- ಪ್ರತಿಭಟನೆಯಲ್ಲಿ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಆಗ್ರಹ । ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ, ಮನವಿ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸಿ, ಸಾಮಾಜಿಕ ನ್ಯಾಯ ನೀಡುವಂತೆ ಒತ್ತಾಯಿಸಿ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸಮಿತಿ ಜಿಲ್ಲಾಧ್ಯಕ್ಷ ಸಿ.ಬಸವರಾಜ, ಸಮಾಜದ ಹಿರಿಯ ಮುಖಂಡ ಆಲೂರು ನಿಂಗರಾಜ ಮತ್ತಿತರ ಮುಖಂಡರ ನೇತೃತ್ವದಲ್ಲಿ ಹಳೇ ಪಿಬಿ ರಸ್ತೆ ಮಾರ್ಗವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ, ಅಪರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಅರ್ಪಿಸಲಾಯಿತು.
ಮುಖಂಡ ಸಿ.ಬಸವರಾಜ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವಂತೆ 35 ವರ್ಷಗಳಿಂದಲೂ ನಿರಂತರ ಹೋರಾಟ ನಡೆಸಿಕೊಂಡು ಬರಲಾಗಿದೆ. ಒಳಮೀಸಲಾತಿಗಾಗಿ ನಡೆದ ಹೋರಾಟಲ್ಲಿ ಅನೇಕ ಸಾವು, ನೋವುಗಳು ಸಂಭವಿಸಿವೆ. ಈ ಹೋರಾಟಕ್ಕಾಗಿ ಒಂದು ತಲೆಮಾರಿನ ಜನರ ಜೀವನವೇ ಬಲಿಯಾಗಿದೆ. ಸಾಮಾಜಿಕ ನ್ಯಾಯ ಕೊಡಬೇಕೆಂಬ ಕನಿಷ್ಠ ಅರಿವು, ಜ್ಞಾನವೇ ಆಳುವ ಸರ್ಕಾರಕ್ಕೆ ಇಲ್ಲ ಎಂದು ಕಿಡಿಕಾರಿದರು.ಒಳ ಮೀಸಲಾತಿ ನೀಡುವುದು ಆಯಾ ರಾಜ್ಯ ಸರ್ಕಾರಗಳು ಎಂಬುದಾಗಿ ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಪೀಠವು ತೀರ್ಪು ನೀಡಿ, ಆ.1ಕ್ಕೆ ಸರಿಯಾಗಿ 1 ವರ್ಷವೇ ಕಳೆಯುತ್ತಿದೆ. ಆಯಾ ರಾಜ್ಯಾಡಳಿತಗಳಿಗೇ ಒಳಮೀಸಲಾತಿ ಜಾರಿ ಅಧಿಕಾರವಿದೆ ಎಂಬ ಆದೇಶ ಹೊರಬಿದ್ದಿದೆ. ಆದರೂ ರಾಜ್ಯ ಸರ್ಕಾರ ಮೀನಾ ಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯಗಳ ಒಳಮೀಸಲಾತಿ ವರ್ಗೀಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂಬ ಐತಿಹಾಸಿಕ ತೀರ್ಪು ಬಂದಿದ್ದರೂ, ಕರ್ನಾಟಕ ಸರ್ಕಾರ ಮಾತ್ರ ಕಡೆಗಣಿಸುತ್ತಿರುವುದು ಸರಿಯಲ್ಲ. ಸುದೀರ್ಘ ಹೋರಾಟ ನಡೆಸಿದ್ದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಹರಿಯಾಣ ರಾಜ್ಯಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕೆಲವೇ ತಿಂಗಳಲ್ಲಿ ಒಳ ಮೀಸಲಾತಿ ಜಾರಿಗೊಂಡಿತು. ಆದರೆ, ನಮ್ಮ ರಾಜ್ಯದಲ್ಲೇ ಆಗಿಲ್ಲ ಎಂದು ಅವರು ಕಿಡಿಕಾರಿದರು.ಆಲೂರು ನಿಂಗರಾಜ ಮಾತನಾಡಿ, ಒಳಮೀಸಲಾತಿ ಜಾರಿಗೊಳಿಸುವುದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಿಂದ ಮಾದಿಗ ಸಮುದಾಯಕ್ಕೆ ಘೋರ ಅನ್ಯಾಯವಾಗಿದೆ. 51 ಅಲೆಮಾರಿ ಸಮುದಾಯಕ್ಕೂ ಒಳಮೀಸಲಾತಿ ಜಾರಿಯಿಂದ ಅನುಕೂಲವಾಗಲಿದೆ. ಮೀಸಲಾತಿ ವರ್ಗೀಕರಣ ಆಗಲೇಬೇಕು. ಪರಿಶಿಷ್ಟ ಜಾತಿಯ 101 ಜಾತಿಗಳಿಗೂ ಇದರಿಂದ ಅನುಕೂಲವಾಗಲಿದೆ. ನಮ್ಮ ಹಕ್ಕಿಗಾಗಿ ನಮ್ಮ ಹೋರಾಟವೇನಿದ್ದರೂ ಒಳಮೀಸಲಾತಿ ಜಾರಿಗೊಳ್ಳುವವರೆಗೆ ಎಂದು ತಿಳಿಸಿದರು.
