ಪರಾರಿಯಾಗಿದ್ದ ಅಪರಾಧಿಗೆ ಜೈಲು ಶಿಕ್ಷೆ ಕಾಯಂ

KannadaprabhaNewsNetwork |  
Published : May 09, 2024, 01:15 AM ISTUpdated : May 09, 2024, 01:16 AM IST
ಹೈಕೋರ್ಟ್‌ | Kannada Prabha

ಸಾರಾಂಶ

ಎರಡು ಗುಂಪುಗಳ ನಡುವಿನ ಗಲಾಟೆ ಸಂಬಂಧ ಬಂಧನಕ್ಕೆ ಒಳಗಾದ ನಂತರ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸಹುಡ್ಯ ಗ್ರಾಮದ ನಿವಾಸಿ ಸೋಮಶೇಖರ್ ಎಂಬಾತನಿಗೆ ಆರು ತಿಂಗಳು ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ರು. ದಂಡ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಪುರಸ್ಕರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎರಡು ಗುಂಪುಗಳ ನಡುವಿನ ಗಲಾಟೆ ಸಂಬಂಧ ಬಂಧನಕ್ಕೆ ಒಳಗಾದ ನಂತರ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಹೊಸಹುಡ್ಯ ಗ್ರಾಮದ ನಿವಾಸಿ ಸೋಮಶೇಖರ್ ಎಂಬಾತನಿಗೆ ಆರು ತಿಂಗಳು ಕಠಿಣ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ರು. ದಂಡ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಪುರಸ್ಕರಿಸಿದೆ.

ಅಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ಸೋಮಶೇಖರ್‌ ಸಲ್ಲಿಸಿದ್ದ ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರ ಪೀಠ ಆದೇಶಿಸಿದೆ.

ಪೊಲೀಸರನ್ನು ತಳ್ಳಿ ಪರಾರಿ:

ಆರೋಪಿಯು ಉದ್ದೇಶಪೂರ್ವಕವಾಗಿ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ (ಎಎಸ್‌ಐ) ಅವರನ್ನು ತಳ್ಳಿ ಕಾನೂನುಬದ್ಧ ಬಂಧನದಿಂದ ಪರಾರಿಯಾಗಿದ್ದರು. ಅದನ್ನು ಪ್ರಕರಣದ ಸಾಕ್ಷಿಗಳು ಸಹ ದೃಢೀಕರಿಸಿದ್ದಾರೆ. ಹಾಗಾಗಿ, ಆರೋಪಿಗೆ ವಿಧಿಸಲಾಗಿರುವ ಶಿಕ್ಷೆ ರದ್ದುಗೊಳಿಸಲಾಗದು. ಆರೋಪಿ ಶಿಕ್ಷೆ ಅನುಭವಿಸಲೇಬೇಕು ಎಂದು ನ್ಯಾಯಪೀಠ ಆದೇಶಲ್ಲಿ ತಿಳಿಸಿದೆ. ಬಾಕ್ಸ್...

ಗುಂಪು ಘರ್ಷಣೆಯಲ್ಲಿ ಬಂಧನ

ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ ಗ್ರಾಮದಲ್ಲಿ 2012ರ ಏ.7ರಂದು ರಾತ್ರಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ಆಗ ಸಹಾಯಕ ಸಬ್ ಇನ್ಸಪೆಕ್ಟರ್‌ ಸಾದಪ್ಪ ಮತ್ತಿತರ ಪೊಲೀಸರು ಗ್ರಾಮಕ್ಕೆ ತೆರಳಿದ್ದರು. ಆ ವೇಳೆ ಸೋಮಶೇಖರ್‌ ಮತ್ತು ವೆಂಕಟೇಶ್ ಅವರನ್ನು ಬಂಧಿಸಿದ್ದರು.

ಬಂಧಿತರ ಮೇಲೆ ಕೊಲೆ ಯತ್ನ ಸೇರಿ ಹಲವು ಪ್ರಕರಣ ದಾಖಲಿಸಲಾಗಿತ್ತು. ಅವರನ್ನು ಪಾತಪಾಳ್ಯ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಪೊಲೀಸ್‌ ಜೀಪಿನಿಂದ ಕೆಳಗೆ ಇಳಿಯುವಾಗ ಸೋಮಶೇಖರ್, ಸಾದಪ್ಪ ಅವರನ್ನು ತಳ್ಳಿ ತಪ್ಪಿಸಿಕೊಂಡು ಓಡಿಹೋಗಿದ್ದ. ಎಷ್ಟು ಹುಡುಕಿದರೂ ಸಿಗದ ಕಾರಣ ಆತನ ಮೇಲೆ ಪೊಲೀಸ ವಶದಿಂದ ತಪ್ಪಿಸಿಕೊಂಡ ಸಂಬಂಧ ಪ್ರತ್ಯೇಕ ದೂರು ದಾಖಲಿಸಲಾಗಿತ್ತು.

ಆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದ ಬಾಗೇಪಲ್ಲಿ ಜೆಎಂಎಫ್ ಸಿ ನ್ಯಾಯಾಲಯ, ಸೋಮಶೇಖರ್‌ಗೆ ಆರು ತಿಂಗಳು ಕಠಿಣ ಜೈಲು ಮತ್ತು ಒಂದು ಸಾವಿರ ರು. ದಂಡ ವಿಧಿಸಿ 2014ರ ಜೂ.9ರಂದು ಆದೇಶಿಸಿತ್ತು. ಆ ಆದೇಶವನ್ನು 2016ರ ಡಿ.31ರಂದು ಚಿಕ್ಕಬಳ್ಳಾಪುರ ಸೆಷನ್ಸ್ ನ್ಯಾಯಾಲಯ ಸಹ ಎತ್ತಿಹಿಡಿದಿತ್ತು. ಇದರಿಂದ ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