ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ

KannadaprabhaNewsNetwork |  
Published : Jul 04, 2026, 01:45 AM IST
3ಎಚ್ಎಸ್ಎನ್4 :  | Kannada Prabha

ಸಾರಾಂಶ

ಬಾಲ್ಯದಲ್ಲಿಯೇ ಮಕ್ಕಳನ್ನು ಶಿಸ್ತು, ಸನ್ನಡತೆ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಬೆಳೆಸಿದರೆ ಅವರು ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು. ಪ್ರತಿಯೊಬ್ಬ ಮಹಿಳೆ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ಮಕ್ಕಳಿಗೆ ಸಂಸ್ಕಾರದ ಬೀಜ ಬಿತ್ತುವ ಮೊದಲ ಗುರುವಾಗಬೇಕು. ಮಕ್ಕಳಲ್ಲಿ ಸತ್ಯ, ಪ್ರಾಮಾಣಿಕತೆ, ಹಿರಿಯರ ಬಗ್ಗೆ ಗೌರವ, ಕರುಣೆ ಹಾಗೂ ಸಾಮಾಜಿಕ ಹೊಣೆಗಾರಿಕೆಯಂತಹ ಮೌಲ್ಯಗಳನ್ನು ಬಾಲ್ಯದಿಂದಲೇ ಬೆಳೆಸುವುದು ಪೋಷಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಅಡಿಪಾಯ ಬಾಲ್ಯದಲ್ಲಿಯೇ ಹಾಕಲಾಗುತ್ತದೆ. ಆದ್ದರಿಂದ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನೂ ನೀಡಬೇಕು ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಕರೆ ನೀಡಿದರು.

ನಗರದ ಬಿಜಿಎಸ್ ಶಾಲೆಯಲ್ಲಿ ೨೦೨೬-೨೭ನೇ ಶೈಕ್ಷಣಿಕ ವರ್ಷದ ಪುಟಾಣಿ ಮಕ್ಕಳಿಗಾಗಿ ಆಯೋಜಿಸಿದ್ದ ವಿದ್ಯಾರಂಭ ‘ಅಕ್ಷರಭ್ಯಾಸ’ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮನೆಯೇ ಮೊದಲ ಪಾಠಶಾಲೆ ಹಾಗೂ ತಾಯಿಯೇ ಮೊದಲ ಗುರು ಎಂಬ ಮಾತಿನ ಮಹತ್ವವನ್ನು ಪೋಷಕರು ಅರಿತು ನಡೆದುಕೊಳ್ಳಬೇಕು. ‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ’ ಎಂಬ ಗಾದೆಯನ್ನು ಉಲ್ಲೇಖಿಸಿದ ಸ್ವಾಮೀಜಿಯವರು, ಬಾಲ್ಯದಲ್ಲಿಯೇ ಮಕ್ಕಳನ್ನು ಶಿಸ್ತು, ಸನ್ನಡತೆ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳೊಂದಿಗೆ ಬೆಳೆಸಿದರೆ ಅವರು ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು. ಪ್ರತಿಯೊಬ್ಬ ಮಹಿಳೆ ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ಮಕ್ಕಳಿಗೆ ಸಂಸ್ಕಾರದ ಬೀಜ ಬಿತ್ತುವ ಮೊದಲ ಗುರುವಾಗಬೇಕು. ಮಕ್ಕಳಲ್ಲಿ ಸತ್ಯ, ಪ್ರಾಮಾಣಿಕತೆ, ಹಿರಿಯರ ಬಗ್ಗೆ ಗೌರವ, ಕರುಣೆ ಹಾಗೂ ಸಾಮಾಜಿಕ ಹೊಣೆಗಾರಿಕೆಯಂತಹ ಮೌಲ್ಯಗಳನ್ನು ಬಾಲ್ಯದಿಂದಲೇ ಬೆಳೆಸುವುದು ಪೋಷಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ ಎಂಬ ಭಾರತೀಯ ಸಂಸ್ಕೃತಿಯ ಶಾಶ್ವತ ಮೌಲ್ಯಗಳನ್ನು ಮಕ್ಕಳ ಜೀವನದಲ್ಲಿ ಅಳವಡಿಸಬೇಕು. ತಾಯಿ, ತಂದೆ ಮತ್ತು ಗುರುಗಳನ್ನು ದೇವರ ಸಮಾನವಾಗಿ ಗೌರವಿಸುವ ಸಂಸ್ಕಾರ ಮಕ್ಕಳ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಿದರು. ದಾನಗಳಲ್ಲಿ ವಿದ್ಯಾದಾನವೇ ಶ್ರೇಷ್ಠ. ಹೊಲಕ್ಕೆ ಬಿತ್ತಿದ ಬೆಳೆ ಹೇಗೆ ಫಲ ನೀಡುತ್ತದೆಯೋ, ತಲೆಗೆ ಅಂಟಿದ ಅಕ್ಷರ ಜೀವನಪೂರ್ತಿ ಮನುಷ್ಯನಿಗೆ ದಾರಿದೀಪವಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ನೀಡುವ ಶಿಕ್ಷಣ ಮತ್ತು ಸಂಸ್ಕಾರವೇ ಅವರ ಭವಿಷ್ಯದ ಅಮೂಲ್ಯ ಸಂಪತ್ತಾಗಿದೆ ಎಂದು ಸ್ವಾಮೀಜಿಯವರು ಅಭಿಪ್ರಾಯಪಟ್ಟರು.ನಂತರ ಪುಟಾಣಿ ಮಕ್ಕಳಿಗೆ ಸ್ವತಃ ಕೈಹಿಡಿದು ಅಕ್ಷರಾಭ್ಯಾಸ ಮಾಡಿಸಿ, ಸರಸ್ವತಿ ದೇವಿಯ ಕೃಪೆಯಿಂದ ಮಕ್ಕಳು ಜ್ಞಾನವಂತರಾಗಿ, ಸಂಸ್ಕಾರವಂತರಾಗಿ, ಸಮಾಜಕ್ಕೆ ಮಾದರಿಯಾಗುವ ವ್ಯಕ್ತಿಗಳಾಗಿ ಬೆಳೆಯಲಿ ಎಂದು ಆಶೀರ್ವದಿಸಿದರು.ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ನೂರಾರು ಪೋಷಕರು ತಮ್ಮ ಮಕ್ಕಳೊಂದಿಗೆ ಪಾಲ್ಗೊಂಡಿದ್ದರು. ವಿದ್ಯಾರಂಭದ ಈ ಅಕ್ಷರಭ್ಯಾಸ ಕಾರ್ಯಕ್ರಮವು ಮಕ್ಕಳ ಶೈಕ್ಷಣಿಕ ಜೀವನಕ್ಕೆ ಶುಭಾರಂಭವಾಗುವುದರ ಜೊತೆಗೆ, ಸಂಸ್ಕಾರಯುತ ಶಿಕ್ಷಣದ ಮಹತ್ವವನ್ನು ಪೋಷಕರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರದ ಸವವಲತ್ತುಗಳನ್ನು ಶ್ರಮಿಕ ವರ್ಗದವರು ಸದ್ಭಳಕೆ ಮಾಡಬೇಕು: ಡಾ.ಕೆ.ಪಿ.ಅಂಶುಮಂತ್
ಡೇರಿ ಸಿಬ್ಬಂದಿ ಆರೋಗ್ಯ ಕಾಳಜಿ ವಹಿಸಿ: ಬಮೂಲ್‌ ನಿರ್ದೇಶಕ