ಬುಲ್‌ಫ್ರಾಗ್ ಕಪ್ಪೆಗಳ ಅಕ್ರಮ ಸಾಗಾಟ: ಇಬ್ಬರ ಬಂಧನ

KannadaprabhaNewsNetwork | Published : Jun 19, 2024 1:07 AM

ಸಾರಾಂಶ

ಗೋವಾ ರಾಜ್ಯದ ಕಾಣಕೋಣ ನಿವಾಸಿ, ಖಾಸಗಿ ಬಸ್ ಚಾಲಕ ಸಿದ್ದೇಶ್ ದೇಸಾಯಿ, ನಿರ್ವಾಹಕ ಜಾನ್ ಲೋಲೆಮ್ ಆರೋಪಿಗಳು.

ಕಾರವಾರ: ಕಾನೂನುಬಾಹಿರವಾಗಿ ಖಾಸಗಿ ಬಸ್‌ನಲ್ಲಿ ಗೋವಾಕ್ಕೆ ಸಾಗಿಸಲಾಗುತ್ತಿದ್ದ ಬುಲ್‌ಫ್ರಾಗ್ ಕಪ್ಪೆಗಳನ್ನು ಅರಣ್ಯ ಇಲಾಖೆಯವರು ರಕ್ಷಣೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಗೋವಾ ರಾಜ್ಯದ ಕಾಣಕೋಣ ನಿವಾಸಿ, ಖಾಸಗಿ ಬಸ್ ಚಾಲಕ ಸಿದ್ದೇಶ್ ದೇಸಾಯಿ, ನಿರ್ವಾಹಕ ಜಾನ್ ಲೋಲೆಮ್ ಆರೋಪಿಗಳಾಗಿದ್ದು, 40ಕ್ಕೂ ಅಧಿಕ ಬುಲ್ ಫ್ರಾಗ್‌ ಕಪ್ಪೆಗಳನ್ನು ಚೀಲದಲ್ಲಿ ತುಂಬಿ ಶಾಂತಾದುರ್ಗಾ ಹೆಸರಿನ ಖಾಸಗಿ ಬಸ್‌ನ ಡಿಕ್ಕಿಯಲ್ಲಿರಿಸಿ ಗೋವಾಕ್ಕೆ ಸಾಗಾಟ ಮಾಡಲು ಯತ್ನಿಸಿದ್ದರು. ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ನಗರದ ಕಾಳಿ ನದಿ ಸೇತುವೆ ಸಮೀಪ ದಾಳಿ ಮಾಡಿ ಕಪ್ಪೆಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

ಗೋವಾದಲ್ಲಿ ಜಂಪಿಕ್ ಚಿಕನ್ ಎಂದೇ ಖ್ಯಾತವಾಗಿರುವ ಬುಲ್ ಫ್ರಾಗ್ ಕಪ್ಪೆಯ ಮಾಂಸ ಆ ರಾಜ್ಯಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ಅಚ್ಚುಮೆಚ್ಚಾಗಿದೆ. ಈ ಕಪ್ಪೆಗಳಿಗೆ ಸಾಕಷ್ಟು ಬೇಡಿಕೆ ಹೆಚ್ಚಾಗಿದ್ದು, ಕಾರವಾರದಿಂದ ಭಟ್ಕಳದವರೆಗೆ ಕಪ್ಪೆಗಳನ್ನು ಹಿಡಿದು ಸಾಗಿಸುವ ಕಾನೂನುಬಾಹಿರ ಕೆಲಸ ಎಗ್ಗಿಲ್ಲದೇ ನಡೆಯುತ್ತಿದೆ.

ಅರಣ್ಯ ಕಾಯ್ದೆ ಶೆಡ್ಯುಲ್ 1ರಂತೆ ಕಪ್ಪೆ ಮಾರಾಟ, ಭಕ್ಷಣೆಯನ್ನು ರಾಜ್ಯ ಸರ್ಕಾರ ನಿರ್ಬಂಧಿಸಿದೆ. ಆದರೆ ಮಳೆಗಾಲದಲ್ಲಿ ಕಪ್ಪೆಗಳು ಹೊರಬರುವುದರಿಂದ ಅವುಗಳನ್ನು ಹಿಡಿದು ಅಕ್ರಮವಾಗಿ‌ ಮಾರಾಟ ಮಾಡಲಾಗುತ್ತಿದೆ.ಕಾಡುಹಂದಿ ಬೇಟೆ: ಇಬ್ಬರ ಬಂಧನ

ಶಿರಸಿ: ಕಾಡುಹಂದಿ ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬನವಾಸಿ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.ತಾಲೂಕಿನ ಬನವಾಸಿ ಸಮೀಪದ ಸಂತೋಳ್ಳಿಯ ಬಸವರಾಜ ಯಲ್ಲಪ್ಪ ಚೆನ್ನಯ್ಯ ಹಾಗೂ ಹೆಬ್ಬತ್ತಿಯ ಉಮೇಶ ಚನ್ನಪ್ಪ ಚೆನ್ನಯ್ಯ ಬಂಧಿತ ವ್ಯಕ್ತಿಗಳಾಗಿದ್ದಾರೆ.

ಇವರಿಬ್ಬರು ತಾಲೂಕಿನ ಬನವಾಸಿ ವಲಯ ದಾಸನಕೊಪ್ಪ ಶಾಖೆಯ ಅಂಡಗಿ ಅರಣ್ಯ ವ್ಯಾಪ್ತಿಯಲ್ಲಿ ಕಾಡುಹಂದಿ ಬೇಟೆಯಾಡಿ ಮಾಂಸ ತಯಾರಿಸುತ್ತಿದ್ದರು. ಖಚಿತ ಮಾಹಿತಿ ತಿಳಿದು ಅರಣ್ಯ ಸಿಬ್ಬಂದಿ ಪರಿಶೀಲನೆಗೆ ತೆರಳಿದ್ದಾಗ ಕಾಡಿನಲ್ಲಿ ಪರಾರಿಯಾಗಿ, ನಾಪತ್ತೆಯಾಗಿದ್ದರು. ಬಸವರಾಜ ಯಲ್ಲಪ್ಪ ಚೆನ್ನಯ್ಯನನ್ನು ಬನವಾಸಿ ದಾಸನಕೊಪ್ಪ ರಸ್ತೆಯ ಕಡಗೋಡ ಕ್ರಾಸ್ ಬಳಿ ಮತ್ತು ಉಮೇಶ ಚನ್ನಪ್ಪ ಚೆನ್ನಯ್ಯನನ್ನು ಸಂತೊಳ್ಳಿ ಮನೆಯಲ್ಲಿ ಬಂಧಿಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ.ಆರ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ ಸಿ.ಎನ್. ಮಾರ್ಗದರ್ಶನದಲ್ಲಿ ಬನವಾಸಿ ವಲಯಾರಣ್ಯಾಧಿಕಾರಿ ವರದ ರಂಗನಾಥ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಕಾರ್ತಿಕ ನಾರ್ವೆಕರ್, ಗಸ್ತು ಅರಣ್ಯ ಪಾಲಕರಾದ ದಯಾನಂದ ಬೋರ್ಕರ್, ಸಿದ್ದಪ್ಪ ನಾವಿ, ಅರಣ್ಯ ವೀಕ್ಷಕರಾದ ಚಂದ್ರು ಗೌಡ, ಗಿರೀಶ ಕುರುಬರ ಪಾಲ್ಗೊಂಡಿದ್ದರು. ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Share this article