ಕನ್ನಡಪ್ರಭವಾರ್ತೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ಮಸೀದಿಯ ಇಮಾಮ್ ಜಹೀರ್ ಹುಸೇನ್ ತನ್ನ ಪತ್ನಿ ಸೀಮಾ ಬೇಗಂ (52) ಪವಿತ್ರ ಉಮ್ರಾ ಯಾತ್ರೆಗೆ ಹೋಗುವ ಮಾರ್ಗಮಧ್ಯೆ ಬಹ್ರೇನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಳಿಕ ಕರ್ನಾಟಕ ಕಲ್ಚರಲ್ ಸಂಘಟನೆ ಸಹಾಯದಿಂದ ಬಹ್ರೇನಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಕೂಡ್ಲಿಗಿ ತಾಲೂಕಿನ ಗುಡೇಕೋಟೆಯಲ್ಲಿ 6 ವರ್ಷಗಳಿಂದ ಇಲ್ಲಿಯ ಮಸೀದಿಯಲ್ಲಿ ಇಮಾಮ್ ಆಗಿ ಜಹೀರ್ ಹುಸೇನ್ ಸೇವೆ ಸಲ್ಲಿಸುತ್ತಿದ್ದಾರೆ. ದಂಪತಿ ಬಿಹಾರ ಮೂಲದವರು. ಈ ಹಿಂದೆ ಬಳ್ಳಾರಿಯಲ್ಲಿ ಹಲವು ವರ್ಷಗಳ ಕಾಲ ಇಮಾಮ್ ಸೇವೆ ಮಾಡಿದ್ದಾರೆ. ಇವರಿಗೆ ಇಬ್ಬರು ಪುತ್ರರಿದ್ದು, ಓರ್ವ ಬಿಹಾರನಲ್ಲಿ ಮತ್ತೋರ್ವ ಓಡಿಶಾದಲ್ಲಿ ಇದ್ದಾರೆ. ಸೌದಿ ಅರೇಬಿಯಾಕ್ಕೆ ಹೋಗಲು ನೇರ ವಿಮಾನ ಸಿಗದೇ ಇದ್ದ ಕಾರಣ ಈ ದಂಪತಿ ಭಾರತದಿಂದ ಬಹ್ರೇನ್ ಮಾರ್ಗವಾಗಿ ಟಿಕೆಟ್ ಪಡೆದಿದ್ದರು. ಬಹ್ರೇನಲ್ಲಿ ಇಳಿದು ಸೌದಿ ಅರೇಬಿಯಾ ವಿಮಾನ ಹತ್ತುವ ವೇಳೆಗೆ ಇಮಾಮ್ ಜಹೀರ್ ಹುಸೇನ್ ಅವರ ಪತ್ನಿ ಸೀಮಾ ಬೇಗಂ ಅವರಿಗೆ ಹೃದಯಾಘಾತವಾಗಿ ಮರಣ ಹೊಂದಿದರು. ಮೃತದೇಹ ಕೊಂಡೊಯ್ಯಲು ಕಾನೂನು ಸಮಸ್ಯೆ ಎದುರಾಯಿತು. ಆಗ ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್‌ನ ಕರ್ನಾಟಕ ಪೋರಂ ರಾಜ್ಯಾಧ್ಯಕ್ಷ ಬೆಂಗಳೂರಿನ ಸಯ್ಯದ್ ನಜೀರ್ ಅವರ ನೆರವಿಗೆ ಬಂದರು. ಬಹ್ರೇನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಕಲ್ಚರನ್ ಫೌಂಡೇಶನ್ ಎನ್ನುವ ಸಮಾಜಸೇವಾ ಧಾರ್ಮಿಕ ಸಂಘಟನೆಯ ಪದಾಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ವಿವರಿಸಿದರು. ಕೆಸಿಎಫ್ ಅಧ್ಯಕ್ಷ ಜಮಾಲ್ ಬಾಯಿ ಹಾಗೂ ಕಲಂದರ್ ಬಾಯಿ ಅವರ ಸತತ ಪ್ರಯತ್ನದಿಂದ ಬಹ್ರೇನಲ್ಲೇ ಅಂತ್ಯಕ್ರಿಯೆ (ದಫನ್) ನಡೆಸಿದರು. ಆನಂತರ ಜಹೀರ್ ಹುಸೇನ್ ಸೌದಿ ಅರೇಬಿಯಾಕ್ಕೆ ಉಮ್ರಾ ಯಾತ್ರೆಗೆ ಹೋಗಲು ಅನುಕೂಲ ಮಾಡಿಕೊಟ್ಟರು. ಜಹೀರ್ ಹುಸೇನ್-ಸೀಮಾ ಬೇಗಂ ದಂಪತಿ ನಮ್ಮೂರಲ್ಲೇ ಬಾಡಿಗೆ ಮನೆಯಲ್ಲಿ 6 ವರ್ಷಗಳಿಂದ ಜೀವನ ಮಾಡುತ್ತಿದ್ದಾರೆ. ಇತ್ತೀಚೆಗೆ ಉಮ್ರಾ ಯಾತ್ರೆಗೆ ಹೋಗುವ ಸಮಯದಲ್ಲಿ ಊರವರು ದೇಣಿಗೆ ನೀಡಿ ಸಹಾಯ ಮಾಡಿದ್ದರು. ಮಹಮದ್ ಫಕ್ರುದ್ದೀನ್, ಗುಡೇಕೋಟೆ ಜಾಮೀಯ ಮಸೀದಿಯ ಕಾರ್ಯದರ್ಶಿ