ಸಹಕಾರಿ ಕ್ಷೇತ್ರದಲ್ಲಿ ಮೀಸಲು ಅಳವಡಿಸಿದರೆ ಪ್ರತಿಕೂಲ ಪರಿಣಾಮ: ಬಾಂಡ್ ಗಣಪತಿ

KannadaprabhaNewsNetwork |  
Published : Nov 17, 2025, 03:15 AM IST
ಚಿತ್ರ.1: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ. ಪಿ.ಬಾಂಡ್ ಗಣಪತಿ ಮಾತನಾಡುತ್ತಿರುವುದು.2: ಎಪಿಸಿಎಂಎಸ್ ಅಧ್ಯಕ್ಷ ಮತ್ತು ನಿರ್ದೇಶಕರುಗಳಿಗೆ ಸನ್ಮಾನಿಸುತ್ತಿರುವುದು. | Kannada Prabha

ಸಾರಾಂಶ

ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸಹಕಾರ ಕ್ಷೇತ್ರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಆಯ್ಕೆಗೆ ಕೂಡ ಮೀಸಲಾತಿಯನ್ನು ಅಳವಡಿಸಿದಲ್ಲಿ ಅದು ಸಹಕಾರ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮವನ್ನು ಮಾತ್ರವಲ್ಲದೆ ಸಹಕಾರಿ ಕ್ಷೇತ್ರ ಕುಂಠಿತಗೊಳ್ಳಲು ಕಾರಣವಾಗುತ್ತದೆ ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಕೊಡಂದೇರ ಪಿ.ಬಾಂಡ್ ಗಣಪತಿ ಹೇಳಿದ್ದಾರೆ.72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸುಂಟಿಕೊಪ್ಪದ ಮಂಜುನಾಥಯ್ಯ ಸಹಕಾರ ಭವನದಲ್ಲಿ ಭಾನುವಾರ ಆಯೋಜಿಸಲಾದ ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.

ಸಹಕಾರ ಕ್ಷೇತ್ರ ಏಕಸೇವಾ ಕ್ಷೇತ್ರವಾಗಿ ಉಳಿಯದೆ ಬಹುಸೇವಾ ಕ್ಷೇತ್ರವಾಗಿ ಬೆಳೆಯುತ್ತಿದೆ. ಸಹಕಾರ ಕ್ಷೇತ್ರದ ಮಹತ್ವವನ್ನು ಅರಿತ ಕೇಂದ್ರ ಸರ್ಕಾರ, ನೂತನ ಸಹಕಾರ ಸಚಿವಾಲಯ ಪ್ರಾರಂಭಿಸಿದ ಮೇಲೆ ಏಕರೂಪದ ಗಣಕೀಕರಣದ ವ್ಯವಸ್ಥೆಯಿಂದ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲಾಗುತ್ತಿದೆ ಎಂದರು.

ವಿಶೇಷವಾಗಿ ಆಹಾರ, ಜನಜೌಷಧ, ಪಟ್ರೋಲ್‌ ಪಂಪ್, ಅಡುಗೆ ಅನಿಲ ವಿತರಣಾ ವ್ಯವಸ್ಥೆ, ನಿರ್ಮಾಣದ ವ್ಯವಸ್ಥೆಯಲ್ಲಿಯೂ ಕೂಡ ಸಹಕಾರ ಸಚಿವಾಲಯ ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ಪ್ರಾಯೋಗಿಕವಾಗಿ ಏಕರೂಪದ ತಂತ್ರಂಶವನ್ನು ಅಳವಡಿಸಿಕೊಳ್ಳಲು ಸೂಚಿಸಿದೆ. ಆದರೆ ಕರ್ನಾಟಕದಲ್ಲಿ ಇಚ್ಛಾಶಕ್ತಿಯ ಕೊರತೆಯಿಂದ ಮುಂದೂಡಲಾಗಿದೆ. ಅತ್ಯುತ್ತಮವಾಗಿರುವ ಕರ್ನಾಟಕ ಸಹಕಾರ ಕ್ಷೇತ್ರದ ಕಾಯ್ದೆಯನ್ನು ಚರ್ಚೆ ಇಲ್ಲದೆ ಪರವಿರೋಧ ಲೆಕ್ಕಿಸದೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.

