ಚಿಕ್ಕಮಗಳೂರುಬರೋಬ್ಬರಿ ಒಂದು ಶತಮಾನಕ್ಕೂ ಹಿಂದೆ ಸ್ಥಾಪನೆಯಾದ ಚಿಕ್ಕಮಗಳೂರು ನಗರದ ವಿಶ್ವವಿದ್ಯಾಲಯ ವಿದ್ಯಾ ಸಂಸ್ಥೆಯ ಶಾಲಾ ಕಟ್ಟಡ, ಮೈದಾನ ಸೇರಿದಂತೆ ವಿವಿಧ ಮೂಲಸೌಕರ್ಯವನ್ನು ಬ್ರಿಗೇಡ್ ಫೌಂಡೇಶನ್ ಸಂಸ್ಥೆ ಸುಮಾರು ₹2 ಕೋಟಿ ವೆಚ್ಚದಲ್ಲಿ ನವೀಕರಿಸಿ ಶುಕ್ರವಾರ ಉದ್ಘಾಟಿಸಲಾಯಿತು.
ಬ್ರಿಗೇಡ್ ಫೌಂಡೇಶನ್‌ನಿಂದ ಶತಮಾನದ ಶಾಲೆ ನವೀಕರಣ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಬರೋಬ್ಬರಿ ಒಂದು ಶತಮಾನಕ್ಕೂ ಹಿಂದೆ ಸ್ಥಾಪನೆಯಾದ ಚಿಕ್ಕಮಗಳೂರು ನಗರದ ವಿಶ್ವವಿದ್ಯಾಲಯ ವಿದ್ಯಾ ಸಂಸ್ಥೆಯ ಶಾಲಾ ಕಟ್ಟಡ, ಮೈದಾನ ಸೇರಿದಂತೆ ವಿವಿಧ ಮೂಲಸೌಕರ್ಯವನ್ನು ಬ್ರಿಗೇಡ್ ಫೌಂಡೇಶನ್ ಸಂಸ್ಥೆ ಸುಮಾರು ₹2 ಕೋಟಿ ವೆಚ್ಚದಲ್ಲಿ ನವೀಕರಿಸಿ ಶುಕ್ರವಾರ ಉದ್ಘಾಟಿಸಲಾಯಿತು.
ನಗರದ ಹೊಸಮನೆ ವೃತ್ತದ 105 ವರ್ಷ ಹಳೆಯ ವಿಶ್ವವಿದ್ಯಾಲಯ ವಿದ್ಯಾ ಶಾಲೆ ಕೊಠಡಿಗಳನ್ನು ನವೀಕರಿದಿ ಹೊಸ ಬೋರ್ಡ್, ಆಧುನಿಕ ದೀಪ, ಫ್ಯಾನ್, ನವೀಕರಿಸಿದ ಅಡುಗೆ ಮನೆ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ.
ರನ್ನಿಂಗ್ ಟ್ರ್ಯಾಕ್, ವಾಲಿಬಾಲ್, ಫುಟ್ ಬಾಲ್ ಮತ್ತು ಬಾಸ್ಕೆಟ್ ಬಾಲ್ ಆಟಕ್ಕೆ ಪ್ರತ್ಯೇಕ ಜಾಗ. ವೀಕ್ಷಕರಿಗೆ ಆಸನ ವ್ಯವಸ್ಥೆ, ಕಾಂಪೌಂಡ್, ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಕ್ತ ಥಿಯೇಟರ್ ವ್ಯವಸ್ಥೆ, ಆಕರ್ಷಕ ಉದ್ಯಾನವನದ ಮೂಲಕ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲಾಗಿದೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ ಶತಮಾನದ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಎಂ.ಆರ್. ಜೈಶಂಕರ್, ಕವಿಧಾನ ಪರಿಷತ್ತಿನ ಉಪ ಸಭಾಪತಿ ಎಂ.ಎನ್.ಪ್ರಾಣೇಶ್, ಯುಪಿಎಸ್‌ಸಿ ಪರೀಕ್ಷೆಯಲ್ಲಿ 751ನೇ ರಾಂಕ್ ಪಡೆದ ಪ್ರವೀಣ್ ಅವರಂತಹ ವಿದ್ಯಾರ್ಥಿಗಳು ಸಮಾಜದಲ್ಲಿ ಗಣ್ಯ ಸ್ಥಾನ ಪಡೆದಿದ್ದಾರೆ ಎಂದರು.
