ಕಾರವಾರ: ರೈತರ ಕೃಷಿ ಭೂಮಿಯನ್ನು, ಮಠ-ಮಂದಿರಗಳ ಆಸ್ತಿಯನ್ನು ಕಬಳಿಸುತ್ತಿರುವ ವಕ್ಫ್ ಕಾರ್ಯವನ್ನು ಖಂಡಿಸಿ ನ. ೨೧ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯಾದ್ಯಂತ ಹೋರಾಟ ನಡೆಸಿದರೂ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಜನರ ಬಳಿ ಕ್ಷಮೆಯನ್ನೂ ಕೇಳಲಿಲ್ಲ. ಸರ್ಕಾರದ ಗಮನ ಸೆಳೆಯಲು, ರೈತರ, ಮಠ-ಮಂದಿರಗಳ ಆಸ್ತಿ ಉಳಿಸಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಮತ ಬ್ಯಾಂಕಿಗಾಗಿ ಏನನ್ನಾದರೂ ಮಾಡಲು ಹೊರಟಿದೆ. ಹಿಂದೂ ವಿರೋಧಿ ನೀತಿಯನ್ನು ಬಿಟ್ಟಿಲ್ಲ. ಓಲೈಕೆ ರಾಜಕಾರಣ ಮುಂದುವರಿಸುತ್ತಿದೆ. ವಕ್ಫ್ ಭೂ ಕಬಳಿಕೆ ನೀತಿಯನ್ನು ಖಂಡಿಸಿ ಹೋರಾಟ ಮಾಡಲಾಗುತ್ತಿದೆ ಎಂದರು.ಮತ್ತೋರ್ವ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಮಾತನಾಡಿ, ರಾಜ್ಯ ಬಿಜೆಯಿಂದ, ಕೇಂದ್ರ ಸರ್ಕಾರದಿಂದ ಪ್ರತ್ಯೇಕ ಮೂರು ತಂಡ ರಚನೆ ಮಾಡಲಾಗಿದೆ. ಈ ತಂಡಗಳು ವಕ್ಫ್ ಕಬಳಿಕೆ ಬಗ್ಗೆ ಎಲ್ಲ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಿವೆ. ಡಿಸೆಂಬರ್ ಮೊದಲ ವಾರದಲ್ಲಿ ನಮ್ಮ ಜಿಲ್ಲೆಗೆ ತಂಡ ಬರುವ ಸಾಧ್ಯತೆಯಿದೆ. ಎಲ್ಲ ಬಗೆಯ ಮಾಹಿತಿಯನ್ನು ಕ್ರೋಡೀಕರಿಸಿ, ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ನ. ೨೧ರಂದು ಜಿಲ್ಲೆಯಲ್ಲಿ ನಡೆಯುವ ಧರಣಿಯಲ್ಲಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಬಿಜೆಪಿಯ ಎಲ್ಲ ಶಾಸಕರೂ, ಮಾಜಿ ಶಾಸಕರು, ಸಚಿವರು ಹಾಗೂ ವಿವಿಧ ಸಂಘಟನೆಗಳ, ಮಠ-ಮಂದಿರಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ರಾಜೇಂದ್ರ ನಾಯ್ಕ, ನಗರ ಘಟಕದ ನಾಗೇಶ ಕುರಡೇಕರ, ಕಿಶನ್ ಕಾಂಬ್ಳೆ, ಜಗದೀಶ ನಾಯಕ ಮೊಗಟ, ಸುಜಾತಾ ಬಾಂದೇಕರ, ನಂದಾ ಸಾವಂತ, ಸುಭಾಷ ಗುನಗಿ ಇದ್ದರು.ಗ್ರಾಪಂ ನೌಕರರನ್ನು ಸಿ, ಡಿ ದರ್ಜೆಗೇರಿಸಲು ಆಗ್ರಹ
ಸಿದ್ದಾಪುರ: ಗ್ರಾಮ ಪಂಚಾಯಿತಿ ಆರು ವೃಂದದ ನೌಕರರನ್ನು ಸಿ ಮತ್ತು ಡಿ ದರ್ಜೆಗೇರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ಬೆಂಗಳೂರಿನಲ್ಲಿ ನ. ೨೭ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಘಟಕದ ಅಧ್ಯಕ್ಷ ಗುರು ಎಂ. ನಾಯ್ಕ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ಬಿಲ್ ಕಲೆಕ್ಟರ್, ವಾಟರ್ ಮ್ಯಾನ್ , ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್, ಕ್ಲೀನರ್ ಸೇರಿದಂತೆ ತಾಲೂಕಿನಲ್ಲಿ ೨೧೦ ಹೆಚ್ಚು ನೌಕರರಿದ್ದಾರೆ, ಸರ್ಕಾರದಿಂದ ಅವರಿಗೆ ಯಾವುದೇ ಸೇವಾ ಭದ್ರತೆ ಇಲ್ಲ. ಸರ್ಕಾರದ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಮನೆಮನೆಗೂ ಮುಟ್ಟಿಸುವ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಲ್ಲ. ಕನಿಷ್ಠ ವೇತನದಲ್ಲಿ ಜೀವನ ನಡೆಸುವ ಪರಿಸ್ಥಿತಿ ನಮಗಿದೆ ಎಂದರು.ನ. ೨೭ರಿಂದ ರಾಜ್ಯ ಮಟ್ಟದಲ್ಲಿ ಎಲ್ಲ ನೌಕರರು ನೀರು ಸರಬರಾಜು, ಶುಚಿತ್ವ ಕಾರ್ಯ ಸಹಿತ ಎಲ್ಲ ತಮ್ಮ ಕಾರ್ಯವನ್ನು ನಿಲ್ಲಿಸಿ ಅಹೋರಾತ್ರಿ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಸಂಘಟನೆಯ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಕ ಅವರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಗೀತಾ ಗೌಡ, ಸಂಘಟನಾ ಕಾರ್ಯದರ್ಶಿ ಕೇಶವ ನಾಯ್ಕ, ಸದಸ್ಯ ವಸಂತ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.