ಕಡೂರುಸನಾತನ ಧರ್ಮದ ಶಾಸ್ತ್ರಗಳು ಸಾರುವ ಸದ್ವಿಚಾರ, ಸತ್ಕರ್ಮಗಳ ಅನುಷ್ಠಾನದಿಂದ ಜೀವನ ಸಾರ್ಥಕ್ಯ ಮತ್ತು ಮೋಕ್ಷ ಸಾಧಿಸಬಹುದು ಎಂದು ಶೃಂಗೇರಿ ಶಂಕರಾಚಾರ್ಯ ಪೀಠದ ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ವಿಜಯಯಾತ್ರೆ ಅಂಗವಾಗಿ ಕಡೂರಿ ಚಂದ್ರಮೌಳೇಶ್ವರನಿಗೆ ಪೂಜೆ ಸಲ್ಲಿಸಿ ಶಂಕರಮಠದಲ್ಲಿ ಆಶೀರ್ವಚನ

ಕನ್ನಡಪ್ರಭ ವಾರ್ತೆ, ಕಡೂರು

ಸನಾತನ ಧರ್ಮದ ಶಾಸ್ತ್ರಗಳು ಸಾರುವ ಸದ್ವಿಚಾರ, ಸತ್ಕರ್ಮಗಳ ಅನುಷ್ಠಾನದಿಂದ ಜೀವನ ಸಾರ್ಥಕ್ಯ ಮತ್ತು ಮೋಕ್ಷ ಸಾಧಿಸಬಹುದು ಎಂದು ಶೃಂಗೇರಿ ಶಂಕರಾಚಾರ್ಯ ಪೀಠದ ಕಿರಿಯ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಬುಧವಾರ ವಿಜಯಯಾತ್ರೆ ಅಂಗವಾಗಿ ಕಡೂರು ಪಟ್ಟಣಕ್ಕೆ ಆಗಮಿಸಿ ಕೋಟೆಯ ಶ್ರೀ ಚಂದ್ರಮೌಳೇಶ್ವರನಿಗೆ ಪೂಜೆ ಸಲ್ಲಿಸಿ ಶಂಕರಮಠದಲ್ಲಿ ಆಶೀರ್ವಚನ ನೀಡಿದರು. ಒಳಿತಿನ ವಿಚಾರ ಅನುಸರಿಸಿ ಅನುಷ್ಠಾನಕ್ಕೆ ತರುವುದು ಸುಲಭವಲ್ಲ. ವಿವೇಚನಾ ಶಕ್ತಿ ಇರುವ ನಾವು ಬಹಳಷ್ಟು ಬಾರಿ ಇದು ತಪ್ಪು ಎಂದು ತಿಳಿದೂ ಉತ್ಸುಕತೆಯಿಂದ ಕೆಲಸ ಮಾಡಲು ಮುಂದಾಗುತ್ತೇವೆ. ಅಂತವರು ನಿಜಾರ್ಥದಲ್ಲಿ ಅಂಧರು ಎಂದು ಆಚಾರ್ಯ ಶಂಕರರು ಹೇಳಿದ್ದಾರೆ.