ಕರ್ನಾಟಕದಲ್ಲಿ ಕೊಡಗು ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಕೊಡಗಿನಲ್ಲಿ ಶೇ.60 ಪ್ರಾಥಮಿಕ ಕೃಷಿಪತ್ತಿನ ಸಂಘಗಳು 600 ಕೋಟಿ ರು.ವರೆಗೂ ವಹಿವಾಟು ನಡೆಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸಮಾರಂಭವನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಸಹಕಾರ ಕ್ಷೇತ್ರ ಕೂಡ ರಾಜ್ಯ ಮತ್ತು ದೇಶಕ್ಕೆ ಕ್ರೀಡೆ ಹಾಗೂ ಸೇನೆಗೆ ನೀಡಿರುವ ಮಹತ್ತರ ಕೊಡುಗೆಯಾಷ್ಟೇ ಕೊಡುಗೆಯನ್ನು ನೀಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಜೆರ್ಮಿಡಿಸೋಜ ವಹಿಸಿದ್ದರು. ದಿನದ ಮಹತ್ವದ ಕುರಿತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಂ.ಎಂ.ಶಾಮಲಾ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಮಹಿಳಾ ಸಂಘದ ಅಧ್ಯಕ್ಷೆ ಲೀಲಾಮೇದಪ್ಪ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಹಿರಿಯ ಸಹಕಾರಿಗಳಾದ ಪಟ್ಟೆಮನೆ ಗಿರಿಜ ಉದಯಕುಮಾರ್, ಅಪ್ಪಚಟ್ಟೊಳಂಡ ಸಾವಿತ್ರಿ ಕಾವೇರಪ್ಪ ಅತ್ತೂರು ನಲ್ಲೂರು ಗ್ರಾಮದ ಐ.ಎಸ್.ಬಾಲಕಿ ಉಲುಗುಲಿ ಗ್ರಾಮದ ಯಂಕನ ಎಂ.ಕರುಂಬಯ್ಯ, ಕಲ್ಲೂರಿನ ಕೆ.ಬಿ.ರಾಜಪ್ಪ, ಅಂದಗೋವೆ ಗ್ರಾಮದ ಚಿಕ್ಕಂಡ ಕೆ. ಸಾಬು ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು.ಕುಶಾಲನಗರದ ಎ.ಪಿಎಂಎಸ್ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಎಂ.ಎಂ.ಕೊಮೊರಪ್ಪ, ನಿರ್ದೇಶಕರಾಗಿ ಆಯ್ಕೆಗೊಂಡ ಎನ್.ಸಿ.ಪೊನ್ನಪ್ಪ, ಡಿ.ಕೆ.ಗಂಗಾಧರ, ಕೆ.ಎಸ್.ಮಂಜುನಾಥ್ ಅವರನ್ನು ಗೌರವಿಸಲಾಯಿತು.

ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕಿನ ವ್ಯವಸ್ಥಾಪಕರಾದ ಆರ್. ಮಂಜುಳ ಪ್ರಾರ್ಥಿಸಿದರು. ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಡಾ.ಶಶಿಕಾಂತ್ ರೈ ಸ್ವಾಗತಿಸಿದರು. ಕೊಡಗು ಜಿಲ್ಲಾ ಸಹಕಾರಿ ಯೂನಿಯನ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

PREV

Recommended Stories

ಉದ್ಯಮಿ ಅಭಿಜಿತ್‌ಗೆ ‘ಸಮಗ್ರ ಸಾಧಕ ಪ್ರಶಸ್ತಿ’ ಪ್ರದಾನ
ಭಗವಾನ್ ಬಿರ್ಸಾ ಮುಂಡಾ ನಮ್ಮೆಲ್ಲರಿಗೆ ಮಾದರಿ: ಸಂಸದ ಬಿ.ವೈ.ರಾಘವೇಂದ್ರ