ನಾಳೆ ಕನ್ನಡ ಭವನದ ಉದ್ಘಾಟನೆ: ಸುರೇಶ ಚನ್ನಶೆಟ್ಟಿ

KannadaprabhaNewsNetwork |  
Published : Feb 02, 2024, 01:01 AM IST
ಚಿತ್ರ 1ಬಿಡಿಆರ್57 | Kannada Prabha

ಸಾರಾಂಶ

ಎರಡು ಅಂತಸ್ತಿನ ಸುಸಜ್ಜಿತ ಭವನಕ್ಕೆ ಸಚಿವ ಖಂಡ್ರೆ ಅವರಿಂದ ಚಾಲನೆ. ಸಚಿವ ರಹೀಂ ಖಾನ್‌, ಕೇಂದ್ರ ಸಚಿವ ಭಗವಂತ ಖೂಬಾ ಭಾಗಿಯಾಗಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ನಗರದಲ್ಲಿ ನಾಳೆ ಸುಮಾರು 2.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕನ್ನಡ ಭವನದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 50 ವರ್ಷಗಳಿಂದ ಕನ್ನಡ ಭವನ ಇರಲಿಲ್ಲ. ಈ ಹಿಂದೆ ಅನೇಕ ಬಾರಿ ವಿವಿಧ ಸ್ಥಳಗಳಲ್ಲಿ ಸ್ಥಳ ಸಿಕ್ಕರು ನಂತರ ಅಲ್ಲಿ ಬೇರೆ ಕಟ್ಟಡಗಳು ಕಟ್ಟಲ್ಪಟ್ಟಿದ್ದವು. ಹೀಗಾಗಿ ಹಿಂದಿನ ಜಿಲ್ಲಾಧಿಕಾರಿ ಎಚ್ಆರ್ ಮಹಾದೇವರ ಅವಧಿಯಲ್ಲಿ ಚಿಕಪೇಟ್‌ನಲ್ಲಿ ಸುಮಾರು 1 ಎಕರೆ ಭೂಮಿ ನೀಡಿದ್ದರು.

ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ. ರವಿ ಭವನ ನಿರ್ಮಾಣಕ್ಕಾಗಿ 2 ಕೋಟಿ ರು. ಮಂಜೂರು ಮಾಡಿದ್ದರು. ಆರಂಭದಲ್ಲಿ 1 ಕೋಟಿ ಬಿಡುಗಡೆಯಾಯಿತು. ನಂತರ ಮತ್ತೆ ಅನುದಾನಕ್ಕಾಗಿ ಪದೇ ಪದೇ ಸರ್ಕಾರ ಹಾಗೂ ಸಚಿವರ ಮೋರೆ ಹೊಗಬೇಕಾಯಿತು.

ಎರಡು ಅಂತಸ್ತಿನ ಭವನ: ಒಂದು ಎಕರೆಯಷ್ಟು ವಿಶಾಲ ಜಾಗದಲ್ಲಿ ಎರಡು ಅಂತಸ್ತಿನ ಸುಸಜ್ಜಿತ ಭವನ ತಲೆ ಎತ್ತಿದೆ. ನೆಲಮಹಡಿಯು ಆರ್ಟ್ ಗ್ಯಾಲರಿ, ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಕಚೇರಿ, ಮೊದಲ ಮಹಡಿ ಗ್ರಂಥಾಲಯ, ಅತಿಥಿಗಳು, ಕಲಾವಿದರ ವಸತಿ ಕೋಣೆಗಳು ಹಾಗೂ ಮೂರನೇ ಮಹಡಿ ಏಕಕಾಲಕ್ಕೆ 500 ಜನ ಕುಳಿತುಕೊಳ್ಳಬಹುದಾದ ಸಭಾ ಭವನ ಒಳಗೊಂಡಿದೆ.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ 2 ಕೋಟಿ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ 25 ಲಕ್ಷ, ಕೇಂದ್ರ ಸಚಿವ ಭಗವಂತ ಖೂಬಾ ಅವರ ನಿಧಿಯ 10 ಲಕ್ಷ, ಶಾಸಕ ರಹೀಂ ಖಾನ್ ಅವರ 10 ಲಕ್ಷ, ಎಂಎಲ್ಸಿ ರಘುನಾಥರಾವ್ ಮಲ್ಕಾಪುರೆ ಅವರ ನಿಧಿಯ 5 ಲಕ್ಷ ಸೇರಿ ಒಟ್ಟು 2.55 ಕೋಟಿ ವೆಚ್ಚದಲ್ಲಿ ಭವನ ನಿರ್ಮಾಣಗೊಂಡಿದೆ ಎಂದು ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದರು.

