ಬ್ಯಾಡಗಿ: ಗೋವಿನ ಜೋಳಕ್ಕೆ ಬೆಂಬಲ ಬೆಲೆ, ಬೆಳೆಹಾನಿ ಪರಿಹಾರ ನೀಡದೆ, ಖರೀದಿ ಕೇಂದ್ರವನ್ನು ತೆರೆಯದೇ ರಾಜ್ಯ ಸರಕಾರ ರೈತರ ಬದುಕು ಸಂಕಷ್ಟಕ್ಕೆ ತಳ್ಳಿದೆ, ಆದ್ದರಿಂದ ನ. 3ರಂದು ಬ್ಯಾಡಗಿಗೆ ಆಗಮಿಸುತ್ತಿರುವ ಸಚಿವರೊಡನೆ ರೈತರು ಚರ್ಚೆ ನಡೆಸಲಿದ್ದು, ಬೆಳೆಹಾನಿಗೆ ಅರ್ಜಿ ಸಲ್ಲಿಸಿದ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಕರೆ ನೀಡಿದರು. ಶನಿವಾರ ಪತ್ರಕರ್ತರ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿಯ ವಿಕೋಪಕ್ಕೆ ರಾಜ್ಯದಲ್ಲಿ ಮತ್ತೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಹಾನಿ ಆದ ಪರಿಣಾಮ ಬದುಕು ಮತ್ತೆ ಬೀದಿಗೆ ಬಂದಿದೆ. ಇಂತಹ ಸಂದರ್ಭದಲ್ಲಿ ರೈತರ ಪರವಾಗಿ ನಿಲ್ಲಬೇಕಿದ್ದ ಸರ್ಕಾರ ಇಲ್ಲಿಯವರೆಗೂ ಒಂದು ರುಪಾಯಿ ಪರಿಹಾರ ಹಾಕಿಲ್ಲ, ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸುತ್ತೇವೆ ಎಂದರು.
40 ಸಾವಿರ ಅರ್ಜಿ ಉತ್ತರವೆಲ್ಲಿದೆ..?: ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಬೆಳೆಹಾನಿ ಎನ್ನುವಂತಹ ಗುಮ್ಮ ರೈತರನ್ನು ಬಿಡುವ ಲಕ್ಷಣ ಕಾಣುತ್ತಿಲ್ಲ, ಇದರಿಂದ ರೈತ ಕುಲವು ನಲುಗಿ ಹೋಗಿದ್ದು ಬೆಳೆಯು ಇಲ್ಲದೇ ಹಾಕಿದ ಬಂಡವಾಳವು ಇಲ್ಲವೆನ್ನುವಂತಾಗಿದೆ, ಒಂದೆಡೆ ಸರಕಾರಗಳು ನಮ್ಮನ್ನ ಸಂಪೂರ್ಣವಾಗಿ ಕೈಬಿಟ್ಟಿದ್ದು, ರೈತರನ್ನು ಮತ್ತಷ್ಟು ಅಧೀರರನ್ನಾಗಿಸಿದೆ, ಜಿಲ್ಲೆಯಲ್ಲಿ ಈಗಾಗಲೇ 40 ಸಾವಿರಕ್ಕೂ ಹೆಚ್ಚು ರೈತರು ಬೆಳೆ ಹಾನಿಗೆ ಅರ್ಜಿ ಸಲ್ಲಿಸಿದ್ದು ಯಾರಿಗೂ ಬೆಳೆ ಹಾನಿ ಹಣ ಪಾವತಿಯಾಗಿಲ್ಲ ಎಂದು ದೂರಿದರು.ಮನವಿ ಸಲ್ಲಿಸಲು ಅವಕಾಶ ಕೊಡಿ: ಮೌನೇಶ ಕಮ್ಮಾರ ಮಾತನಾಡಿ, ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ರೈತರ ಸಮಸ್ಯೆ ಕೇಳಲು ಪುರಸೊತ್ತಿಲ್ಲ, ಇವರಿಂದ ನಮ್ಮ ಸಮಸ್ಯೆಗೆ ಪರಿಹಾರ ಸಿಗುವುದು ಅನುಮಾನ, ಸೋಮವಾರ ಬ್ಯಾಡಗಿಗೆ ಆಗಮಿಸುತ್ತಿರುವ ಸಚಿವರಿಗೆ ರೈತರು ಮನವಿ ಸಲ್ಲಿಸಲು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಅವಕಾಶ ಮಾಡಿಕೊಡಬೇಕು, ಮತ್ತು ಜಿಲ್ಲೆಯ ರೈತರು ನಮ್ಮ ಬ್ಯಾಡಗಿಯಲ್ಲಿನ ರೈತ ಸಂಘದ ಕಾರ್ಯಾಲಯಕ್ಕೆ ಸೋಮವಾರ ಮಧ್ಯಾಹ್ನ 12 ಗಂಟೆಯ ಒಳಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮನವಿ ಮಾಡಿದರು.