ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮೈಕ್ರೋ ಫೈನಾನ್ಸ್, ವಿವಿಧ ಹಣಕಾಸು ಸಂಸ್ಥೆ ಹಾಗೂ ಲೇವಾದೇವಿಗಾರರು ಸಾಲ ವಸೂಲಾತಿಯಲ್ಲಿ ನಿಯಮ ಬಾಹಿರವಾಗಿ ನಡೆದುಕೊಂಡಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ನಡೆದ ಮೈಕ್ರೋ ಫೈನಾನ್ಸ್‌ದಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಲಗಾರರ ಜೊತೆಗೆ ಮಾನವೀಯತೆಯಿಂದ ನಡೆದುಕೊಳ್ಳುವುದನ್ನು ಕಲಿಯಬೇಕು. ಕೇವಲ ವ್ಯಾಪಾರದ ದೃಷ್ಟಿಯಿಂದ ನಡೆದುಕೊಂಡಿದ್ದು ಕಂಡುಬಂದಲ್ಲಿ ದೂರು ಬರದೇ ಇದ್ದರೂ ಸೋಮೋಟೋ ಕೇಸ್ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸೇರಿದಂತೆ ಇತರೆ ಯಾವುದೇ ಹಣಕಾಸು ಸಂಸ್ಥೆಯವರು ಸಾಲ ವಸೂಲಾತಿಯಲ್ಲಿ ಕಿರುಕುಳ ನೀಡಿದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೊ.ನಂ:9480803900ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಭಾರತೀಯ ರೀಸರ್ವ್ ಬ್ಯಾಂಕ್ ನಿಯಮದ ಪ್ರಕಾರ ವ್ಯವಹಾರ ನಡೆಸಬೇಕು. ಸಾಲದ ಕಾರಣಕ್ಕೆ ಜೀವ ಹಾನಿ ಆಗಬಾರದು. ನಿಮ್ಮ ಚೌಕಟ್ಟಿನಡಿ ವಸೂಲಾತಿ ಆಗಬೇಕು ಹೊರತು ಯಾವುದೇ ರೀತಿಯಲ್ಲಿ ಸಾಲಗಾರರಿಗೆ ತೊಂದರೆ ಕೊಡುತ್ತಿರುವ ಬಗ್ಗೆ ದೂರು ಬಂದಲ್ಲಿ ಫೈನಾನ್ಸ್ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ವಿತರಿಸಬೇಕು. ನಿಯಮ ಮೀರಿ ಸಾಲ ನೀಡಿ ಸಾಲಗಾರರ ಮೇಲೆ ದಬ್ಬಾಳಿಕೆ ನಡೆಸಿದಲ್ಲಿ ಅದಕ್ಕೆ ನಿಮ್ಮನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದೆಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಹಣಕಾಸು ಸಂಸ್ಥೆಗಳು ಜಿಲ್ಲೆಯ ಜನತೆಯ ಜೊತೆ ವ್ಯವಹಾರ ಮಾಡುವ ಮೊದಲು ಹಣಕಾಸಿನ ವ್ಯವಹಾರದ ಬಗ್ಗೆ ತಿಳಿದುಕೊಂಡು ಕೆಲಸ ಮಾಡಬೇಕು. ಹಣಕಾಸು ಸಂಸ್ಥೆಗಳು ಯಾರಿಗೆ ಸಾಲ ಕೊಡಬೇಕು. ಯಾರಿಗೆ ಸಾಲ ಕೊಡಬಾರದು ಎಂಬುದನ್ನು ಮೊದಲು ಅರಿಯಬೇಕು. ಬೇರೆ ಬೇರೆ ಮೈಕ್ರೋ ಫೈನಾನ್ಸ್‌ದವರು ಜಿಲ್ಲೆಯ ಗ್ರಾಹಕರ ಜೊತೆ ವ್ಯವಹಾರ ಮಾಡಬೇಕಾದಲ್ಲಿ ಮಾಹಿತಿ ಇಲ್ಲದೇ ವ್ಯವಹಾರ ಮಾಡುವಂತಿಲ್ಲ ಎಂದು ತಿಳಿಸಿದರು.
ವಿವಿಧ ಹಣಕಾಸು ಸಂಸ್ಥೆಗಳು ಸಾಲ ಕೊಟ್ಟ ಮೇಲೆ ಹೇಗೆ ವಸೂಲಾತಿ ಮಾಡಬೇಕೆಂಬ ನಿಯಮ ಇದೆ. ವಸೂಲಾತಿ ಮಾಡುವ ನಿಟ್ಟಿನಲ್ಲಿ ಗ್ರಾಹಕರಿಗೆ ತೊಂದರೆ ನೀಡಿದಲ್ಲಿ ನಿರ್ಧಾಕ್ಷಣ್ಯವಾಗಿ ಕ್ರಮಕೈಗೊಳ್ಳಲಾಗುತ್ತದೆ. ಗ್ರಾಹಕರ ಜೊತೆ ವಿನಯದಿಂದ ನಡೆದುಕೊಳ್ಳಬೇಕು. ಸಾಲ ವಸೂಲಾತಿಯಲ್ಲಿ ನಿಯಮ ಬಾಹಿರವಾಗಿರುವ ಬಗ್ಗೆ ಈಗಾಗಲೇ ಒಂದು ಪ್ರಕರಣದ ದಾಖಲಾಗಿದೆ. ದೂರು ಬರದೇ ಇದ್ದರೂ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಕ್ರಮ ಜರುಗಿಸಲಾಗುವುದೆಂದರು.ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕ ರಾಜಕುಮಾರ ಹೂಗಾರ ಹಾಗೂ ಸಹಕಾರಿ ಸಂಘಗಳ ಉಪನಿಬಂಧಕ ದ್ಯಾನಯ್ಯ ಹಿರೇಮಠ ಅವರು ತಮ್ಮ ವಿವಿಧ ಹಣಕಾಸು ಸಂಸ್ಥೆಗಳ ಮಾಹಿತಿ ಹಾಗೂ ಅವರು ನಡೆಸುವ ವ್ಯವಹಾರದ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಬಾಗಲಕೋಟೆ ಸಹಾಯಕ ನಿಬಂಧಕ ಮಹಾದೇವ ಕುಂಬಾರ ಜಮಖಂಡಿ ಸಹಾಯಕ ನಿಬಂಧಕ ರಾಮನಗೌಡ ಪಾಟೀಲ ಸೇರಿದಂತೆ ಜಿಲ್ಲೆಯಲ್ಲಿರುವ ಮೈಕ್ರೋ ಫೈನಾನ್ಸ್, ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳು, ಗಿರೀವಿದಾರರು ಉಪಸ್ಥಿತರಿದ್ದರು.