ಒಳ್ಳೆಯ ವಿಷಯಗಳನ್ನು ಆಲಿಸದವರು ಕಿವುಡರು, ಬೇರೆಯವರಿಗೆ ಸುಖವಾಗುವಂತೆ ಮಾತು ಆಡದ, ಸರಿಯಾದ ಸಮಯದಲ್ಲಿ ಮಾತನಾಡದವರು ಮೂರ್ಖರು ಎನ್ನುವುದು ಆಚಾರ್ಯರ ಮಾತಿನ ಸಾರ. ನಮಗೆ ದೊರೆತ ಸಮಯವನ್ನು ನಾವು ಸದ್ಬಳಕೆ ಮಾಡಿಕೊಂಡು ಒಳ್ಳೆಯ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು. ಸಂಸ್ಕಾರದಿಂದ ಶಿಲೆಯೇ ದೇವರಾಗಬಹುದಾದರೆ, ಮಾನವರೂ ದೇವರಾಗಲು ಸಾಧ್ಯವಿದೆ. ಅದಕ್ಕಾಗಿ ಪರರನ್ನು ದ್ವೇಷಿ ಸದೆ. ಇನ್ನೊಬ್ಬರಿಂದ ಲಾಭದ ನಿರೀಕ್ಷೆ ಬೇಡದ, ಮೇಲು-ಕೀಳು ಭಾವ ತೋರದ ಮತ್ತು ಅನಗತ್ಯ ವಿಷಯಗಳಲ್ಲಿ ಮಧ್ಯ ಪ್ರವೇಶಿಸದ ಗುಣಬೇಕು. ನಾವು ಮಾಡುವ ಕರ್ಮಗಳ ಫಲಗಳು ಖಂಡಿತ ಲಭಿಸುತ್ತವೆ. ಕೆಲವು ಬಾರಿ ಒಳ್ಳೆ ಅಥವಾ ಕೆಟ್ಟ ಕೆಲಸಕ್ಕೆ ನಮ್ಮ ವಿಧಿಗೆ ಅನುಗುಣವಾಗಿ ತಡವಾಗಿ ಫಲ ಲಭಿಸಬಹುದು. ನಿಮ್ಮ ಅಂತರಾತ್ಮ ಹೇಳಿದರೂ ಲೆಕ್ಕಿಸದೆ ನೀವು ಮಾಡಿದ ಕೆಲಸಕ್ಕೆ ದೊರೆತದ್ದನ್ನು ಅನುಭವಿಸಬೇಕಿರುವುದು ಅನಿವಾರ್ಯ. ಆದ್ದರಿಂದ ಗೀತಾಚಾರ್ಯ ಹೇಳಿರುವಂತೆ ಸಮ ಭಾವ ನಮ್ಮಲ್ಲಿ ಮೂಡಲಿಕ್ಕೆ ಸತ್ಕರ್ಮ ಆಚರಿಸುವ, ಬಂದಂತೆ ಫಲ ಸ್ವೀಕರಿಸುವ ಸದ್ಗುಣ ಬೆಳೆಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಮಾಜಿ ಶಾಸಕ ವೈ.ಎಸ್‌.ವಿ.ದತ್ತ ಮಾತನಾಡಿ ಬಹುದಿನಗಳ ನಂತರ ಕಡೂರು ಶಂಕರ ಮಠಕ್ಕೆ ಗುರುಗಳ ಆಗಮನದಿಂದ ಬಾಯಾರಿದವನ ಬಳಿಗೆ ಬಾವಿಯೇ ಬಂದಂತಾಗಿದೆ. ಶಾರದಾ ಪೀಠದ ಕಿರಿಯ ಶ್ರೀಗಳ ಕಾರ್ಯತತ್ಪರತೆ ಪ್ರಾಚೀನ-ಅರ್ವಾಚೀನಗಳ ಸಮನ್ವಯ ರೂಪವಾಗಿ ಸಂಚಲನ ಮೂಡಿಸಿದೆ. ಆಧ್ಯಾತ್ಮಿಕ ಮತ್ತು ಲೌಕಿಕ ಸಮನ್ವಯಕ್ಕೂ ಶ್ರೀಗಳು ಮಾರ್ಗದರ್ಶಕರಾಗಿದ್ದಾರೆ. 2026 ಕಡೂರು ಶಂಕರಮಠದ ರಜತೋತ್ಸವ ವರ್ಷವಾಗಿದ್ದು, ಈ ವರ್ಷದಲ್ಲಿ ಹಿರಿಯ ಗುರುಗಳ ಆಶಯದಂತೆ ಕಡೂರು ಶಂಕರಮಠವನ್ನು ಹೊಸ ಜಾಗದಲ್ಲಿ ನಿರ್ಮಾಣ ಮಾಡುವ ಕನಸಿನ ಸಾಕಾರಕ್ಕೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು. ಚಿಂತಕ ಚಟ್ನಳ್ಳಿ ಮಹೇಶ್‌ ಮಾತನಾಡಿ, ಅರಿವಿನ ಸಾಕ್ಷಾತ್ಕಾರವೇ ಗುರು ಕಾರುಣ್ಯ. ಅದು ಮುಕ್ತಿ ದಾರಿಯೂ ಆಗಿದೆ. ಶಂಕರರ ತತ್ವಕ್ಕೆ ವಚನಗಳು ಸಾಮಿಪ್ಯದಲ್ಲಿವೆ. ಶಂಕರರು, ಜ್ಞಾನ, ವಿಜ್ಞಾನ, ಪ್ರಜ್ಞಾನ, ಸಂಜ್ಞಾನಗಳ ಪ್ರಕಾಶವನ್ನು ದಶ ದಿಕ್ಕುಗಳಿಗೂ ಹರಡಿದವರು ಎಂದರು. ಮಂಗಳವಾರ ರಾತ್ರಿ ಮೈಸೂರಿನಿಂದ ಶಂಕರ ಮಠಕ್ಕೆ ಆಗಮಿಸಿದ ಶ್ರೀಯವರಿಗೆ ಪೂರ್ಣಕುಂಭ ಸ್ವಾಗತ, ಧೂಳಿ ಪಾದಪೂಜೆ ನೆರವೇರಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಕಡೂರಿನ ಕಲಾವಿದ ಪ್ರಮೋದ್‌ ಪೆನ್ಸಿಲ್‌ ಮೂಲಕ ತಾವು ರಚಿಸಿದ ಚಂದ್ರಶೇಖರ ಭಾರತೀ ಶ್ರೀಯವರ ಭಾವಚಿತ್ರವನ್ನು ವಿಧುಶೇಖರ ಭಾರತೀ ಶ್ರೀಯವರಿಗೆ ಅರ್ಪಿಸಿದರು.

