ಅಟಲ್‌ ಜಿ ಅ‍ವರು ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂದು ಬಾಳಿದವರು. 24 ಪ್ರಾದೇಶಿಕ ಪಕ್ಷಗಳನ್ನು ತಮ್ಮೊಂದಿಗೆ ಒಗ್ಗೂಡಿಸಿಕೊಂಡು ಭ್ರಷ್ಟಾಚಾರ ರಹಿತ ಸ್ಥಿರ ಸರ್ಕಾರ ನೀಡಿದ್ದರು. ಅವರು 2004ರಲ್ಲಿ ಸೋಲದೇ ಹೋಗಿದ್ದರೆ ಇಂದು ಪ್ರಧಾನಿ ನರೇಂದ್ರ ಮೋದಿ ಸಾಧಿಸಿದ್ದನ್ನು 10 ವರ್ಷಗಳ ಹಿಂದೆಯೇ ಅಟಲ್‌ ಜಿ ಸಾಧಿಸುತ್ತಿದ್ದರು.

ಹುಬ್ಬಳ್ಳಿ:

ಡಾ. ಬಿ.ಆರ್‌. ಅಂಬೇಡ್ಕರ್‌ ಸಂವಿಧಾನ ಶಿಲ್ಪಿಯಾದರೆ, ಅಟಲ್‌ ಬಿಹಾರಿ ವಾಜಪೇಯಿ ಅವರು ನವಭಾರತದ ಶಿಲ್ಪಿಗಳು. ಅವರು ವಜ್ರದಷ್ಟು ಕಠಿಣ, ಹೂವಿನಷ್ಟೆ ಮೃದು ಸ್ವಭಾವದ ವ್ಯಕ್ತಿತ್ವ ಹೊಂದಿದವರು ಎಂದು ವಿಪ ಸದಸ್ಯ ಸಿ.ಟಿ. ರವಿ ಹೇಳಿದರು.

ಇಲ್ಲಿನ ದುರ್ಗದಬೈಲ್‌ ವೃತ್ತದಲ್ಲಿ ಗುರುವಾರ ಸಂಜೆ ಬಿಜೆಪಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾದಿಂದ ಹಮ್ಮಿಕೊಳ್ಳಲಾಗಿದ್ದ ಸುಶಾಸನ ದಿನಾಚರಣೆ-ಅಟಲ್‌ ಜೀ ಸ್ಮರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಅಟಲ್‌ ಜಿ ಅ‍ವರು ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂದು ಬಾಳಿದವರು. 24 ಪ್ರಾದೇಶಿಕ ಪಕ್ಷಗಳನ್ನು ತಮ್ಮೊಂದಿಗೆ ಒಗ್ಗೂಡಿಸಿಕೊಂಡು ಭ್ರಷ್ಟಾಚಾರ ರಹಿತ ಸ್ಥಿರ ಸರ್ಕಾರ ನೀಡಿದ್ದರು. ಅವರು 2004ರಲ್ಲಿ ಸೋಲದೇ ಹೋಗಿದ್ದರೆ ಇಂದು ಪ್ರಧಾನಿ ನರೇಂದ್ರ ಮೋದಿ ಸಾಧಿಸಿದ್ದನ್ನು 10 ವರ್ಷಗಳ ಹಿಂದೆಯೇ ಅಟಲ್‌ ಜಿ ಸಾಧಿಸುತ್ತಿದ್ದರು ಎಂದರು.

ಈ ಹಿಂದೆ ಅಟಲ್‌ ಜಿ ಅವರು ಪ್ರಧಾನಿಗಳಾಗಿದ್ದ ವೇಳೆಯೇ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿದ್ದರು. ಆದರೆ, ಈಗ ಈ ಯೋಜನೆಯ ಹೆಸರು ಬದಲಿಸಿ ರಾಮನ ಹೆಸರಿಟ್ಟಿದ್ದಕ್ಕೆ ಕೆಲವರಿಗೆ ಆಗುತ್ತಿಲ್ಲ. ಅಟಲ್‌ ಜಿ ಪ್ರಧಾನಿಗಳಾಗಿದ್ದ ವೇಳೆ ಕೈಗೊಂಡ ಜನಪರ ಕಲ್ಯಾಣ ಯೋಜನೆಗಳನ್ನು ಇಂದಿನ ಪ್ರಧಾನಿ ನರೇಂದ್ರ ಮೋದಿ ಅ‍ವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದರು. ರಾಜ್ಯದಲ್ಲೂ ಬದಲಾವಣೆಯಾಗಲಿ:

ಭವಿಷ್ಯದಲ್ಲಿ ಕರ್ನಾಟಕದಲ್ಲಿ ಬದಲಾವಣೆ ಆಗಬೇಕು. ಭ್ರಷ್ಟಾಚಾರದಲ್ಲಿಯೇ ಕಾಲ ಕಳೆಯುತ್ತಿರುವ ರಾಜ್ಯದಲ್ಲಿನ ಕುಶಾಸನ ಸರ್ಕಾರ ಕಿತ್ತೊಗೆದು ಮತ್ತೆ ಸುಶಾಸನ ಆಡಳಿತದ ಕನಸು ಹೊಂದಿರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ರಾಜ್ಯದ ಜನತೆ ಕೈಜೋಡಿಸುವಂತೆ ಮನವಿ ಮಾಡಿದರು.

11 ಸಾವಿರ ಕೋಟಿ ನಾಪತ್ತೆ:

ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಲ್ಲಿ ಭ್ರಷ್ಟಾಚಾರ ನಡೆಸುತ್ತಾ, ಕುರ್ಚಿ ಕಿತ್ತಾಟದಲ್ಲೇ ಕಾಲ ಕಳೆಯುತ್ತಿದೆ. 2024ರಲ್ಲಿ 3 ತಿಂಗಳು ಹಾಗೂ 2025ರ 2 ತಿಂಗಳ ಸೇರಿ ಒಟ್ಟು 5 ತಿಂಗಳ ₹11 ಸಾವಿರ ಕೋಟಿ ನಾಪತ್ತೆಯಾಗಿದೆ. ಈ ಕುರಿತು ಬಿಜೆಪಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಇಡೀ ದೇಶದಲ್ಲಿ ಸುವರ್ಣ ಪಥ ಎಂಬ ಯೋಜನೆಯಡಿ ಎಲ್ಲೆಡೆ ಹೆದ್ದಾರಿ ನಿರ್ಮಿಸಿದ ಕೀರ್ತಿ ಅಟಲ್ ಜೀಗೆ ಸಲ್ಲುತ್ತದೆ. ಅವರ ಹಾದಿಯಲ್ಲಿಯೇ ಮೋದಿ ಸಹ ಇಂದು ನಡೆದುಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ಕುಬಸದ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯ ಪ್ರದೀಪ ಶೆಟ್ಟರ್, ಮಾಜಿ ಶಾಸಕ ಅಶೋಕ ಕಾಟವೆ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಂಜುನಾಥ ಕಾಟಕರ, ಡಾ. ಕ್ರಾಂತಿಕಿರಣ, ರಂಗಾ ಬದ್ದಿ, ರಾಜು ಕಾಳೆ ಸೇರಿದಂತೆ ಹಲವರಿದ್ದರು.