ತಜ್ಞರ ವರದಿ ಪಡೆದೇ ಯೋಜನೆ ಅನುಷ್ಠಾನ: ಪರಮೇಶ್ವರ್

KannadaprabhaNewsNetwork |  
Published : Jun 03, 2025, 01:12 AM IST
ಪರಮೇಶ್ವರ್ ಮಾತನಾಡಿದರು | Kannada Prabha

ಸಾರಾಂಶ

ಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮುನ್ನ ತಜ್ಞರ ವರದಿಯನ್ನು ಪಡೆದುಕೊಂಡೇ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಎಕ್ಸ್ ಪ್ರೆಸ್ ಕೆನಾಲ್ ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮುನ್ನ ತಜ್ಞರ ವರದಿಯನ್ನು ಪಡೆದುಕೊಂಡೇ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಾರಂಭದಲ್ಲಿ ಜನಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ 2024ರ ಸೆಪ್ಟಂಬರ್ 3ರಂದು ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್, ಎಂ.ಟಿ.ಕೃಷ್ಣಪ್ಪ, ಡಾ. ರಂಗನಾಥ ಅವರ ಸಮ್ಮುಖದಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ಮಾಹಿತಿ ನೀಡಿದಾಗ ಈ ಶಾಸಕರು ನಮ್ಮ ಭಾಗಕ್ಕೆ ನೀರನ್ನು ಕೊರತೆ ಬಾರದಂತೆ ತೆಗೆದುಕೊಂಡು ಹೋಗುವುದಾದರೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದರು. ಕುಣಿಗಲ್‌ಗೆ ಚಾನಲ್ ಇದ್ದರೂ 2014 ರಿಂದ 2024ರವರೆಗೆ ಚಾನಲ್ ಮೂಲಕ ಹರಿದಿರುವ ನೀರಿನ ಪ್ರಮಾಣವನ್ನು ತೆಗೆದುಕೊಂಡರೆ, ಒಂದು ಬಾರಿಯೂ ಪೂರ್ಣ ಪ್ರಮಾಣದ ನೀರನ್ನು ಒದಗಿಸಲಾಗಿಲ್ಲ ಎಂದರು.

