ಸ್ವಚ್ಛ ಭಾರತ್ ಮಿಷನ್; ಸಮಗ್ರ ಘನತಾಜ್ಯ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ
ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಸ್ವಚ್ಛ ಭಾರತ್ ಯೋಜನೆಯ ಉದ್ದೇಶ ಯಶಸ್ವಿಗೊಳಿಸಲು ತಮ್ಮೆಲ್ಲರ ಪಾತ್ರ ಅತಿ ಮುಖ್ಯವಾಗಿದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್. ಮಂಜುನಾಥ್ ಹೇಳಿದರು.
ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲೆಯ ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ರ ಸಾಮರ್ಥ್ಯ ಅಭಿವೃದ್ದಿ ಘಟಕದಡಿ ಸಮಗ್ರ ಘನ ತ್ಯಾಜ್ಯ ವಸ್ತು ನಿರ್ವಹಣೆಯ ಕುರಿತು ನಗರದ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಆರೋಗ್ಯಕರ ಮತ್ತು ಸುಸ್ಥಿರ ಸಮುದಾಯಗಳನ್ನು ನಿರ್ಮಿಸಲು ತ್ಯಾಜ್ಯ ನಿರ್ವಹಣೆಯು ಅತ್ಯಗತ್ಯವಾಗಿದೆ. ತರಬೇತಿಯನ್ನು ಪಡೆದ ಎಲ್ಲಾ ಅಧಿಕಾರಿ/ಸಿಬ್ಬಂದಿ ಮತ್ತು ಕಮ್ಯುನಿಟಿ ಮೊಬೆಲೈಜರ್ ಗಳು ತಮ್ಮ–ತಮ್ಮ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕ್ರಿಯಾಶೀಲರಾಗಿ ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಸ್ವಚ್ಛ ನಗರ, ಪಟ್ಟಣಗಳನ್ನಾಗಿ ಮಾರ್ಪಾಡಿಸಲು ಎಲ್ಲರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಮುಖ್ಯ ಪರಿಸರ ಅಧಿಕಾರಿ ರಮೇಶ್ ಬಿ.ಎನ್. ಮಾತನಾಡಿ, ಕಸದ ಉತ್ಪಾದನೆಯನ್ನು ಕಡಿಮೆ ಮಾಡಲು, ಮರುಬಳಕೆ ಮತ್ತು ಅದನ್ನು ಗರಿಷ್ಠಗೊಳಿಸಲು ಹಾಗೂ ಪರಿಸರದ ಮೇಲಿನ ತ್ಯಾಜ್ಯದ ಪರಿಣಾಮವನ್ನು ಕಡಿಮೆ ಮಾಡಲು ಸಮಗ್ರ ತ್ಯಾಜ್ಯ ನಿರ್ವಹಣೆಯು ವಿಶಾಲವಾದ ಕಾರ್ಯಚಟುವಟಿಕೆಯಾಗಿದೆ. ಸಮುದಾಯಗಳಲ್ಲಿ ಉತ್ಪಾದನೆಯಾಗುವ ಕಸ, ಕಸದ ಸಂಗ್ರಹ, ಸಾಗಣೆ, ವಿಂಗಡಣೆ, ಸಂಸ್ಕರಣೆ ಮತ್ತು ವಿಲೇವಾರಿ ಪ್ರಕ್ರಿಯೆಗಳನ್ನು ಸೂಕ್ತವಾಗಿ ಅರಿತುಕೊಳ್ಳಬೇಕು. ಆರೋಗ್ಯಕರ ಮತ್ತು ಸುಸ್ಥಿರ ಸಮುದಾಯಗಳನ್ನು ನಿರ್ಮಿಸಲು ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಪ್ರಮುಖ ಗುರಿಯಾಗಿದೆ ಎಂದರು.
ಪೌರಕಾರ್ಮಿಕರಿಗೆ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಸುರಕ್ಷತಾ ಸಾಧನಗಳ ಬಳಕೆ ಹಾಗೂ ನಿರ್ವಹಣೆಗಳ ಕುರಿತು ಹಾಗೂ ಪ್ರಥಮ ಚಿಕಿತ್ಸೆಯ ಕಿಟ್ ಬಳಕೆಯ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಸ್ವಚ್ಛ ಸರ್ವೇಕ್ಷಣೆ -2025ರನ್ವಯ ಜಿಲ್ಲೆಯ ಫಲಿತಾಂಶ ಹಾಗೂ ಶ್ರೇಣಿಯ ಕುರಿತು ಪರಿಶೀಲನೆ ಮಾಡಿ, ಆಯಾ ಹಂತ, ಘಟಕದಲ್ಲಿ ಕಂಡುಬಂದ ಲೋಪ-ದೋಷಗಳ ನ್ಯೂನ್ಯತೆ ಸರಿಪಡಿಸಿಕೊಳ್ಳುವ ಕುರಿತು ವಿಶ್ಲೇಷಿಸಲಾಯಿತು.