ಅಸಮರ್ಪಕ ಮಾಹಿತಿ: ತೋಟಗಾರಿಕೆ ಇಲಾಖೆ ಅಧಿಕಾರಿಗೆ ತರಾಟೆ

KannadaprabhaNewsNetwork |  
Published : Jul 05, 2026, 02:15 AM IST
ಶಿರಹಟ್ಟಿ ತಾಪಂ ಆಡಳಿತಾಧಿಕಾರಿ ಎ.ಎ. ಕಂಬಾಳಿಮಠ ಇಲಾಖಾವಾರು ಚರ್ಚೆ ನಡೆಸಿದರು. | Kannada Prabha

ಸಾರಾಂಶ

ಶಿರಹಟ್ಟಿ ತಾಪಂ ಸಾಮರ್ಥ್ಯ ಸೌಧದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಅವರು ಅಸಮರ್ಪಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಶಾಂತ ಕುಲಕರ್ಣಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಶಿರಹಟ್ಟಿ: ಇಲ್ಲಿಯ ತಾಪಂ ಸಾಮರ್ಥ್ಯ ಸೌಧದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಹಾಗೂ ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಅವರು ಅಸಮರ್ಪಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ಪ್ರಶಾಂತ ಕುಲಕರ್ಣಿ ಅವರನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕಿನಲ್ಲಿ ಒಟ್ಟು ನೀರಾವರಿ ಪ್ರದೇಶ (ಕ್ಷೇತ್ರ) ಎಷ್ಟಿದೆ? ಇಲ್ಲಿಯ ವರೆಗೆ ನೀರಾವರಿ ಬೆಳೆಗಳಾದ ಈರುಳ್ಳಿ, ಮೆಣಸಿನ ಕಾಯಿ ಹಾಗೂ ಇತರ ತೋಟಗಾರಿಕೆ ಬೆಳೆ ಬೆಳೆದಿರುವ ಬಗ್ಗೆ ಮಾಹಿತಿ ಕೇಳಿದರೆ ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ. ಸಭೆಗೆ ಬರುವಾಗ ಸಮರ್ಪಕ ಮಾಹಿತಿಯೊಂದಿಗೆ ಬರಬೇಕೆಂಬ ಪರಿಜ್ಞಾನ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದರು.

ಕಳೆದ ಸಭೆಯಲ್ಲಿಯೇ ಈ ಕುರಿತು ಪ್ರಶ್ನೆ ಕೇಳಿದರೂ ಇವತ್ತಿನ ವರೆಗೂ ನಿಮ್ಮ ಬಳಿ ಸಮರ್ಪಕ ಮಾಹಿತಿ ಇಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. ಸದ್ಯ ನಿಮ್ಮ ಬಳಿ ಮಾಹಿತಿ ಇಲ್ಲ ಎಂದಾದರೆ ನಾನೇ ನಿಮ್ಮ ಇಲಾಖೆಗೆ ಬರುತ್ತೇನೆ, ಅಲ್ಲಿಯೇ ಸಮರ್ಪಕ ಮಾಹಿತಿ ಕೊಡಿ ಎಂದರು.

ಒಟ್ಟು ೨೬೦ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಹಾಗೂ ೨೯೯ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯುವ ಗುರಿ ಬಗ್ಗೆ ಇಲ್ಲಿ ಮಾಹಿತಿ ಕೊಟ್ಟಿದ್ದೀರಿ. ನೀವೇ ನಿಮ್ಮ ಜಿಲ್ಲಾ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಿಗೆ ೧೨೬ ಹೆಕ್ಟೇರ್ ಈರುಳ್ಳಿ, ೩೪೪ ಹೆಕ್ಟೇರ್ ಮೆಣಸಿನಕಾಯಿ ಬಿತ್ತನೆ ಗುರಿ ಇದೆ ಎಂದು ಮಾಹಿತಿ ನೀಡಿದ್ದು, ಇದರಲ್ಲಿ ಯಾವುದು ಸರಿ ಎಂದು ಪ್ರಶ್ನಿಸಿದರು.