ಸಮಿತಿ ಹಾಗೂ ಸಮಾಜದ ಮುಖಂಡರಾದ ಎಚ್.ಡಿ.ಉದಯಪ್ರಕಾಶ, ಸದಾನಂದ ಎಂ.ಚಿಕ್ಕನಹಳ್ಳಿ, ಎಸ್.ಎಚ್.ದುಗ್ಗಪ್ಪ ಜೆಡಿಎಸ್, ಜಿಗಳಿ ಹಾಲೇಶ, ರಾಜು ಶಾಮನೂರು, ಎಚ್.ಸಿ.ಮಲ್ಲಪ್ಪ, ಕಾಡಸಿದ್ದರ ಹನುಮಂತಪ್ಪ, ಅಂಜಿನಪ್ಪ, ಹರೀಶ ಹೊನ್ನೂರು, ದುರುದೇಶ, ನಿಂಗರಾಜ ಶಿರಮಗೊಂಡನಹಳ್ಳಿ, ಆವರಗೆರೆ ಚಂದ್ರಪ್ಪ, ವಿಜಯ ಪುಟಗನಾಳ, ಮಂಜಣ್ಣ ಚನ್ನಗಿರಿ, ಪ್ರಕಾಶ, ಪ್ರಭಾಕರ, ದೀಪಕ್ ಕುಮಾರ, ರಮೇಶ, ಸುರೇಶ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಡಿ.ಹನುಮಂತಪ್ಪ, ಅಂಜಿನಪ್ಪ ಶಾಮನೂರು ಸೇರಿದಂತೆ ಮಾದಿಗ ಸಮುದಾಯದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.- - -
(ಕೋಟ್) ಯಾವುದೇ ಮೂಲಆಸ್ತಿ, ಉತ್ಪಾದನೆ, ಸಾಧನಗಳೂ ಮಾದಿಗ ಸಮುದಾಯಕ್ಕಿಲ್ಲ. ಅಸ್ಪೃಶ್ಯತೆ ಕಳಂಕವನ್ನು ಸಾವಿರಾರು ವರ್ಷಗಳಿಂದ ಅನುಭವಿಸುತ್ತಿದ್ದೇವೆ. ಶೋಷಣೆ, ದೌರ್ಜನ್ಯ, ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರಗಳನ್ನು ನಮ್ಮ ಪೂರ್ವಿಕರು ಅನುಭವಿಸಿದ್ದಾರೆ. ಮೀಸಲಾತಿಯಲ್ಲಿ ನಮಗೆ ಒಳಮೀಸಲಾತಿ ನೀಡಲು ಕಾಂಗ್ರೆಸ್ ಸರ್ಕಾರ ವಿಳಂಬ ಮಾಡುವುದನ್ನು ಇನ್ನು ನಾವು ಸಹಿಸಲು ಸಾಧ್ಯವಿಲ್ಲ.- ಆಲೂರು ನಿಂಗರಾಜ, ಹಿರಿಯ ಮುಖಂಡ.
- - --1ಕೆಡಿವಿಜಿ3, 4, 5, 6.ಜೆಪಿಜಿ:
ಒಳಮೀಸಲಾತಿ ಶೀಘ್ರ ಜಾರಿಗೆ ಆಗ್ರಹಿಸಿ ದಾವಣಗೆರೆಯಲ್ಲಿ ಡಾ.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಿ, ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಸಲಾಯಿತು.