಳವರು ಸಮಯಕ್ಕೆ ಸರಿಯಾಗಿ ಬಾಗಿಲು ಮುಚ್ಚಿದ್ದನ್ನು ನೋಡಿದವರೇ ಇಲ್ಲವೆಂಬoತೆ ಆಗಿದೆ.

ಈಗಾಗಲೇ ಕೆಲ ತಿಂಗಳ ಹಿಂದೆ ತಾಲೂಕಿನ ಕೂನಿಕೆರೆ ಗ್ರಾಮದ ಮಹಿಳೆಯರು ಅಬಕಾರಿ ಇಲಾಖೆಗೆ ಅಲೆದು ಅಲೆದು ಸಾಕಾಗಿ ಬೆಳ್ಳಂಬೆಳಗ್ಗೆಯೇ ಹಳ್ಳಿಗೆ ಅಕ್ರಮ ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದು ತಂದು ಪೊಲೀಸರಿಗೆ ಒಪ್ಪಿಸಿದ್ದರು. ಆದರೂ ಇಲಾಖೆಯ ಕೈಲಿ ಆ ಭಾಗದ ಅಕ್ರಮ ಮದ್ಯ ಸಾಗಾಟಗಾರರನ್ನು ಹಿಡಿದು ಕೇಸು ಜಡಿಯಲಾಗಲಿಲ್ಲ.

ಕೆಲವು ಸಂಘಟನೆಗಳವರು ನೇರವಾಗಿ ಅಬಕಾರಿ ಇಲಾಖೆಯ ಮುಂದೆಯೇ ಶಾಮಿಯಾನ ಹಾಕಿ ಅಕ್ರಮ ಮದ್ಯ ನಿಲ್ಲಿಸಿ ಎಂದು ಪ್ರತಿಭಟನೆ ನಡೆಸಿದ್ದರು. ಆದರೆ ಅವರಿಗೆ ಅಕ್ರಮ ಮದ್ಯ ನಿಲ್ಲಿಸಿ ಆಗಬೇಕಾದ್ದು ಏನೂ ಇಲ್ಲ. ಇವತ್ತಿಗೂ ಸಹ ಹಳ್ಳಿಗಳ ಭಾಗದ ಹೆಣ್ಣು ಮಕ್ಕಳಿಗೆ ಅಬಕಾರಿ ಇಲಾಖೆಯವರಿಗೆ ದೂರು ನೀಡಲು ಸೂಚಿಸಿದರೆ ಒಂದು ತಾತ್ಸಾರದ ನಗೆ ನಕ್ಕು ಮುಂದಕ್ಕೆ ಹೋಗುತ್ತಾರೆ.

ಸರ್ಕಾರದ ಒಂದು ಇಲಾಖೆಯ ಮೇಲೆ ಸಾರ್ವಜನಿಕರು ನಂಬಿಕೆಯನ್ನೇ ಕಳೆದುಕೊಳ್ಳುತ್ತಾ ಹೋಗುತ್ತಿದ್ದಾರೆ ಎಂದರೆ ಅವರ ಕಾರ್ಯಕ್ಷಮತೆ ಹೇಗಿದೆ ಎಂಬುದು ಎಲ್ಲರಿಗೂ ಅರ್ಥವಾಗುವಂತದ್ದೇ. ಇನ್ನಾದರೂ ಅಬಕಾರಿ ಅಧಿಕಾರಿಗಳು ಕಚೇರಿ ಬಿಟ್ಟು ನಗರದ ವಾರ್ಡ್‌ಗಳು ಮತ್ತು ಹಳ್ಳಿಗಳ ಭಾಗಕ್ಕೆ ರೇಡು ಬೀಳುವರಾ ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ.

"ತಾಲೂಕಿಗೆ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿ "

ಈ ಕುರಿತು ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ತಾಲೂಕಿನ ಅಬಕಾರಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳ ದಿವ್ಯ ನಿರ್ಲಕ್ಷ ಹಾಗೂ ಬೇಜವಾಬ್ದಾರಿತನದಿಂದ ನಗರ ಮತ್ತು ಗ್ರಾಮಾಂತರ ಪ್ರದೇಶದ ಪ್ರತಿ ಹಳ್ಳಿಗಳಲ್ಲಿ, ಡಾಬಾಗಳಲ್ಲಿ , ಟೀ ಅಂಗಡಿಗಳಲ್ಲಿ, ವಾಸದ ಮನೆಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಅಬಕಾರಿ ಇಲಾಖೆ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ಅಕ್ರಮ ಮದ್ಯ ಮಾರಾಟಗಾರರ ಜೊತೆ ಶಾಮೀಲಾಗಿ ದಂಧೆಕೋರರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಅಬಕಾರಿ ಇಲಾಖೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಹೊರ ಜಿಲ್ಲೆಗೆ ವರ್ಗಾಯಿಸಿ ತಾಲೂಕಿಗೆ ಕೆಲಸ ಮಾಡುವ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದರು.

Share this article