ಮಾದಿಗ ಹೋರಾಟ ಸಮಿತಿಯಿಂದ ಶಾಸಕರ ಮನೆ ಮುಂದೆ ತಮಟೆ ಚಳವಳಿ
ಕನ್ನಡಪ್ರಭ ವಾರ್ತೆ ಕೊಪ್ಪಳಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆಗಳ ಒಕ್ಕೂಟ ವತಿಯಿಂದ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿರುವ ಶಾಸಕ ರಾಘವೇಂದ್ರ ಹಿಟ್ನಾಳ ಅವರ ನಿವಾಸದ ಎದುರು ಶನಿವಾರ ತಮಟೆ ಚಳವಳಿ ಮಾಡಲಾಯಿತು.
ಶಾಸಕ ರಾಘವೇಂದ್ರ ಹಿಟ್ನಾಳರ ಅನುಪಸ್ಥಿತಿಯಲ್ಲಿ ಅವರ ತಂದೆ, ಮಾಜಿ ಶಾಸಕ ಕೆ. ಬಸವರಾಜ್ ಹಿಟ್ನಾಳ್ ಅವರಿಗೆ ಮನವಿ ಸಲ್ಲಿಸಲಾಯಿತು.ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಗಣೇಶ್ ಹೊರತಟ್ನಾಳ ಮಾತನಾಡಿ, ಸುಪ್ರೀಂಕೋರ್ಟಿನ ತೀರ್ಪು ಬಂದು ನಾಲ್ಕು ತಿಂಗಳಾದರೂ ಒಳಮೀಸಲಾತಿ ಜಾರಿ ಮಾಡದೆ ಕಾಲಹರಣದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಡಿ. 16ರಂದು ಬೆಳಗಾವಿಯಲ್ಲಿ ಹಕ್ಕೊತ್ತಾಯ ಸಮಾವೇಶ ನಡೆಸಲಾಗುವುದು.
ಆ. 1ರಂದು ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿತು. ತೀರ್ಪು ಬಂದು ನಾಲ್ಕು ತಿಂಗಳಾದರೂ ಕರ್ನಾಟಕದ ಸರ್ಕಾರ ಅಮೆಗತಿಯಲ್ಲಿ ಸಾಗಿದೆ. ಕಾಟಾಚಾರಕ್ಕೆ ನ್ಯಾ. ನಾಗಮೋಹನ್ ದಾಸ್ ಆಯೋಗ ರಚಿಸಿದ್ದು ಬಿಟ್ಟರೆ ಏನನ್ನೂ ಮಾಡಿಲ್ಲ , 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ, ಆಯೋಗಕ್ಕೆ ಬೇಕಾದ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವು ಕೊಡದೆ ಕಾಲಹರಣ ನೆಡೆಸಲಾಗುತ್ತಿದೆ. ಸರ್ಕಾರದ ಈ ನಿಧಾನಗತಿಯ ನಿರ್ಲಕ್ಷ್ಯದ ಧೋರಣೆ ನೋಡಿದರೆ ಅವಕಾಶ ವಂಚಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ಕೊಡುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಳಮೀಸಲಾತಿ ಜಾರಿ ಆಗುವವರೆಗೆ ಸರ್ಕಾರ ಯಾವುದೇ ಉದ್ಯೋಗ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ಕೊಟ್ಟಿತ್ತು. ಆದರೆ ಈ ಭರವಸೆ ಜಾರಿಯಾಗಿಲ್ಲ, ನೇಮಕಾತಿಯ ಘೋಷಣೆಗಳು ವಿವಿಧ ಇಲಾಖೆಯಿಂದ ಬರುತ್ತಲೇ ಇರುವುದು ಖಂಡನಾರ್ಹ ಎಂದರು.
ಹರಿಯಾಣದ ಬಿಜೆಪಿ ಸರ್ಕಾರ ಸುಪ್ರೀಂಕೋರ್ಟಿನ ತೀರ್ಪು ಬಂದ ಮೊದಲ ವಾರದಲ್ಲೆ ಒಳಮೀಸಲಾತಿ ಜಾರಿಮಾಡಿದೆ. ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೇ ಒಳಮೀಸಲಾತಿ ಜಾರಿ ಮಾಡುತ್ತೇವೆಂದು ಹಸಿಸುಳ್ಳು ಹೇಳಿದ ಕಾಂಗ್ರೆಸ್ ನಾಯಕರು ಮಾದಿಗ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಆರೋಪಿಸಿದರು.ಈ ಸಂದರ್ಭ ನಾಗಲಿಂಗ ಮಳೆಕೊಪ್ಪ, ಮಂಜುನಾಥ್ ಮುಸಲಾಪುರ್, ರಮೇಶ್ ಬೇಳೂರು, ಪರಶುರಾಮ್ ಕೆಡದಾಳ, ಮಾರುತಿ ಬಿಕ್ಕನಹಳ್ಳಿ, ಮೈಲಾರಪ್ಪ ಮೈನಹಳ್ಳಿ, ಅಣ್ಣಪ್ಪ ಪುರದ, ಕೃಷ್ಣ ಮುದ್ದಾಬಳ್ಳಿ, ವೀರೇಶ್ ಓಜನಹಳ್ಳಿ, ಮಹೇಶ್ ಕರ್ಕಿಹಳ್ಳಿ, ದೇವರಾಜ್ ಕಾತರಕಿ, ವಿನಾಯಕ ಕಿಡದಾಳ, ಮಹೇಶ್ ಕಂದಾರಿ, ಫಕೀರಪ್ಪ ಬೂದಗುಂಪಾ, ಮುದುಕಪ್ಪ ಚಿಲವಾಡಗಿ, ದುರಗೇಶ್ ಚಿಲವಾಡಗಿ, ಪ್ರಾಣೇಶ್ ಸೇರಿದಂತೆ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.