ಬಳ್ಳಾರಿ: ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಶುರುಗೊಳಿಸಿರುವ ಕಿಷ್ಕಿಂದೆ ವಿಶ್ವವಿದ್ಯಾಲಯ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಈ ಮೂಲಕ ದೇಶದ ಪ್ರಗತಿಗೆ ತನ್ನದೇ ರೀತಿಯಲ್ಲಿ ಕೊಡುಗೆ ನೀಡಲು ಮುಂದಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಯಶವಂತ್ ಭೂಪಾಲ್ ತಿಳಿಸಿದರು.
ನಗರ ಹೊರವಲಯದ ಬಿಐಟಿಎಂ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಜರುಗಿದ ಕಿಷ್ಕಿಂದೆ ವಿಶ್ವವಿದ್ಯಾಲಯದ ಬಿಟೆಕ್ ತರಗತಿಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ದೇಶದ ಶೈಕ್ಷಣಿಕ ಬೆಳವಣಿಗೆಯಲ್ಲಿ ಖಾಸಗಿ ವಿದ್ಯಾಸಂಸ್ಥೆಗಳು ಸಹ ಅತ್ಯುತ್ಕೃಷ್ಟ ಕೊಡುಗೆ ನೀಡುತ್ತಿವೆ. ಬಳ್ಳಾರಿಯ ಕಿಷ್ಕಿಂದೆ ವಿಶ್ವವಿದ್ಯಾಲಯ ಸಹ ವಿದ್ಯಾರ್ಥಿಗಳ ಭವಿಷ್ಯದ ನೆಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದೆ.
ವಿಶ್ವವಿದ್ಯಾಲಯದ ನೂತನ ಕಟ್ಟಡವು ಬಳ್ಳಾರಿಯಿಂದ 28 ಕಿ.ಮೀ. ದೂರದಲ್ಲಿ ಸುಂದರ ಮತ್ತು ಸ್ವಚ್ಛ ಪರಿಸರದಲ್ಲಿ ನಿರ್ಮಾಣಗೊಳ್ಳುತ್ತಿದೆ. ನಮ್ಮ ವಿ.ವಿ.ಯಲ್ಲಿ ಅತ್ಯಾಧುನಿಕ ಪಠ್ಯಕ್ರಮವನ್ನು ಅಳವಡಿಸಿಕೊಂಡು ಬೋಧಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿದೆ ಎಂದು ಹೇಳಿದರು. ಟಿ.ಇ.ಎಚ್.ಆರ್.ಡಿ. ಟ್ರಸ್ಟ್‌ನ ಅಧ್ಯಕ್ಷ ಎಸ್.ಜೆ.ವಿ. ಮಹಿಪಾಲ್ ಮಾತನಾಡಿ, ಕಿಷ್ಕಿಂದೆ ವಿವಿಯಲ್ಲಿ ವಿಭಿನ್ನ ಮತ್ತು ವಿನೂತನ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಇಲ್ಲಿಯ ಪ್ರತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ಶಿಕ್ಷಕರಿದ್ದಾರೆ. ಅವರ ಮುಂದಿನ ಭವಿಷ್ಯದ ಕುರಿತು ಸಲಹೆ ನೀಡಲಿದ್ದಾರೆ ಎಂದು ತಿಳಿಸಿದರು.ಕಿಷ್ಕಿಂದೆ ವಿವಿಯು ಯುಜಿಸಿಯ ಮಾನ್ಯತೆ ಪಡೆದಿದೆ. ರಾಜ್ಯ ಸರ್ಕಾರದ ಕಾಯ್ದೆಯ ಅನ್ವಯ ಸ್ಥಾಪಿಸಲ್ಪಟ್ಟಿದೆ ಎಂದು ಸಹ ಕುಲಪತಿ ವೈ.ಜೆ. ಪೃಥ್ವಿರಾಜ್ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು. ದಾಖಲಾತಿ ಪಡೆದ ನೂತನ ವಿದ್ಯಾರ್ಥಿಗಳಿಗೆ ಡಾ.ಯು.ಈರಣ್ಣ ಶುಭಾಶಯ ಕೋರಿದರು.
ಟಿಇಎಚ್ ಆರ್ ಡಿ ಟ್ರಸ್ಟ್‌ನ ಅಶೋಕ್ ಭೂಪಾಲ್, ಅಮರ್ ರಾಜ್ ಭೂಪಾಲ್, ನಮ್ರತಾ ಯಾವಗಲ್, ವಿ.ವಿ.ಯ ಡೀನ್‌ಗಳಾದ ಪ್ರೊ. ಕೆ.ಎಸ್.ಆರ್. ಶ್ರೀಧರ್, ವಿವಿಧ ವಿಭಾಗಗಳ ಮುಖ್ಯಸ್ಥರು, ವಿವಿ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.ಪ್ರೊ.ವಿ.ಸಿ.ಪಾಟೀಲ್, ಪ್ರೊ.ಎಸ್.ಮಂಜುನಾಥ್ ಹಾಗೂ ವಿದ್ಯಾರ್ಥಿಗಳಾದ ರಕ್ಷಿತಾ ಹಾಗೂ ಶರಣ್ಯ ಅವರು ಕಾರ್ಯಕ್ರಮ ನಿರ್ವಹಿಸಿದರು.