ಕನ್ನಡಪ್ರಭ ವಾರ್ತೆ ಮದ್ದೂರು
ಮರಳು ಗಣಿಗಾರಿಕೆ ಬಗ್ಗೆ ತಮಗೆ ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಮಹೇಶ್ ನೇತೃತ್ವದಲ್ಲಿ ಕಂದಾಯ, ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳ ತಂಡ ಸುಮಾರು 2.24 ಲಕ್ಷ ರು. ಮೌಲ್ಯದ 320 ಟನ್ ಮರಳನ್ನು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ.
ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ತೂಬಿನಕೆರೆ, ತೊರೆಶೆಟ್ಟಿಹಳ್ಳಿ, ಬೆಸಗರಹಳ್ಳಿಲ ಪೊಲೀಸ್ ಠಾಣೆ ವ್ಯಾಪ್ತಿಯ ನಿಲುವಾಗಿಲು ಗ್ರಾಮಗಳ ಶಿಂಷಾ ನದಿ ಪಾತ್ರದಲ್ಲಿ ರಾತ್ರಿ ಮತ್ತು ಬೆಳಗಿನ ಜಾವ ತೆಪ್ಪ ಮತ್ತು ಜೆಸಿಪಿಗಳ ಸಹಾಯದಿಂದ ನದಿಯಿಂದ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುವ ದಂಧೆ ಕೋರರು ನಂತರ ನದಿ ಪಾತ್ರ ಹಾಗೂ ಸರ್ಕಾರಿ ಜಾಗಗಳಲ್ಲಿ ಮರಳು ದಾಸ್ತಾನು ಮಾಡಿ ರಾತ್ರಿ ವೇಳೆ ಬೆಂಗಳೂರು, ಮೈಸೂರು ಸೇರಿದಂತೆ ನೆರೆ ಜಿಲ್ಲೆಗಳಿಗೆ ಲಾರಿಗಳ ಮೂಲಕ ಸಾಗಿಸಿದ ನಂತರ ದುಬಾರಿ ಬೆಲೆಗೆ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದರು.ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರೂ ಸಹ ಮರಳು ದಂಧೆಕೋರರೊಂದಿಗೆ ಪೊಲೀಸರು ಶಾಮೀಲಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದರು. ಮರಳು ಗಣಿಗಾರಿಕೆಯಿಂದ ಸೇತುವೆಗಳು ಶಿಥಿಲಗೊಳ್ಳುತ್ತಿವೆ. ಭಾರಿ ಪ್ರಮಾಣದಲ್ಲಿ ಮರಳು ಸಾಗಿಸುವ ಟಿಪ್ಪರ್ ಲಾರಿ ಗಳ ಸಂಚಾರದಿಂದ ರಸ್ತೆಗಳು ಹಾಳಾಗುತ್ತಿವೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಮರಳು ಗಣಿಗಾರಿಕೆ ನಡೆಸುವ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ವಶಪಡಿಸಿಕೊಂಡ ಮರಳನ್ನು ಸದ್ಯ ಮದ್ದೂರಿನ ಪ್ರವಾಸಿ ಮಂದಿರದ ಆವರಣದಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಗಣಿ ಅಧಿಕಾರಿ ಮಹೇಶ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.