3 ವರ್ಷದಲ್ಲಿ ತುಮಕೂರಿನ ಚಿತ್ರಣ ಬದಲು

KannadaprabhaNewsNetwork | Published : Nov 26, 2024 12:50 AM

ಸಾರಾಂಶ

ವೀರಶೈವ, ಲಿಂಗಾಯತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಜಿಲ್ಲೆಯ ಹಿರಿಯರು ಸೇರಿ ಐದು ಎಕರೆ ಜಾಗ ಖರೀದಿಸಿ, ಹಾಸ್ಟೆಲ್ ಗಳ ನಿರ್ಮಾಣಕ್ಕೆ ಒತ್ತ್ತುನೀಡಿದರೆ ತಮ್ಮ ಕೈಲಾದ ಸೇವೆಯನ್ನು ಮಾಡುವುದಾಗಿ ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುವೀರಶೈವ, ಲಿಂಗಾಯತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಜಿಲ್ಲೆಯ ಹಿರಿಯರು ಸೇರಿ ಐದು ಎಕರೆ ಜಾಗ ಖರೀದಿಸಿ, ಹಾಸ್ಟೆಲ್ ಗಳ ನಿರ್ಮಾಣಕ್ಕೆ ಒತ್ತ್ತುನೀಡಿದರೆ ತಮ್ಮ ಕೈಲಾದ ಸೇವೆಯನ್ನು ಮಾಡುವುದಾಗಿ ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ನಗರದ ಗುರುಕುಲ ಹಾಸ್ಟಲ್ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಗುರುಕುಲ ಅರ್ಕೇಡ್ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಬೆಳೆದಂತೆ ಭೂಮಿಯ ಬೆಲೆ ಗಗನಮುಖಿಯಾಗಿದೆ. ಭವಿಷ್ಯದ ದೃಷ್ಟಿಯಿಂದ ನೆರೆಯ ಆಂಧ್ರದವರು ಬಂದು, ಎರಡು ರೇಟ್ ನೀಡಿ ಭೂಮಿ ಖರೀದಿಸುತ್ತಿದ್ದಾರೆ. ಹಾಗಾಗಿ ಸಮುದಾಯದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ವೀರಶೈವ ಸಮಾಜದ ಮುಖಂಡರು ನಗರದ ಸುತ್ತಮುತ್ತ ಐದು ಎಕರೆ ಜಾಗ ಖರೀದಿಸಿದರೆ, ಅಲ್ಲಿ ಹಾಸ್ಟಲ್ ನಿರ್ಮಿಸಿ ಮತ್ತಷ್ಟು ಮಕ್ಕಳಿಗೆ ಆಶ್ರಯ ನೀಡಬಹುದು ಎಂದರು.ತುಮಕೂರು ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಬಸವರಾಜು ಸಂಸದರಾಗಿ ಅವರು ಕೈ ಹಾಕಿದ ಎಲ್ಲಾ ಕಾರ್ಯಕ್ರಮಗಳನ್ನು ಪೂರೈಸುತ್ತೇನೆ. ಈಗಾಗಲೇ ಸಾಕಷ್ಟು ರೈಲುಗಳನ್ನು ನೀಡಲಾಗಿದೆ. ಬಹುಜನರ ಕೋರಿಕೆಯಂತೆ ತುಮಕೂರು ಮೂಲಕ ಮಂಗಳೂರಿಗೆ ಟ್ರೈನ್ ಬಿಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ, ಅವಶ್ಯಕತೆ ಕಂಡುಬಂದರೆ ಅದನ್ನು ವ್ಯವಸ್ಥೆ ಮಾಡುತ್ತೇನೆ. ಈಗಾಗಲೇ ತುಮಕೂರು ಮೂಲಕ ವಂದೇ ಭಾರತ ರೈಲಿನ ಜೊತೆಗೆ, ಮೇಮೋ ರೈಲುಗಳ ಒಡಾಟಕ್ಕೆ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದರು.ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ನೆನೆಗುದ್ದಿಗೆ ಬಿದ್ದ ರೈಲ್ವೆ ಕೆಳ ಮತ್ತು ಮೇಲ್ಸೇತುವೆಗಳಗೆ ಚಾಲನೆ ದೊರೆತಿದ್ದು, ಮೂರು ವರ್ಷಗಳಲ್ಲಿ ತುಮಕೂರು ಜಿಲ್ಲೆಯ ಚಿತ್ರಣ ಬದಲಾಗಲಿದೆ. ಕೈಗಾರಿಕೆ ಗಳು, ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ದಿಯಾದಂತೆ, ತುಮಕೂರಿನ ಮೇಲೆ ಎಲ್ಲರ ಕಣ್ಣಿದೆ ಎಂದು ಕೇಂದ್ರ ಸಚಿವ ಸೋಮಣ್ಣ ನುಡಿದರು.ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಗುರುಕುಲ ಹಾಸ್ಟಲ್ ಕಟ್ಟಡವನ್ನು ಉಳಿಸಿಕೊಳ್ಳಲು ಕಷ್ಟ ಪಟ್ಟಿದ್ದೇವೆ. ಸಂಸದರು,ಶಾಸಕರ ಅನುದಾನ ಸಹ ನೀಡಲಾಗಿದೆ. ಸಮಾಜದಲ್ಲಿ ಗುಂಪುಗಾರಿಕೆ ಕಡಿಮೆಯಾಗಬೇಕು. ಇಲ್ಲದಿದ್ದರೆ ಸಮಾಜಕ್ಕೆ ಉಳಿಗಾಲವಿಲ್ಲ. ಎಲ್ಲರೂ ಒಗ್ಗೂಡಿದರೆ ಸಮಾಜದ ಏಳಿಗೆಯಾಗಲಿದೆ. ಜಿಲ್ಲೆಗೆ ಹೇಮಾವತಿ ನೀರು ಬಂದ ಮೇಲೆ ಜಿಲ್ಲೆಯಲ್ಲಿ ಸಮುದಾಯ ಬೆಳೆದಿದೆ. ಜಿಲ್ಲೆಯ ನೀರಾವರಿ ಅಭಿವೃದ್ಧಿಯಲ್ಲಿ ನಮ್ಮ ಪಾಲಿದೆ. ದೇವೇಗೌಡರು ಹೇಮಾವತಿ ನೀರಿಗೆ ಅಡ್ಡಿಪಡಿಸಿದ ಸಂದರ್ಭದಲ್ಲಿ ಅವರ ಮಾತುಗಳನ್ನು ತಿರಸ್ಕರಿಸಿ ಜಿಲ್ಲೆಗೆ ಹೇಮಾವತಿ ನೀರು ಹರಿಸಲಾಯಿತು, ನೀರಾವರಿ ತಜ್ಞ ಜಿ.ಎಸ್. ಪರಮಶಿವಯ್ಯ ಅವರು ಸಂಶೋಧಿಸಿದ ನೇತ್ರಾವತಿ ತಿರುವು ಯೋಜನೆಗೆ ಎತ್ತಿನಹೊಳೆ ಎಂದು ಹೆಸರಿಟ್ಟಿದ್ದಾರೆ. ಎತ್ತಿನಹೊಳೆಗೆ ಇಂಪೌಂಡ್ ಡ್ಯಾಂ ನಿರ್ಮಾಣ ಮಾಡಿದರೇ 25 ಟಿ.ಎಂ.ಸಿ ನೀರು ತುಂಬಿಸಬಹುದು. ಇದರಿಂದ ಜಿಲ್ಲೆ ಮತ್ತಷ್ಟು ಬೆಳೆಯಲಿದೆ ಎಂದರು.