ಬಿತ್ತನೆ ಪ್ರದೇಶದ ಬಗ್ಗೆ ಶೂನ್ಯ ಕ್ಷೇತ್ರ ಎಂದು ಸಭೆಗೆ ಮಾಹಿತಿ ನೀಡಿದ್ದು, ಜಿಲ್ಲಾ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಮೆಣಸಿನಕಾಯಿ ೩೦ ಹೆಕ್ಟೇರ್‌ ಹಾಗೂ ಈರುಳ್ಳಿ ೨೫ ಹೆಕ್ಟೇರ್ ಬಿತ್ತನೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಎಲ್ಲ ಮಾಹಿತಿ ಅವರಿಗೆ ನಿಮ್ಮಿಂದಲೇ ಹೋಗುತ್ತಿದ್ದರೂ ಅಲ್ಲೊಂದು ಮಾಹಿತಿ, ಇಲ್ಲೊಂದು ಮಾಹಿತಿ ಕೊಟ್ಟರೆ ಹೇಗೆ ಎಂದರು.

ಸಭೆಯಲ್ಲಿ ವಿವಿಧ ಯೋಜನೆಗಳ ಪ್ರಗತಿ, ಅನುದಾನ ವಿತರಣೆ, ಫಲಾನುಭವಿಗಳ ಆಯ್ಕೆ ಹಾಗೂ ಗುರಿ ಸಾಧನೆ ಕುರಿತು ಸಮರ್ಪಕ ಮಾಹಿತಿ ನೀಡುವಂತೆ ಸೂಚಿಸಲಾಗಿದ್ದರೂ, ಸಂಬಂಧಿಸಿದ ಅಧಿಕಾರಿ ನಿಖರ ಮಾಹಿತಿಯನ್ನು ಒದಗಿಸಲು ವಿಫಲರಾದರು.

ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಹಿರಿಯ ಅಧಿಕಾರಿಗಳು, ಇಲಾಖೆಯ ಕಾರ್ಯವೈಖರಿಯ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಸಭೆಗೆ ಬರುವಾಗ ಎಲ್ಲ ದಾಖಲೆಗಳು ಮತ್ತು ಅಂಕಿ-ಅಂಶಗಳನ್ನು ಸಿದ್ಧಪಡಿಸಿಕೊಂಡು ಬರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಪ್ರತಿ ಸಭೆಯಲ್ಲಿಯೂ ಚರ್ಚೆ ಆಗುತ್ತಿದೆ. ಸರ್ಕಾರಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಎ.ಎ. ಕಂಬಾಳಿಮಠ ಪ್ರಶ್ನಿಸಿದರು. ವಿದ್ಯಾನಿಧಿ ಪೋಸ್ಟಲ್ ಆ್ಯಪ್‌ನಲ್ಲಿ ಮಾಹಿತಿ ಹಾಕುತ್ತಿದ್ದು, ಶಾಲೆ ಬಿಟ್ಟ ಮಕ್ಕಳ ಬಗ್ಗೆ ತಿಳಿದುಕೊಳ್ಳಲಾಗುತ್ತಿದೆ. ಈ ಮೂಲಕ ಮಕ್ಕಳ ಪತ್ತೆ ಮಾಡಿ ಶಾಲೆಗೆ ಕರೆ ತರುವ ಕೆಲಸ ಮಾಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದರು.

ಶಾಲೆ ಕೊಠಡಿಗಳ ದುರಸ್ತಿ, ಸ್ವಚ್ಛತೆ, ಬಣ್ಣಕ್ಕೆಂದು ಸಾಕಷ್ಟು ಅನುದಾನ ಲಭ್ಯವಿದ್ದರೂ ತಾಲೂಕಿನಲ್ಲಿ ೩೦ ಶಾಲಾ ಕೊಠಡಿಗಳು ನಿರ್ಮಾಣವಾಗಬೇಕು ಎಂದು ಹೇಳುತ್ತಿದ್ದು, ಶಾಲೆ ಪ್ರಾರಂಭಕ್ಕೂ ಪೂರ್ವದಲ್ಲಿಯೇ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಈ ಹಿಂದಿನ ಸಭೆಯಲ್ಲಿ ತಿಳಿಸಿದ್ದರೂ ವಿಳಂಬ ಮಾಡಿದ್ದೀರಿ ಎಂದು ದೂರಿದರು.

ಉಳಿದಂತೆ ವಿವಿಧ ಇಲಾಖೆ ಮೇಲೆ ಚರ್ಚೆ ನಡೆಯಿತು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಪ್ಪ ದೊಡ್ಡಮನಿ, ಹನುಮೇಶ ಕೊಂಡಿಕೊಪ್ಪ, ಕೃಷಿ ಇಲಾಖೆಯ ಶಿವಕುಮಾರ ಕಾಶಪ್ಪನವರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತಾಪಂ ಸಿದ್ಧ
ಸಾಲಗಾರರ ಕಿರುಕುಳಕ್ಕೆ ಮೂವರು ಬಲಿ