ಬಳ್ಳಾರಿ: ಹಿಂಸೆ, ಅಸಹಿಷ್ಣುತೆ, ಮರ್ಯಾದಾ ಹತ್ಯೆ, ಅಸಮಾನತೆಗಳು ವಿಜೃಂಭಿಸುತ್ತಿರುವ ಈ ಹೊತ್ತಿನಲ್ಲಿ ಹಿರಿಯ ಲೇಖಕ ಬರಗೂರು ರಾಮಚಂದ್ರಪ್ಪನವರ "ಸೌಹಾರ್ದ ಭಾರತ " ಕೃತಿಯು ಸಮಾನತೆಯ ಹೊಸ ಬದುಕು, ಹೊಸ ಆಲೋಚನೆಗೆ ಪೂರಕವಾದ ಹೆಜ್ಜೆ ಇಡುವ ಮನಸುಗಳಿಗೆ ಆಸರೆಯ ಮೆಟ್ಟಿಲುನಂತಿದೆ ಎಂದು ಹಿರಿಯ ಲೇಖಕ ಡಾ.ದಸ್ತಗೀರಸಾಬ್ ದಿನ್ನಿ ಅಭಿಪ್ರಾಯಪಟ್ಟರು.
ಇಂದು ನಾವು ಸುಡುವ ವರ್ತಮಾನದಲ್ಲಿ ಬದುಕುತ್ತಿದ್ದೇವೆ. ಹೆಚ್ಚುತ್ತಿರುವ ಹಿಂಸಾ ಕಾರ್ಯಗಳಿಂದ ಸೌಹಾರ್ದ ಬದುಕುಗಳು ಚೆಲ್ಲಾಪಿಲ್ಲಿಯಾಗುತ್ತಿವೆ. ನಾಳೆನ ಭವಿಷ್ಯದ ಬಗ್ಗೆ ಯುವ ಸಮುದಾಯ ಆತಂಕಗೊಳ್ಳುವ ಸ್ಥಿತಿ ಉದ್ಭವಿಸಿದೆ. ಸೌಹಾರ್ದ ಹಾಗೂ ಸಮಾನತೆಯನ್ನು ಕಾಣುವ ಮನಸುಗಳ ಕೊರತೆ ಕಾಡಲಾರಂಭಿಸಿದ್ದು, ಸೌಹಾರ್ದ ನಾಡು ಕಟ್ಟುವ ಬಗೆ ಹೇಗೆ ಎಂಬ ಚಿಂತೆ ಕಾಡುವ ಹೊತ್ತಿನಲ್ಲಿಯೇ ಬರಗೂರು ಅವರ ಕೃತಿ ಸೌಹಾರ್ದ ಹಾಗೂ ಭಾವೈಕ್ಯತೆಯ ಹೊಸ ಚಿಂತನೆಗಳನ್ನು ಬಿತ್ತುವ ಹಾಗೂ ಹೊಸ ತಲೆಮಾರಿಗೆ ದಾಟಿಸುವ ಕೆಲಸ ಮಾಡಿದೆ ಎಂದು ವಿಶ್ಲೇಷಿಸಿದರು.
ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ ಅವರ ಆಲೋಚನೆಯ ಕ್ರಮಗಳು ಸಮಾಜಮುಖಿ ಹಾಗೂ ಸಾಂದರ್ಭಿಕವಾಗಿರುತ್ತವೆ. ಮಾತು ಸೋತ ಭಾರತದಲ್ಲಿ ಬದುಕುತ್ತಿರುವ ಪ್ರಸ್ತುತ ದಿನಗಳಲ್ಲಿ ಹೊಸದನಿ, ಹೊಸ ಶಕ್ತಿಯನ್ನು ನೀಡುವ, ಹೊಸ ಭರವಸೆಗಳನ್ನು ಕಾಣುವ ಅಪೂರ್ವ ಅವಕಾಶವನ್ನು ಸೌಹಾರ್ದ ಭಾರತ ಕೃತಿ ಕೊಟ್ಟಿದೆ. ಸೌಹಾರ್ದ ಜೀವನವನ್ನು ಕದಡಲಾಗುತ್ತಿದೆ. ಭಾವ್ಯಕ್ಯತೆ ಕುಂದಲಾರಂಭಿಸಿದೆ ಎಂದು ಆತಂಕಗೊಳ್ಳುವ ಹೊತ್ತಿನಲ್ಲಿಯೇ ಗಾಯಕ್ಕೆ ಮುಲಾಮು ನೀಡಿದಂತೆ ಬರಗೂರು ಅವರ ಕೃತಿ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದರು.ಪುಸ್ತಕ ಜನಾರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವೈದ್ಯ ಸಾಹಿತಿ ಡಾ.ಅರವಿಂದ ಪಾಟೀಲ್, ಯಾವುದೇ ಧರ್ಮಗಳು ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ. ಎಲ್ಲ ಧರ್ಮಗಳಲ್ಲೂ ಸೌಹಾರ್ದ ಬದುಕಿನ ಮೌಲ್ಯಗಳ ಕುರಿತು ತಿಳಿಸಿವೆ. ಮನುಷ್ಯ ಮನುಷ್ಯರ ನಡುವೆ ಮಾನವಿಕ ಸಂಬಂಧಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಅಣಿಗೊಳಿಸುತ್ತವೆ. ಮಾನವಿಕ ಸಂಬಂಧಗಳು ವ್ಯವಹಾರಿಕವಾದ ಬಳಿಕ ಸೌಹಾರ್ದ ಬದುಕಿಗೆ ಪೆಟ್ಟು ಬಿದ್ದಿದೆ. ಜಾತಿ ತಾರತಮ್ಯ ಹಾಗೂ ಧಾರ್ಮಿಕ ಮೂಲಭೂತವಾದಗಳು ದ್ವೇಷದ ದಳ್ಳುರಿಗೆ ಕಾರಣವಾಗುತ್ತಿವೆ. ಸೌಹಾರ್ದ ಭಾರತ ಕನಸು ಕಾಣುವ, ಭಾವ್ಯಕ್ಯತೆಯ ಬದುಕನ್ನು ನಮ್ಮದಾಗಿಸಿಕೊಳ್ಳುವ ಆಶಯ ಹೊತ್ತವರ ಬರಗೂರರ ಕೃತಿ ಹೆಚ್ಚು ಉಪಯುಕ್ತವಾಗಿದೆ ಎಂದು ತಿಳಿಸಿದರು.
ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀನಿವಾಸಮೂರ್ತಿ ಪುಸ್ತಕ ಪರಿಚಯಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಲೇಖಕ ಅಜಯ್ ಬಣಕಾರ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಚ್.ಹುಸೇನಪ್ಪ, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಜೆ.ಚಂದ್ರಕುಮಾರಿ, ಹಿರಿಯ ಪತ್ರಕರ್ತ ಕೆ.ಎಂ.ಮಂಜುನಾಥ, ರಾಜ್ಯ ಸಾರಿಗೆ ಸಂಸ್ಥೆಯ ನಿವೃತ್ತ ಹಿರಿಯ ಅಧಿಕಾರಿ ಬಿ.ಚಾಮರಾಜ ಅವರು ಕೃತಿ ಕುರಿತು ಮಾತನಾಡಿದರು. ಹಿರಿಯ ಲೇಖಕ ಪಿ.ಆರ್.ವೆಂಕಟೇಶ್ ಪ್ರಾಸ್ತಾವಿಕ ಮಾತನಾಡಿದರು.ಬಂಡಾಯ ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಅಬ್ದುಲ್ ಹೈ ತೋರಣಗಲ್ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಕವಿತಾ ವಿರುಪಾಕ್ಷ, ದಾಕ್ಷಾಯಿಣಿ ಮಸೂತಿ ಹಾಗೂ ಉಪನ್ಯಾಸಕ ಚಾಂದ್‌ಬಾಷಾ ಕಾರ್ಯಕ್ರಮ ನಿರ್ವಹಿಸಿದರು. ಜಡೇಶ್ ಎಮ್ಮಿಗನೂರು ಕನ್ನಡ ಗೀತೆಗಳನ್ನು ಹಾಡಿದರು.