ಸಮುದಾಯ ಕೇವಲ ಕೃಷಿ ನಂಬಿ ಕುಳಿತರೆ ಸಾಲದು ಕೈಗಾರಿಕೋದ್ಯಮಿಗಳಾಗಬೇಕು. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಬೇಕು. ದಿನೇ ದಿನೇ ಭೂಮಿ ಬೆಲೆ ಗಗನಕ್ಕೆರುತ್ತಿದೆ. ಹಾಗಾಗಿ ಭೂಮಿ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.ವೀರಶೈವ ಗುರುಕುಲ ಹಾಸ್ಟೆಲ್ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ, ವೀರಶೈವ ಗುರುಕುಲ ಹಾಸ್ಟೆಲ್ ವತಿಯಿಂದ ಮೂರು ಹಾಸ್ಟೆಲ್ ಗಳು ನಡೆಯುತ್ತಿದ್ದು, 200 ಹೆಣ್ಣುಮಕ್ಕಳು ಸೇರಿದಂತೆ 570 ಮಕ್ಕಳಿಗೆ ಆಶ್ರಯ ನೀಡಲಾಗಿದೆ. ಸರಕಾರದ ಅನುದಾನವಿಲ್ಲದ ಕಾರಣ ದಾನಿಗಳ ನೆರವಿನಿಂದ ಸುಮಾರು 4.50ಕೋಟಿ ಖರ್ಚು ಮಾಡಿ ವಾಣಿಜ್ಯ ಕಟ್ಟಡ ನಿರ್ಮಿಸಿದ್ದು, ಇದರಿಂದ ಬಂದ ಆದಾಯದಲ್ಲಿ ಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. 1945 ರಲ್ಲಿ ಸರಕಾರದಿಂದ ಮಂಜೂರಾಗಿದ್ದ 220/110 ಅಡಿ ಜಾಗದಲ್ಲಿ ಹಾಸ್ಟೆಲ್ ಹಾಗೂ ವಾಣಿಜ್ಯ ಕಟ್ಡಡ ನಿರ್ಮಿಸಲಾಗಿದೆ.ಸಮುದಾಯದ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಸುರ್ವಣ ಮಹೋತ್ಸವದ ನೆನಪಿಗಾಗಿ ಈ ಕಟ್ಟಡ ನಿರ್ಮಾಣವಾಗಿದೆ ಎಂದರು. ವೇದಿಕೆಯಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಗುರುಕುಲ ಹಾಸ್ಟಲ್ ಸಮಿತಿ ಅಧ್ಯಕ್ಷ ಜಿ.ಎನ್.ಬಸವರಾಜು, ಉಪಾಧ್ಯಕ್ಷ ಎಂ.ಆರ್.ಸಿದ್ದಲಿಂಗಪ್ಪ, ಜಂಟಿ ಕಾರ್ಯದರ್ಶಿ ಎನ್.ಜಯಣ್ಣ, ಖಜಾಂಚಿ ಮಲ್ಲಿಕಾರ್ಜುನಯ್ಯ, ಮುಖಂಡರಾದ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಪ್ರಭು ಸಾಗರನಹಳ್ಳಿ, ಎಂ.ಎನ್.ರೇಣುಕರಾಧ್ಯ, ಬಿ.ಬಿ.ಮಹದೇವಯ್ಯ, ಹಾಲೆನೂರು ಲೇಪಾಕ್ಷ,ಎಸ್.ಸಿದ್ದಪ್ಪ, ಕೆ.ಎಸ್.ವಿಶ್ವನಾಥಸ್ವಾಮಿ, ಎಂಜಿನಿಯರಿಂಗ್ ಮಲ್ಲೇಶಯ್ಯ, ವ್ಯವಸ್ಥಾಪಕ ಉಮಾಪತಿ , ತಿಪ್ಪೂರು ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.

Share this article