ಶಂಕರಮಠದ ಗೌರವ ನಿರ್ವಾಹಕ ಕೆ.ಜಿ.ಮಂಜುನಾಥ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಚೋಮನಹಳ್ಳಿ ಶ್ರೀನಿವಾಸ್‌, ಶ್ರೀಮಠದ ಪುರೋಹಿತ ಶಿವಕುಮಾರ ಶರ್ಮ ತಂಗಿರಾಲ, ಗಣೇಶ ಭಟ್‌, ನಾಯಕ್‌ ಸಚ್ಚಿದಾನಂದ, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್‌, ಬೀರೂರು ಶ್ರೀರಾಮಸೇವಾ ಸಂಘದ ಉಪಾಧ್ಯಕ್ಷ ವೆಂಕಟೇಶ ಜಿ. ಒಡೆಯರ್‌, ಶಿವ ಶಂಕರ್‌, ವಿವಿಧ ಮಹಿಳಾ ಮಂಡಳಿ, ಭಕ್ತ ಮಂಡಳಿಗಳ ಸದಸ್ಯರು, ಕಡೂರು, ಚಿಕ್ಕಮಗಳೂರು, ತರೀಕೆರೆ, ಅಜ್ಜಂಪುರ ಮೊದಲಾದ ಕಡೆಗಳಿಂದ ಆಗಮಿಸಿದ್ದ ಭಕ್ತರು ಇದ್ದರು.

24ಕೆಕೆಡಿಯು4.

ವಿಜಯಯಾತ್ರೆ ಅಂಗವಾಗಿ ಶ್ರೀ ವಿಧುಶೇಖರ ಭಾರತಿ ಶ್ರೀಗಳು ಕಡೂರು ಪಟ್ಟಣಕ್ಕೆ ಆಗಮಿಸಿ ಕೋಟೆಯಲ್ಲಿರುವ ಶ್ರೀ ಚಂದ್ರಮೌಳೇಶ್ವರನಿಗೆ ಪೂಜೆ ಸಲ್ಲಿಸಿ ಶಂಕರಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.