ಕನ್ನಡ ಭವನ ಒಟ್ಟು 8 ಕೋಟಿಯ ಯೋಜನೆಯಾಗಿದೆ. ಈಗ ಮೊದಲ ಹಂತದ ಯೋಜನೆ ಪೂರ್ಣಗೊಂಡಿದೆ. ಬಯಲು ರಂಗ ಮಂದಿರ, ಸಾವಿರ ಜನ ಕುಳಿತುಕೊಳ್ಳಬಹುದಾದ ಸಭಾ ಭವನ, ಕನ್ನಡ ವನ ನಿರ್ಮಾಣ ಮೊದಲಾದವು ಎರಡನೇ ಹಾಗೂ ಮೂರನೇ ಹಂತದ ಯೋಜನೆಗಳಾಗಿವೆ ಎಂದು ವಿವರಿಸಿದರು.

ಫೆ.3 ರಂದು ಭವನ ಉದ್ಘಾಟನೆ: ಅಂದು ಬೆಳಗ್ಗೆ 11ಕ್ಕೆ ಭವನ ಉದ್ಘಾಟನೆಗೊಳ್ಳಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಸಚಿವ ರಹೀಂ ಖಾನ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವ ಭಗವಂತ ಖೂಬಾ, ಕೇಂದ್ರ ಕಸಾಪ ಅಧ್ಯಕ್ಷ ನಾಡೋಜ ಮಹೇಶ ಜೋಶಿ, ಜಿಲ್ಲೆಯ ಎಲ್ಲ ಶಾಸಕರು, ಎಂಎಲ್ಸಿಗಳು, ನಗರ ಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಜಿಲ್ಲಾಧಿಕಾರಿ, ಸಿಇಓ ಹಾಗೂ ಎಸ್ಪಿ ಭಾಗವಹಿಸುವರು.

ಬೆಳಗ್ಗೆ ಉದ್ಘಾಟನೆ ಸಮಾರಂಭದ ನಂತರ ಮಧ್ಯಾಹ್ನ ಕರ್ನಾಟಕ ಸುವರ್ಣ ಸಂಭ್ರಮದ ನಿಮಿತ್ತ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. 50 ಕವಿಗಳು ಸ್ವರಚಿತ ಕವನ ವಾಚಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿವಶಂಕರ ಟೋಕರೆ, ಟಿಎಂ ಮಚ್ಚೆ, ವಿಜಯಕುಮಾರ ಸೋನಾರೆ, ಗುರುನಾಥ ರಾಜಗೀರಾ, ಡಿಕೆ ಗಣಪತಿ ಇದ್ದರು.---------1ಬಿಡಿಆರ್57

ಬೀದರ್‌ನ ಗುರುದ್ವಾರ-ಚಿಕ್ಕಪೇಟೆ ರಿಂಗ್ ರಸ್ತೆ ಬದಿಯಲ್ಲಿ ನಿರ್ಮಿಸಲಾದ ಸುಸಜ್ಜಿತ ನೂತನ ಜಿಲ್ಲಾ ಕನ್ನಡ ಭವನ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