- ಕಡೂರು. ಶಿವಮೊಗ್ಗ ಪ್ರಾದೇಶಿಕ ಜಂಟಿ ನಿರ್ದೇಶಕ ಕೇಶವ ಅಭಿಮತಕನ್ನಡಪ್ರಭ ವಾರ್ತೆ, ಕಡೂರು
ಸೋಮವಾರ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ₹5 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ಮತ್ತು ಸ್ನಾತಕೋತ್ತರ ವಿಭಾಗದ ಕಟ್ಟಡ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ಸೌಲಭ್ಯಗಳ ಅನುಷ್ಠಾನವೂ ತ್ವರಿತಗತಿಯಲ್ಲಿ ಸಾಗುತ್ತದೆ. ಅದಕ್ಕಾಗಿ ಪೋಷಕರು ಮತ್ತು ವಿದ್ಯಾರ್ಥಿಗಳ ಸಹಕಾರ ಅತ್ಯಂತ ಅಗತ್ಯ. ಜತೆಗೆ ವಿವಿಧ ಕೋರ್ಸ್ ಆರಂಭಿಸುವ, ಉಪನ್ಯಾಸಕರನ್ನು ನೇಮಿಸುವ ಕೆಲಸಗಳೂ ನಡೆಯುತ್ತಿವೆ. ಈ ಭಾಗದಲ್ಲಿ ಜನಪ್ರತಿ ನಿಧಿಗಳ ನೆರವಿನಿಂದ ಕಾಲೇಜು ಸ್ಥಾಪನೆಗೊಂಡು ಚೆನ್ನಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳೂ ಕಲಿಯಲು ಬೇರೆ ಕಾಲೇಜು ಗಳನ್ನು ಆಶ್ರಯಿಸದೆ ಇಲ್ಲಿಯೇ ಸೇರುವಂತಾಗಬೇಕು. ಇಲ್ಲಿ ಸ್ನಾತಕೋತ್ತರ ವಿಭಾಗ ಸ್ಥಾಪನೆಯಾಗಲಿದೆ. ವಿದ್ಯಾರ್ಥಿಗಳ ಕೊರತೆಯಾಗದಂತೆ ಸ್ಥಳೀಯರು ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು. ಕಾಲೇಜಿನ ಹಿಂದಿನ ಪ್ರಾಂಶುಪಾಲ ಶರತ್ ಮಾತನಾಡಿ, ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ ನೀಡಿದ ಸಂದರ್ಭದಲ್ಲಿ ಬೇರೆ ಕಾರ್ಯಕ್ರಮದಲ್ಲಿ ಇದ್ದ ಶಾಸಕ ಕೆ.ಎಸ್.ಆನಂದ್ ಸ್ಥಳಕ್ಕೆ ಬಂದು ನ್ಯಾಕ್ ಸಮಿತಿ ಸದಸ್ಯರ ಜತೆ ಸಂವಹನ ನಡೆಸಿದ ಪರಿಣಾಮ ಯಗಟಿ ಕಾಲೇಜು ಗುರುತಿಸುವಂತಾಗಿದೆ. ಪಿ.ಎಂ.ಉಷಾ ಯೋಜನೆಯಲ್ಲಿ ₹4ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡಗಳು, ₹1ಕೋಟಿ ವೆಚ್ಚದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಯಾಗಲಿವೆ. 50 ಕಂಪ್ಯೂಟರ್ ಗಳನ್ನು ಒಳಗೊಂಡ ಲ್ಯಾಬ್ ಮತ್ತು ಡಿಜಿಟಲ್ ತಂತ್ರಜ್ಞಾನ ಒಳಗೊಂಡು ಉತ್ಕೃಷ್ಟ ಮಾಹಿತಿಗಳ ಸೇವೆ ವಿದ್ಯಾರ್ಥಿಗಳಿಗೆ ಲಭಿಸಲಿದೆ. ಶಿಕ್ಷಣ ಮತ್ತು ಕೌಶಲ್ಯ ಹೆಚ್ಚಿಸುವ ಸಲುವಾಗಿ ವಿಷಯ ತಜ್ಞರಿಂದ 8 ವಿಷಯಾಧಾರಿತ ಉಪನ್ಯಾಸಗಳು ಮತ್ತು 2 ವಿಚಾರ ಸಂಕಿರಣಗಳು ನಡೆಯಲಿವೆ. ವಿಚಾರ ಸಂಕಿರಣದಲ್ಲಿ ಕೃಷಿಕರ ಸಮಸ್ಯೆ ಕುರಿತು ಒಂದು ಸಂಕಿರಣ ನಡೆದರೆ, ಶಿಕ್ಷಕರು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಇನ್ನೊಂದು ಸಂಕಿರಣ ನಡೆಯುವುದು ಎಂದು ವಿವರಿಸಿದರು. ಪ್ರಾಂಶುಪಾಲ ರಾಜಣ್ಣ ಕೆ. ಮಾತನಾಡಿ, 2007 ರಿಂದ ಆರಂಭಗೊಂಡ ಪ್ರಥಮ ದರ್ಜೆ ಕಾಲೇಜು ಈ ಯೋಜನೆಗೆ ಅರ್ಹವಾಗಿವೆ. ಗ್ರಾಮೀಣ ಮಕ್ಕಳ ಶಿಕ್ಷಣದ ಉನ್ನತೀಕರಣದ ಸಲುವಾಗಿ ಯೋಜನೆಯಲ್ಲಿ ವಿವಿದೋದ್ದೇಶ ಸಭಾಂಗಣ, ದೊಡ್ಡ ಗ್ರಂಥಾಲಯ, ಉನ್ನತೀಕರಿಸಿದ ಪ್ರಯೋಗಾಲಯ, ಸ್ನಾತಕೋತ್ತರ ತರಗತಿಗೆ ಕಟ್ಟಡ ಹಾಗೂ ಜಿಲ್ಲೆಯಲ್ಲಿಯೇ ಪ್ರಥಮ ಎನ್ನಬಹುದಾದ ಒಳಾಂಗಣ ಕ್ರೀಡಾಂಗಣ ಸ್ಥಾಪನೆಯಾಗಲಿದೆ ಎಂದು ಮಾಹಿತಿ ನೀಡಿದರು. ಶಾಸಕರ ಪರವಾಗಿ ಮಾತನಾಡಿದ ಕಾರ್ಯದರ್ಶಿ ಸಿ.ಪ್ರಕಾಶ್, ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲು ಶಾಸಕರು ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿಯೇ ಪದವಿ ಶಿಕ್ಷಣ ಲಭಿಸುವಂತಾಗಿದೆ. ಉತ್ತಮ ಶಿಕ್ಷಣ ವ್ಯವಸ್ಥೆ ಮುಂದುವರಿಯಲು ಜನರ ಸಹಕಾರ, ಬೆಂಬಲದ ಮೇಲೆಯೇ ಕಾಲೇಜಿನ ಅಳಿವು- ಉಳಿವು ಅವಲಂಬಿಸಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗೋವಿಂದಪ್ಪ ಚನ್ನಪಿಳ್ಳೆ ಮಾತನಾಡಿ, ಶಾಸಕರ ದೂರ ದೃಷ್ಟಿಯಿಂದ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ದೊರೆತು ಹಳ್ಳಿಗಾಡಿನ ಮಕ್ಕಳು ಸಮೀಪದಲ್ಲೆ ಉನ್ನತ ಶಿಕ್ಷಣ ಪಡೆಯುವಂತಾಗಿರುವುದು ಕ್ಷೇತ್ರದ ಜನರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಎಚ್. ರಾಜಣ್ಣ, ಯಗಟಿ ಗ್ರಾಪಂ ಅಧ್ಯಕ್ಷೆ ಜ್ಯೋತಿ ವಿಶ್ವನಾಥ್, ಉಪಾಧ್ಯಕ್ಷೆ ದೀಪಾ, ಸದಸ್ಯರಾದ ಮೂರ್ತಿ ವೈ. ಎಚ್, ಶಂಕರನಾಯ್ಕ, ವೈ.ಬಿ.ಮಂಜುನಾಥ್, ಸತೀಶ್ ,ಕಲಾವತಿ,ಗಾಯತ್ರಿ ರವಿಕುಮಾರ್, ಭಾರತಿ ಬಸವರಾಜ್ ,ಮಾಲತಿಬಾಯಿ,ಲಕ್ಕಮ್ಮ,ಕಾಲೇಜಿನ ಅಭಿವೃದ್ದಿ ಸಮಿತಿಯ ಗೋವಿಂದಪ್ಪ, ವೈ.ಬಿ, ಮಂಜುನಾಥ್,ವೈ ಎಸ್ ವೆಂಕಟೇಶ್, ನಾಗರಾಜ್, ರಾಜಪ್ಪ ಎಂ. ಜಿಯಾವುಲ್ಲಾ,ಜಗದೀಶ್, ಕೊನೆಮನೆ ರವಿ, ರೇಣುಕಾರಾಧ್ಯ, ತಿಪ್ಪೇಶ್ ಹಾಗು ಪಿಎಸೈ ಮಂಜುನಾಥ್, ಶಿವು, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
12ಕೆಕೆಡಿಯು1. ಪಿ.ಎಂ. ಉಷಾ ಯೋಜನೆಯಲ್ಲಿ ಯಗಟಿ ಗ್ರಾಮದ ಸರಕಾರಿ ಪದವಿ ಕಾಲೇಜಿನ ಆವರಣದಲ್ಲಿ ಕಾಲೇಜಿನ ಒಳಾಂಗಣ ಕ್ರೀಡಾಂಗಣ ಮತ್ತು ಸ್ನಾತಕ್ಕೋತ್ತರ ತರಗತಿಗಳ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಲಾಯಿತು.. ಶಿವಮೊಗ್ಗದ ಕುವೆಂಪು ವಿವಿಯ ಜಂಟಿ ನಿರ್ದೇಶಕ ಕೇಶವ .ಎಚ್ ಮತ್ತಿತರರು ಇದ್ದರು.