ಕಲುಷಿತ ನೀರು ಕುಡಿದು 50ಕ್ಕೂ ಅಧಿಕ ಜನ ಅಸ್ವಸ್ಥ

KannadaprabhaNewsNetwork |  
Published : Sep 10, 2025, 01:03 AM IST
9ಎಚ್‌ಯುಬಿ27ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುಡಿಸಾಗರ ಗ್ರಾಮಸ್ಥರು. | Kannada Prabha

ಸಾರಾಂಶ

ಗ್ರಾಮದ ಕೆರೆ ನೀರು ಕಲುಷಿತಗೊಂಡಿದ್ದರೂ ಈ ಹಿಂದೆ ಮಲಪ್ರಭಾ ಕಾಲುವೆಯಿಂದ ಕೆರೆಗೆ ನೀರು ತುಂಬಿಸಲಾಗಿದೆ. ಈ ಸಂದರ್ಭದಲ್ಲಿ ಕೆರೆ ಸ್ವಚ್ಛಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದರೂ ಕಲುಷಿತ ನೀರಿಗೆ ಹೊಸ ನೀರು ತುಂಬಿಸಲಾಗಿದೆ. ಇದರಿಂದಾಗಿ ಎಲ್ಲ ನೀರೂ ಕಲುಷಿತಗೊಂಡಿದೆ.

ನವಲಗುಂದ: ಕೆರೆ ನೀರು ಕುಡಿದು 50ಕ್ಕೂ ಅಧಿಕ ಜನ ಅಸ್ವಸ್ಥರಾದ ಘಟನೆ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಅಸ್ವಸ್ಥರಾದವರನ್ನು ನವಲಗುಂದ ಸರ್ಕಾರಿ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಸ್ವಸ್ಥರಾದವರಲ್ಲಿ ಮಕ್ಕಳು, ವಯೋವೃದ್ಧರೂ ಇದ್ದು, ಸದ್ಯಕ್ಕೆ ಅಪಾಯದಿಂದ ಪಾರಾಗಿದ್ದಾರೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ 16ಕ್ಕೂ ಹೆಚ್ಚು ಜನರನ್ನು ದಾಖಲಿಸಲಾಗಿದ್ದು, ಚೇತರಿಸಿಕೊಂಡಿದ್ದಾರೆ. ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಎರಡ್ಮೂರು ದಿನದಲ್ಲಿ ಎಲ್ಲರೂ ಗುಣಮುಖರಾಗಲಿದ್ದಾರೆ ಎಂದು ಆಸ್ಪತ್ರೆ ವೈದ್ಯ ಡಾ. ಅಜಯ ಪಿ. ತಿಳಿಸಿದ್ದಾರೆ.

ಗ್ರಾಪಂ ನಿರ್ಲಕ್ಷ್ಯ ಆರೋಪ: ಗ್ರಾಮದ ಕೆರೆ ನೀರು ಕಲುಷಿತಗೊಂಡಿದ್ದರೂ ಈ ಹಿಂದೆ ಮಲಪ್ರಭಾ ಕಾಲುವೆಯಿಂದ ಕೆರೆಗೆ ನೀರು ತುಂಬಿಸಲಾಗಿದೆ. ಈ ಸಂದರ್ಭದಲ್ಲಿ ಕೆರೆ ಸ್ವಚ್ಛಗೊಳಿಸುವಂತೆ ಗ್ರಾಮಸ್ಥರು ಮನವಿ ಮಾಡಿದರೂ ಕಲುಷಿತ ನೀರಿಗೆ ಹೊಸ ನೀರು ತುಂಬಿಸಲಾಗಿದೆ. ಇದರಿಂದಾಗಿ ಎಲ್ಲ ನೀರೂ ಕಲುಷಿತಗೊಂಡಿದೆ. ಪ್ರಸ್ತುತ ಅದೇ ನೀರನ್ನು ನಲ್ಲಿಗಳ ಮೂಲಕ ಪೂರೈಸಲಾಗುತ್ತಿದೆ. ನೀರು ಶುದ್ಧೀಕರಿಸದೇ ಪೂರೈಸಿದ್ದು, ಅದೇ ನೀರು ಕುಡಿದ ಗ್ರಾಮಸ್ಥರು ಮಂಗಳವಾರ ಏಕಾಏಕಿ ಅಸ್ವಸ್ಥಗೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಹಸೀಲ್ದಾರ್ ಸುಧೀರ ಸಾಹುಕಾರ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು. ಸದ್ಯಕ್ಕೆ ಯಾರು ಕೂಡ ಕೆರೆ ನೀರು ಬಳಕೆ ಮಾಡಬಾರದು ಎಂದು ಗ್ರಾಮದಲ್ಲಿ ಡಂಗುರ ಸಾರಲಾಗಿದೆ. ಅಲ್ಲದೆ ಆಶಾ ಕಾರ್ಯಕರ್ತರ ಮೂಲಕ ಪ್ರತಿ ಮನೆ ಮನೆಗೆ ತಿಳಿಸಲಾಗಿದೆ. ಕೂಡಲೇ ಟ್ಯಾಂಕರ್‌ ಮೂಲಕ ಬೇರೆ ನೀರನ್ನು ಕುಡಿಯಲು ಸರಬರಾಜು ಮಾಡಲಾಗುವುದು. ಆಸ್ಪತ್ರೆ ದಾಖಲಾದ ಎಲ್ಲರಿಗೂ ಚಿಕಿತ್ಸೆ ಕೊಡಿಸಲಾಗಿದ್ದು, ಸದ್ಯಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಹಸೀಲ್ದಾರ್ ಸುಧೀರ್ ಸಾಹುಕಾರ್ ತಿಳಿಸಿದ್ದಾರೆ.

ಸುದ್ದಿ ತಿಳಿದು ನವಲಗುಂದ ತಾಲೂಕು ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಸ್‌.ಎಂ. ಹೊನಕೇರಿ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರಿಗೆ ಸಮರ್ಪಕ ಚಿಕಿತ್ಸೆ ನೀಡಲಾಗಿದೆ. ಗುಡಿಸಾಗರ ಗ್ರಾಮಕ್ಕೆ ಬುಧವಾರದಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತದೆ. ನಂತರ ಸಂಬಂಧಿಸಿದ ಅಧಿಕಾರಿಗಳಿಂದ ವರದಿ ಪಡೆದು ಮೇಲಧಿಕಾರಿಗಳ ಸೂಚನೆಯಂತೆ ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್‌ ಸುಧೀರ ಸಾಹುಕಾರ ಹೇಳಿದರು.

PREV

Recommended Stories

ಫಾರಿನ್‌ಗೆ ಅನ್ನಭಾಗ್ಯ ಅಕ್ಕಿ 2 ರೈಸ್‌ಮಿಲ್‌ ಜಫ್ತಿ: ಕೇಸು
ಮುಂದೇಕೆ, ಈಗ್ಲೆ ಮುಸ್ಲಿಂ ಆಗ್ಬಿಡಿ : ಬಿಜೆಪಿಗರ ಕಿಡಿ