ಒಳ ಮೀಸಲಾತಿ ಜಾರಿ ಮೋದಿ ಪ್ರಧಾನಿಯಾದ್ರೆ ಮಾತ್ರ ಸಾಧ್ಯ

KannadaprabhaNewsNetwork |  
Published : Apr 19, 2024, 01:06 AM IST
ಚಿತ್ರದುರ್ಗ ಎರಡನೇ ಪುಟದ  ಬಾಟಂ   | Kannada Prabha

ಸಾರಾಂಶ

ಮಾದಿಗ ಜನಾಂಗಕ್ಕೆ ಅಗತ್ಯವಾಗಿ ಬೇಕಾಗಿರುವ ಒಳ ಮಿಸಲಾತಿಯನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾತ್ರ ನೀಡಲು ಸಾಧ್ಯವಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಬಿಜೆಪಿಯನ್ನು ಬೆಂಬಲಿಸಿದೆ ಎಂದು ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು.

ಚಿತ್ರದುರ್ಗ: ಮಾದಿಗ ಜನಾಂಗಕ್ಕೆ ಅಗತ್ಯವಾಗಿ ಬೇಕಾಗಿರುವ ಒಳ ಮಿಸಲಾತಿಯನ್ನು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾತ್ರ ನೀಡಲು ಸಾಧ್ಯವಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಬಿಜೆಪಿಯನ್ನು ಬೆಂಬಲಿಸಿದೆ ಎಂದು ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲು ವರ್ಗೀಕರಣಕ್ಕಾಗಿ ಮಾದಿಗ ದಂಡೋರ ಕಳೆದ 30 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದೆ. ವರ್ಗೀಕರಣ ಕೇಂದ್ರ ಸರ್ಕಾರದಿಂದ ಸಾಧ್ಯ. ಕೇಂದ್ರದ ಬಿಜೆಪಿ ಸರ್ಕಾರ ಎಸ್ಸಿ ಮೀಸಲಾತಿಗೆ ಅನುಕೂಲವಾಗಿ ಕೆಲಸ ಮಾಡುತ್ತ ಬಂದಿದೆ. ಪ್ರಧಾನಿ ಮೋದಿ ಅವರು ನಮಗೆ ಮಾತು ಕೊಟ್ಟಿದ್ದಾರೆ. ಮೋದಿಯಿಂದ ನಮ್ಮ ಹೋರಾಟ ವೇಗ ಪಡೆದಿದ್ದು, ಗೆಲುವು ಸಿಗುತ್ತದೆ ಎಂದು ವಿಶ್ವಾಸದಲ್ಲಿ ಇದ್ದೇವೆ. ಹಾಗಾಗಿ ಮಾದಿಗ ಹೋರಾಟ ಸಮಿತಿ ಬಿಜೆಪಿಗೆ ಬೆಂಬಲ ನೀಡುತ್ತಿದೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ನಾವು ಶಕ್ತಿ ಮೀರಿ ಕೆಲಸ ಮಾಡುತ್ತೇವೆ. ನಮ್ಮ ಬೆಂಬಲ ಕೇವಲ ಚಿತ್ರದುರ್ಗಕ್ಕೆ ಮಾತ್ರ ಸೀಮಿತ ಅಲ್ಲ. ತೆಲಂಗಾಣ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಎಲ್ಲಾ ಕಡೆ ಕೆಲಸ ಮಾಡುತ್ತೇವೆ. ಮಾದಿಗ ಸಮುದಾಯ ಎಲ್ಲಿದೆಯೊ ಅಲ್ಲಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅವರುಗಳೇ ಒಳ ಮೀಸಲಾತಿಯನ್ನು ತಡೆ ಹಿಡಿಯಲಿದ್ದಾರೆ. ಛಲವಾದಿ ಸಮುದಾಯಕ್ಕೆ ಸೇರಿದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರೇ ತೊಡರುಗಾಲು ಹಾಕುತ್ತಾರೆ. ಮೀಸಲಾತಿ ವಿರೋಧ ಮಾಡುವವರು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಜನರಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಸದಾಶಿವ ಆಯೋಗ ವರದಿಯನ್ನು ನಿರ್ಲಕ್ಷ್ಯ ವಹಿಸಿದೆ. ಎಸ್.ಎಂ ಕೃಷ್ಣ, ಸಿದ್ದರಾಮಯ್ಯ ಸಿಎಂ ಇದ್ದಾಗ ವರದಿ ಬಹಿರಂಗ ಮಾಡಿಲ್ಲ ಇದು ಒಳ ಮೀಸಲಾತಿ ವಿರೋಧಿತನ ತೋರಿಸುತ್ತದೆ. 30 ವರ್ಷದ ಹೋರಾಟಕ್ಕೆ ನ್ಯಾಯ ಸಿಗಬೇಕು ಅಂದರೆ ಮೋದಿ ಮತ್ತೆ ಪ್ರಧಾನಿ ಆಗಬೇಕು ಎಂದರು.

ಕಾರಜೋಳ ಮಾದಿಗ ಸಮುದಾಯದ ಪ್ರಬಲ ನಾಯಕ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಉಪ ಮುಖ್ಯಮಂತ್ರಿ ಆಗಿ ಕಾರಜೋಳ ಕಾರ್ಯನಿರ್ವಹಿಸಿದ್ದಾರೆ. ಗೆದ್ದರೆ ಕೇಂದ್ರದಲ್ಲಿ ನಮ್ಮ ಹೋರಾಟಕ್ಕೆ ಇನ್ನಷ್ಟು ಬಲ ಸಿಗುತ್ತದೆ. ಕೇಂದ್ರದಲ್ಲಿ ಕಾರಜೋಳ ಮಂತ್ರಿ ಆದರೆ ನಮಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.

ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆದರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಮೋದಿ ಆಡಳಿತದಲ್ಲಿ ವೈಫಲ್ಯ ಇದ್ದರೆ ಅದನ್ನು ಮಾತನಾಡಲಿ. ಏನು ಸಿಗದಿದ್ದಕ್ಕೆ ಕಾಂಗ್ರೆಸ್ ಈ ಸಂವಿಧಾನ ಬದಲಾವಣೆ ಆರೋಪ ಮಾಡುತ್ತಿದೆ. ಸಂವಿಧಾನವೇ ಭಗವದ್ಗೀತೆ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. 500 ವರ್ಷಗಳ ರಾಮ ಮಂದಿರ ಕನಸನ್ನು ಮೋದಿ ನನಸು ಮಾಡಿದ್ದಾರೆ. ನರೇಂದ್ರ ಮೋದಿ ಒಬಿಸಿ ವರ್ಗಕ್ಕೆ ಸೇರಿದ್ದು ಮಹಿಳೆಯರಿಗೆ ಸಮಾನ ಹಕ್ಕು ನೀಡುವುದು ಮೋದಿಯವರಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ದಾಸಪ್ಪ, ಮೋಹನ್, ಕರಿಕೇರೆ ತಿಪ್ಪೇಸ್ವಾಮಿ, ದಗ್ಗೆ ಪ್ರಕಾಶ್, ನಾಗರಾಜ್ ಬೇದ್ರೆ, ಪರಶುರಾಮ್ ಸುದ್ದಿಗೋಷ್ಠಿಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