70ನೇ ಕಿ.ಮೀ.ನಲ್ಲಿ ಆಧುನಿಕ ಸ್ಕಾಡ ಮೀಟರ್ ಗೇಟ್ ಅನ್ನು ಅಳವಡಿಸಿ ಎಕ್ಸ್ ಪ್ರೆಸ್ ಕೆನಾಲ್‌ನಲ್ಲಿ ಹರಿಯುವ ನೀರಿನ ಪ್ರಮಾಣವನ್ನು ನಿಖರವಾಗಿ ಲೆಕ್ಕ ತೆಗೆದುಕೊಳ್ಳಲಾಗುವುದು, ಈಗಿನ ನಾಲೆಗೆ ಸಮನಾಂತರದಲ್ಲೇ ಎಕ್ಸ್ ಪ್ರೆಸ್ ಕೆನಾಲ್ ನಾಲಾ ಪೈಪ್‌ ಗಳನ್ನು ಅಳವಡಿಸುವುದರಿಂದ ಹೆಚ್ಚಿನ ರಭಸದಿಂದ ಹೆಚ್ಚು ನೀರು ಹರಿಯಲು ಸಾಧ್ಯವಿಲ್ಲ, ಅದರಿಂದ ಮುಂದಕ್ಕೆ ಈಗ ಹರಿಯುತ್ತಿರುವ 900 ಕ್ಯೂಸೆಕ್ಸ್ ನೀರು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಹರಿಯಲಿದೆ ಇದರಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.ಮೇ 31 ರಂದು ಎಕ್ಸ್ ಪ್ರೆಸ್ ಕೆನಾಲ್ ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಣ್ಣಿನ ಎಂಟೆಯಲ್ಲಿ ಹೊಡೆದ ಪರಿಣಾಮ ಒಬ್ಬ ಪಿಎಸ್ಐದ ಸೇರಿದಂತೆ ಕೆಲ ಪೊಲೀಸರಿಗೆ ಪೆಟ್ಟಾಗಿದೆ. ಜಿಲ್ಲಾಡಳಿತ ಯಾವುದೇ ಪ್ರತಿಭಟನೆ ಮಾಡಬಾರದೆಂದು ನಿಷೇಧಾಜ್ಞೆ ಹೇರಿದ್ದರೂ ಪ್ರತಿಭಟನೆ ಕೈಗೊಂಡು ಗುತ್ತಿಗೆದಾರರ ಹಿಟಾಚಿ ಸೇರಿದಂತೆ ಇತರೆ ವಸ್ತುಗಳಿಗೆ ಹಾನಿಯುಂಟು ಮಾಡಿದ್ದಾರೆ. ಸರ್ಕಾರ ಆತನಿಗೆ ಗುತ್ತಿಗೆ ನೀಡಿರುವುದರಿಂದ ಆತ ಕಾಮಗಾರಿ ಮಾಡುತ್ತಿದ್ದಾನೆ. ಆತನ ವಸ್ತುಗಳನ್ನು ಹಾಳು ಮಾಡುವುದು ಸರಿಯಲ್ಲ ಎಂದರು.ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆಂದು ಶಾಸಕರಾದ ಬಿ.ಸುರೇಶಗೌಡ, ಜಿ.ಬಿ,ಜ್ಯೋತಿಗಣೇಶ್, ಎಂ.ಟಿ.ಕೃಷ್ಣಪ್ಪ, ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ಕುಾಮಾರ ಸೇರಿದಂತೆ 18 ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ, ಅಲ್ಲದೆ ಸ್ವಾಮೀಜಿಗಳ ಮೇಲೂ ಎಫ್ಐಆರ್ ದಾಖಲಾಗಿದ್ದು, ಯಾವ ಸ್ವಾಮಿಗಳ ಹೆಸರನ್ನು ಎಫ್ಐಆರ್ ನಲ್ಲಿ ಉಲ್ಲೇಖಿಸಿಲ್ಲ ಎಂದು ಗೃಹ ಸಚಿವರು ತಿಳಿಸಿದರು.ಲಿಂಕ್ ಕೆನಾಲ್ ಯೋಜನೆಯು ತುಮಕೂರು ಶಾಖ ನಾಲೆಯ 70ನೇ ಕಿ.ಮೀ.ನ ಗುರುತ್ವ ಪೈಪ್ ಲೈನ್ ಸ್ವತಂತ್ರ ಜಾಲವಾಗಿದ್ದು, ಇದು ಕುಣಿಗಲ್ (ಕುಡಿಯುವ ನೀರಿನ ಅಗತ್ಯಗಳು+ ನೀರಾವರಿ) ಮತ್ತು ಮಾಗಡಿ (ಕುಡಿಯುವ ನೀರಿನ ಅಗತ್ಯಗಳು) ತಾಲೂಕುಗಳಿಗೆ ಹಂಚಿಕೆಯಾದ ನೀರನ್ನು, ತುಮಕೂರು ಶಾಖಾ ನಾಲೆಯ ಮೇಲ್ಭಾಗದಲ್ಲಿ ಬರುವ ತಾಲೂಕುಗಳ ನೀರಿನ ಹಂಚಿಕೆಗೆ ತೊಂದರೆ ಯಾವುದೇ ಇಲ್ಲದಂತೆ ಒದಗಿಸಲಾಗುವುದು, ಗುರುತ್ವ ಪೈಫ್‌ ಅನ್ನು ಉದ್ದೇಶವು ನಿರ್ದಿಷ್ಟ ಸಮಯದವರೆಗೆ ಅಗತ್ಯವಿರುವ ನೀರಿನ ಹರಿವನ್ನು ವಿಶೇಷ ತಂತ್ರಜ್ಞಾನದ ಮುಖೇನ ನಿಯಂತ್ರಿಸುವುದಾಗಿ ತಿಳಿಸಿದರು.2024ರ ಜುಲೈ 3ರ ಸರ್ಕಾರದ ಆದೇಶದನ್ವಯ ತಾಂತ್ರಿಕ ಅಧ್ಯಯನ ಸಮಿತಿಯು ಸವಿವರವಾಗಿ ಅಧ್ಯಯನ ರಚನೆಗೊಂಡ ಕೈಗೊಂಡು, ಸದರಿ ಲಿಂಕ್ ಕೆನಾಲ್ ಯೋಜನೆಯು ಕುಣಿಗಲ್ ತಾಲೂಕು ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿದ್ದರೂ ಕಳೆದ ಎರಡು ದಶಕಗಳಿಂದ ಸತತವಾಗಿ ತನಗೆ ಹಂಚಿಕೆಯಾದ ನೀರನ್ನು ಪಡೆಯಲು ಸಾಧ್ಯವಾಗದೆ ಇರುವ ಸಮಸ್ಯೆಯನ್ನು ತಾಂತ್ರಿಕವಾಗಿ, ಸಾಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ನಿವಾರಿಸಲು ರೂಪಿತಗೊಂಡ ಕಾರ್ಯಸಾಧುವಾದ ಪೂರಕ ವ್ಯವಸ್ಥೆಯಾಗಿದೆ, ಇದು ಕುಣಿಗಲ್ ತಾಲೂಕು ತನ್ನ ಪಾಲಿನ ನೀರನ್ನು ಇದರಿಂದ ಪಡೆಯಲು ಸೀಮಿತವಾಗಿ ವಿನ್ಯಾಸಗೊಂಡಿದ್ದು, ಶಾಖಾ ತುಮಕೂರು ನಾಲೆಯ ಮೇಲ್ಭಾಗದ ಫಲಾನುಭವಿ ತಾಲೂಕುಗಳ ನಿಗದಿಪಡಿಸಲಾದ ನೀರಿನ ಪಾಲಿನ ಪ್ರಮಾಣಕ್ಕೆ ಯಾವುದೇ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುವುದಿಲ್ಲ ಎಂದು ಹೇಳಿದರು.

PREV

Recommended Stories

ನವೆಂಬರ್‌-ಡಿಸೆಂಬರ್‌ನಲ್ಲಿ 5 ಪಾಲಿಕೆ ಚುನಾವಣೆ: ಡಿಸಿಎಂ
ಹಿಪ್ಪರಗಿ ಜಲಾಶಯಕ್ಕೆ ೧,೧೯,೨೦೦ ಕ್ಯುಸೆಕ್‌ ಒಳಹರಿವು