10ನೇ ತರಗತಿವರೆಗೆ ವಿಸ್ತರಣೆಗೆ ಸರ್ಕಾರದಿಂದ ಬೇಕಾದ ಎಲ್ಲಾ ರೀತಿ ಬೆಂಬಲ, ಸಹಕಾರವನ್ನು ನೀಡಲಿದ್ದೇನೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಮಾತನಾಡಿ ಬ್ರಿಗೇಡ್ ಸಂಸ್ಥೆ ಚಿಕ್ಕಮಗಳೂರಿನ ಅಭಿವೃದ್ಧಿಗೆ ನಿರಂತರ ಕೊಡುಗೆ ನೀಡುತ್ತಾ ಬಂದಿದೆ. ಈ ಶಾಲೆ ನವೀಕರಣ ಅದಕ್ಕೆ ಮತ್ತೊಂದು ಉದಾಹರಣೆ. ಈ ಹಿಂದೆ ಅವರು ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಿಸಿದ್ದರು. ಅದು ಈಗ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕು, ಈ ಉತ್ತಮ ಮೂಲಸೌಕರ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಉಪ ಸಭಾಪತಿ ಎಂ.ಎನ್.ಪ್ರಾಣೇಶ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಮಾತನಾಡಿದರು. ಬ್ರಿಗೇಡ್ ಫೌಂಡೇಶನ್‌ನ ಸಿಇಓ ಶಿವಯೋಗಿ ಕಳಸದ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ದಾನಿ ಕುಟುಂಬದ ಪ್ರತಿನಿಧಿ ಎಂ. ಆರ್. ಗುರುಮೂರ್ತಿ, ಶಾಲೆಯ ಅಧ್ಯಕ್ಷ ಪ್ರೇಮ್‌ಕುಮಾರ್, ನಗರಸಭೆ ಅಧ್ಯಕ್ಷೆ ಭವ್ಯ ಮಂಜುನಾಥ್, ನಗರಸಭೆ ಸದಸ್ಯೆ ಸುಜಾತಾ ಶಿವಕುಮಾರ್ ಉಪಸ್ಥಿತರಿದ್ದರು.
---ಬಾಕ್ಸ್---ಬಾಲ್ಯ ಕಳೆದ ಶಾಲೆಗೆ ಕೊಡುಗೆ ನೀಡುವ ಸೌಭಾಗ್ಯ: ಜೈಶಂಕರ್‌ಬಾಲ್ಯದ ಸುಂದರ ದಿನಗಳನ್ನು ಕಳೆದ, ಬದುಕು ಮತ್ತು ಮೌಲ್ಯಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಈ ಶಾಲೆಗೆ ಈ ರೀತಿ ಕೊಡುಗೆ ನೀಡುವುದು ನನಗೆ ಸಿಕ್ಕ ಸೌಭಾಗ್ಯ ಎಂದೇ ಭಾವಿಸುತ್ತೇನೆ ಎಂದು ಬ್ರಿಗೇಡ್ ಗ್ರೂಪ್ ಕಾರ್ಯನಿರ್ವಾಹಕ ಅಧ್ಯಕ್ಷ ಎಂ.ಆರ್.ಜೈಶಂಕರ್ ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಮಾತನಾಡಿ ಈ ಕಾರ್ಯವನ್ನು ಕೇವಲ ಒಂದು ಕಟ್ಟಡದ ನವೀಕರಣ ಎಂದು ಭಾವಿಸಿಲ್ಲ. ಬದಲಿಗೆ ವಿದ್ಯಾರ್ಥಿಗಳನ್ನು ಪ್ರತಿದಿನ ಶಾಲೆಗೆ ಬರುವಂತೆ ಪ್ರೇರೇಪಿಸುವ ಮತ್ತು ತಮ್ಮ ಶಾಲೆ ಬಗ್ಗೆ ಹೆಮ್ಮೆ ಪಡುವಂತೆ ಮಾಡುವ ಅವರ ದೊಡ್ಡ ಕನಸುಗಳನ್ನು ಸಾಕಾರಗೊಳಿಸಲು ಪೂರಕ ಸುಂದರ ವಾತಾವರಣ ನಿರ್ಮಿಸುವ ಆಶಯ ಎಂದರು. ಈ ಕಾರ್ಯ ಅತ್ಯಂತ ಭಾವನಾತ್ಮಕವಾದುದು ಇದೇ ವಿಶ್ವವಿದ್ಯಾಲಯ ವಿದ್ಯಾ ಶಾಲೆ ಹಳೆಯ ವಿದ್ಯಾರ್ಥಿ ಯಾಗಿ ನನ್ನ ಬಾಲ್ಯದ ಸುಂದರ ದಿನಗಳನ್ನು ಇಲ್ಲೇ ಕಳೆದಿದ್ದೇನೆ. ನನ್ನ ಬದುಕು ಮತ್ತು ಮೌಲ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
(ಬಾಕ್ಸ್‌ಗೆ ಜೈಶಂಕರ್ ಫೋಟೋ ಇದೆ ಬಳಸಿ)
-- ಫೋಟೋ
ಚಿಕ್ಕಮಗಳೂರು ವಿಶ್ವವಿದ್ಯಾಲಯ ವಿದ್ಯಾ ಶಾಲೆ ನವೀಕೃತ ಕಟ್ಟಡ, ಮೈದಾನ ಉದ್ಘಾಟನಾ ಸಮಾರಂಭದಲ್ಲಿ ಬ್ರಿಗೇಡ್ ಗ್ರೂಪ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಎಂ.ಆರ್.ಜೈಶಂಕರ್ ಅವರನ್ನು ಸನ್ಮಾನಿಸಲಾಯಿತು. ಶಾಸಕರಾದ ಸಿ.ಟಿ.ರವಿ, ಎಚ್.ಡಿ.ತಮ್ಮಯ್ಯ, ಎಸ್.ಎಲ್.ಭೋಜೇಗೌಡ, ಉಪಸಭಾಪತಿ ಎಂ.ಎನ್.ಪ್ರಾಣೇಶ್, ಬ್ರಿಗೇಡ್ ಫೌಂಡೇಶನ್‌ನ ಸಿಇಒ ಶಿವಯೋಗಿ ಕಳಸದ, ಎಂ. ಆರ್. ಗುರುಮೂರ್ತಿ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.