ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ, ವನ್ಯಜೀವಿ ಸಂಘರ್ಷದ ಹಿನ್ನೆಲೆ ಬಂಡೀಪುರ ಸಫಾರಿ ಸ್ಥಗಿತಗೊಂಡು ೫೫ ದಿನಗಳು ಕಳೆದಿದೆ. ಮತ್ತೊಂದು ವರ್ಷದ ಅಂತ್ಯದ ಹಾಗೂ ಆರಂಭದ ದಿನಗಳಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಸಫಾರಿ ಕೇಂದ್ರದಲ್ಲಿ ಸ್ಮಶಾನ ಮೌನ ಆವರಿಸಿದೆ.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ, ವನ್ಯಜೀವಿ ಸಂಘರ್ಷದ ಹಿನ್ನೆಲೆ ಬಂಡೀಪುರ ಸಫಾರಿ ಸ್ಥಗಿತಗೊಂಡು ೫೫ ದಿನಗಳು ಕಳೆದಿದೆ. ಮತ್ತೊಂದು ವರ್ಷದ ಅಂತ್ಯದ ಹಾಗೂ ಆರಂಭದ ದಿನಗಳಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಸಫಾರಿ ಕೇಂದ್ರದಲ್ಲಿ ಸ್ಮಶಾನ ಮೌನ ಆವರಿಸಿದೆ.ವರ್ಷದ ಅಂತ್ಯದಲ್ಲಿ ಪ್ರವಾಸಿಗರು ಬಂಡೀಪುರ ಸಫಾರಿಗೆ ದಾಂಗುಡಿ ಇಡುತ್ತಿದ್ದರು. ಪ್ರತಿ ನಿತ್ಯ ಕನಿಷ್ಠ ಏಳೆಂಟು ಲಕ್ಷ ರು. ಸಫಾರಿಯಿಂದ ಅರಣ್ಯ ಇಲಾಖೆಗೆ ಆದಾಯ ಬರುತ್ತಿತ್ತು. ಆದರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ಅಕ್ಟೋಬರ್ ಹಾಗೂ ನವೆಂಬರ್ ೬ ರೊಳಗೆ ಹುಲಿ ದಾಳಿಗೆ ನಾಲ್ಕು ಜನರು ಬಲಿಯಾದ ಹಿನ್ನೆಲೆ ಸಫಾರಿ ಅರಣ್ಯ ಇಲಾಖೆ ನಿಲ್ಲಿಸಿತು.
ವರ್ಷದ ಅಂತ್ಯ ಹಾಗೂ ಹೊಸ ವರ್ಷದ ಆರಂಭದಲ್ಲಿ ಸದಾ ಜನರಿಂದಲೇ ತುಂಬಿ ತುಳುಕಾಡುತ್ತಿದ್ದ ಬಂಡೀಪುರ ಸಫಾರಿ ಕೇಂದ್ರವೀಗ ಬೀಕೋ ಎನ್ನುತ್ತಿದೆ. ಅರಣ್ಯ ಇಲಾಖೆ ಆದಾಯ, ಪ್ರವಾಸೋದ್ಯಮ ನಂಬಿದ ರೆಸಾರ್ಟ್ ಹಾಗೂ ಹೋಟೆಲ್‌ಗಳ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ.ಬಂಡೀಪುರ ಸಫಾರಿ ಕೇಂದ್ರದ ಆವರಣದಲ್ಲಿ ಟೀ ಸ್ಟಾಲ್, ನಂದಿನಿ ಕ್ಷೀರ ಕೇಂದ್ರ, ಫುಡ್ ಜಾಟ್ಸ್, ಹಾಂಡಿ ಕ್ರಾಫ್ಟ್ ಹಾಗೂ ಇನ್ನಿತರ ಪ್ರವಾಸಿಗರ ನಂಬಿ ಜೀವನ ಸಾಗಿಸುತ್ತಿದ್ದ ಜನರಿಗೆ ವ್ಯಾಪಾರ ಇಲ್ಲ. ಸಫಾರಿ ಕೇಂದ್ರದ ಮುಂದೆ ಹಾದು ಹೋಗುವ ಮೈಸೂರು-ಊಟಿ ಹೆದ್ದಾರಿ ಬದಿಯ ಅಂಗಡಿಗಳಿಗೆ ವ್ಯಾಪಾರ ಇಲ್ಲ.
ಸಫಾರಿ ಆರಂಭಕ್ಕೆ ಪರ- ವಿರೋಧ:ಸಫಾರಿ ಕೇಂದ್ರ ಆರಂಭಿಸಬೇಕು ಎಂದು ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕರು ಸಚಿವ, ಶಾಸಕ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಆದರೆ ರೈತ ಸಂಘಟನೆಗಳು ಮಾತ್ರ ಸಫಾರಿ ಕೇಂದ್ರ ಆರಂಭಿಸಬೇಡಿ ಎಂದು ಆಗ್ರಹಿಸಿವೆ.
ಪ್ರವಾಸೋದ್ಯಮ ನಂಬಿದ್ದ ಹೋಟೆಲ್, ರೆಸಾರ್ಟ್ ಹಾಗೂ ಅಕ್ರಮ ಹಾಗೂ ಸಕ್ರಮ ಹೋಂಸ್ಟೇಗಳಿಗೆ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಸಫಾರಿ ಬಂದ ಆಗಿದ್ದಕ್ಕೆ ಪ್ರವಾಸಿಗರು ಹೋಟೆಲ್, ರೆಸಾರ್ಟ್ ಹಾಗೂ ಹೋಂ ಸ್ಟೇಗಳಿಗೆ ಬರುತ್ತಿಲ್ಲ ಎಂದು ರೆಸಾರ್ಟ್ ನ ವ್ಯವಸ್ಥಾಪಕ ಸಿದ್ದು ಹೊಸಪುರ ತಿಳಿಸಿದ್ದಾರೆ.ಕಳೆದ ೫೫ ದಿನಗಳಿಂದ ಸಫಾರಿ ಸ್ಥಗಿತಗೊಂಡ ಕಾರಣ ಅರಣ್ಯ ಇಲಾಖೆಗೆ ಕನಿಷ್ಟ ಐದಾರು ಕೋಟಿ ರು. ಆದಾಯ ಇಲ್ಲದಂತಾಗಿದೆ ಎಂದು ಹೆಸರೇಳಲಿಚ್ಚಿಸದ ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.