ಆಗಸ್ಟ್ ಮಾಸಾಂತ್ಯಕ್ಕೆ ಜಯದೇವ ಆಸ್ಪತ್ರೆ ಲೋಕಾರ್ಪಣೆ

KannadaprabhaNewsNetwork |  
Published : Jun 18, 2024, 12:50 AM IST
ಫೋಟೋ- ಜಯದೇವ ಪರಿಶೀಲನ | Kannada Prabha

ಸಾರಾಂಶ

ಕಲಬುರಗಿಯಲ್ಲಿ ಸುಮಾರು 192 ಕೋಟಿ ರು. ಕೆ.ಕೆ.ಆರ್.ಡಿ.ಬಿ. ಅನುದಾನದಡಿ ನಿರ್ಮಿಸಲಾಗುತ್ತಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆ ಬಹುತೇಕ ಕಾಮಗಾರಿ ಮುಗಿದಿದ್ದು, ಕೊನೆ ಹಂತದ ಕಾಮಗಾರಿ ಭರದಿಂದ ಸಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯಲ್ಲಿ ಸುಮಾರು 192 ಕೋಟಿ ರು. ಕೆ.ಕೆ.ಆರ್.ಡಿ.ಬಿ. ಅನುದಾನದಡಿ ನಿರ್ಮಿಸಲಾಗುತ್ತಿರುವ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಆಸ್ಪತ್ರೆ ಬಹುತೇಕ ಕಾಮಗಾರಿ ಮುಗಿದಿದ್ದು, ಕೊನೆ ಹಂತದ ಕಾಮಗಾರಿ ಭರದಿಂದ ಸಾಗಿದೆ. 371ಜೆ ಜಾರಿ ದಶಮಾನೋತ್ಸವದ ಕೊಡುಗೆಯಾಗಿ ಈ ಆಸ್ಪತ್ರೆ ಆಗಸ್ಟ್ ಮಾಸಾಂತ್ಯಕ್ಕೆ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ನಮ್ಮ ಸರ್ಕಾರ ಸಮರ್ಪಿಸಲಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಸೋಮವಾರ ಇಲ್ಲಿ ನಿರ್ಮಾಣದ ಹಂತದಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಅವರು, ಬರುವ ಆಗಸ್ಟ್‌ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ 371 ಹಾಸಿಗೆ ಸಾಮರ್ಥ್ಯದ ಈ ಆಸ್ಪತ್ರೆ ಲೋಕಾರ್ಪಣೆಗೊಳಿಸಿ ಜಿಮ್ಸ್ ನಲ್ಲಿನ ಆಸ್ಪತ್ರೆಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಸಭೆಯ ವಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಲಾಗುತ್ತದೆ ಎಂದರು.

ಪ್ರಸ್ತುತ ಜಯದೇವ ಆಸ್ಪತ್ರೆಗೆ ಸಿಬ್ಬಂದಿಗಳಿದ್ದು, ನೂತನ ಕಟ್ಟಡ ನಿರ್ಮಾಣ ನಂತರ ಹಾಸಿಗೆ ಸಾಮರ್ಥ್ಯ ಹೆಚ್ಚಳ ಹಿನ್ನೆಲೆಯಲ್ಲಿ ಅವಶ್ಯಕತೆ ಅನುಗುಣವಾಗಿ ಸಿಬ್ಬಂದಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಸಿಬ್ಬಂದಿ ನೇಮಕಾತಿ ಬಗ್ಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಸ್ಪಷ್ಟನೆ ನೀಡಿದರು.

ಹಿಂದೆ ನಾನು ವೈದ್ಯಕೀಯ ಸಚಿವನಾಗಿದ್ದಾಗ ಜಿಲ್ಲೆಗೆ ಟ್ರಾಮಾ‌ ಸೆಂಟರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸಿದ್ದೆ. ನಂತರ ಬಂದ ಸರ್ಕಾರ ಈ ಯೋಜನೆಗೆ ಯಾವುದೇ ವೇಗ ನೀಡಲಿಲ್ಲ. ಇದೀಗ ನಮ್ಮ‌ ಸರ್ಕಾರ ಬಂದ ಮೇಲೆ ಈಗಾಗಲೆ ಟ್ರಾಮಾ ಸೆಂಟರ್ ಉದ್ಘಾಟಿಸಿ ಸಾರ್ವಜನಿಕರಿಗೆ ಸಮರ್ಪಿಸಲಾಗಿದೆ‌ ಎಂದರು.

ಜಿಮ್ಸ್ ಆವರಣದಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ಸಹ ಅಂತಿಮ ಹಂತದಲ್ಲಿದ್ದು, ಇದರ ಪೀಠೋಪಕರಣಕ್ಕೆ ಟೆಂಡರ್‌ ಕರೆಯಲಾಗಿದೆ. ಆಸ್ಪತ್ರೆಗೆ ಸಿಬ್ಬಂದಿ‌ ನೇಮಕಾತಿಗೂ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪೂರ್ಣ ಪ್ರಮಾಣದೊಂದಿಗೆ ಈ ಆಸ್ಪತ್ರೆ ಸಹ ಆರಂಭಿಸಲಾಗುವುದು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಜಿಮ್ಸ್ ನಲ್ಲಿನ ಇಲ್ಲದ ವಿಶೇಷ ವೈದ್ಯಕೀಯ ಸೇವೆಗಳು ಇಲ್ಲಿ ಲಭ್ಯವಾಗಲಿದೆ ಎಂದ ಅವರು, ಇಂತಹ ಸೇವೆಗಳಿಗೆ ಖಾಸಗಿ ಆಸ್ಪತ್ರೆಗೆ ಬಡ ಜನ ಹೆಚ್ಚಿನ ಹಣ ವ್ಯಯಿಸಬೇಕಿತ್ತು ಎಂದರು.

ಕ್ರಿಟಿಕಲ್ ಕೇರ್, ಸುಟ್ಟ ಗಾಯಗಳ ಘಟಕಕ್ಕೆ ಶೀಘ್ರ ಶಂಕುಸ್ಥಾಪನೆ:

ಟ್ರಾಮಾ ಸೆಂಟರ್ ಹೊರತಾಗಿ ಕ್ರಿಟಿಕಲ್ ಕೇರ್ ಯೂನಿಟ್ ಮತ್ತು 50 ಹಾಸಿಗೆಯ ಸುಟ್ಟು ಗಾಯಗಳ ಘಟಕ ಸಹ ಜಿಲ್ಲೆಗೆ ಮಂಜೂರಾಗಿದ್ದು, ಒಂದು ವಾರದಲ್ಲಿ ಇದಕ್ಕೆ ಶಂಕುಸ್ಥಾಪನೆ ಮಾಡಲಾಗುವುದು. 150 ಹಾಸಿಗೆಯ ಕ್ಯಾನ್ಸರ್ ವಿಸ್ತರಣಾ ಕಟ್ಟಡ, ತಾಯಿ-ಮಕ್ಕಳ ಆಸ್ಪತ್ರೆಗೂ ಒಂದು ತಿಂಗಳಿನಲ್ಲಿ ಅಡಿಗಲ್ಲು ಹಾಕಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ವಿಚಾರಣೆಗೆ ಸೂಚನೆ: ಜಿಮ್ಸ್ ಆಸ್ಪತ್ರೆಯಲ್ಲಿ ಹಾಸಿಗೆ ಇಲ್ಲದೆ ಬಡ ಮಹಿಳೆ ಸಾವನ್ನಪ್ಪಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು, ಈ ಬಗ್ಗೆ ಸಿ.ಸಿ.ಟಿ.ವಿ ದೃಶ್ಯಾವಳಿ ಪರಿಶೀಲಿಸಿ ವಿಚಾರಣೆಗೆ ಸೂಚಿಸಲಾಗಿದೆ. ವೈದ್ಯರು ತಪ್ಪವೆಸಗಿದ್ದು ಕಂಡುಬಂದರೆ ಶಿಸ್ತು ಕ್ರಮ ಜರುಗಿಸುತ್ತೇನೆ ಎಂದರು.

ಐ.ಟಿ.ಐ ಕಾಲೇಜು ಪುನರ್‌ ನವೀಕರಣ: ಕಲಬುರಗಿ, ಬಳ್ಳಾರಿ, ರಾಯಚೂರು ಸೇರಿದಂತೆ ರಾಜ್ಯದ 12 ಹಳೇ ಐ.ಟಿ.ಐ ಕಟ್ಟಡಗಳನ್ನು ನವೀಕರಿಸಲಾಗುವುದು. ಕಲಬುರಗಿ ಪುರುಷರ ಐ.ಟಿ.ಐ ಕಾಲೇಜು ಸುಮಾರು 20 ಕೋಟಿ ರು. ವೆಚ್ಚದಲ್ಲಿ ಹೊಸದಾಗಿ ಕಟ್ಟಡ ನಿರ್ಮಿಸಲಾಗುತ್ತದೆ. ಮೊದಲನೇ‌ ಹಂತದಲ್ಲಿ 100 ಕೋಟಿ ರು. ವೆಚ್ಚದಲ್ಲಿ 6 ಕಾಲೇಜು ನವೀಕರಿಸಲಾಗುವುದು ಎಂದರು. ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆಯ ಸಮನ್ವಯಾಧಿಕಾರಿ ಸಂತೋಷ, ಪ್ರೊಜೆಕ್ಟ್ ಮ್ಯಾನೇಜರ್ ಪ್ರಸಾದ ಇದ್ದರು.

PREV

Recommended Stories

ಬ್ರೇಕ್‌ ಫೇಲಾದ ಬಸ್‌ ಹಿಮ್ಮುಖ ಚಲಿಸಿದ್ದರಿಂದ 6 ಜನರ ಸಾವು
ಬಿಜೆಪಿಗಿಂತ 1 ದಿನ ಮೊದಲೇ ಜೆಡಿಎಸ್‌ ಧರ್ಮಸ್ಥಳ ಯಾತ್ರೆ