ವಾಟೆಕಾಡು ಶಾಲೆಯ ನೂತನ ವಿವೇಕ ಶಾಲಾ ಕಟ್ಟಡ ಉದ್ಘಾಟನೆ

KannadaprabhaNewsNetwork | Published : Jul 12, 2024 1:37 AM

ಸಾರಾಂಶ

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾಕ್ಷರತಾ ಇಲಾಖೆ ಮಡಿಕೇರಿ ತಾಲೂಕು, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದ ವತಿಯಿಂದ 41.70 ಲಕ್ಷ ರು.ವೆಚ್ಚದಲ್ಲಿ ಇಲ್ಲಿಗೆ ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿಯ ವಾಟೆಕಾಡು ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ವಿವೇಕ ಶಾಲಾ ಕಟ್ಟಡವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸರ್ಕಾರದ ಸವಲತ್ತುಗಳನ್ನು ಯುಕ್ತವಾಗಿ ಉಪಯೋಗಿಸುವುದು ಹಾಗೂ ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ಮಡಿಕೇರಿ ಶಾಸಕ ಡಾ ಮಂತರ್ ಗೌಡ ಹೇಳಿದ್ದಾರೆ.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾಕ್ಷರತಾ ಇಲಾಖೆ ಮಡಿಕೇರಿ ತಾಲೂಕು, ಶಾಲಾ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದ ವತಿಯಿಂದ 41.70 ಲಕ್ಷ ರು.ವೆಚ್ಚದಲ್ಲಿ ಇಲ್ಲಿಗೆ ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿಯ ವಾಟೆಕಾಡು ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ವಿವೇಕ ಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ಹಾಗೂ ಶಿಕ್ಷಣದಲ್ಲಿ ರಾಜಕೀಯ ಮಾಡಬಾರದು ಎಂದ ಅವರು, ಸ್ವಚ್ಛತೆ ಕಾಪಾಡುವುದು ನಮ್ಮ ಜವಾಬ್ದಾರಿ. ಡೆಂಘೀ ಜ್ವರ ಹೆಚ್ಚುತ್ತಿದ್ದು ಎಲ್ಲಿಯೂ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಲ್ಲಿ ಓದಿಸುವತ್ತ ಗಮನಹರಿಸಬೇಕು.ಮಕ್ಕಳು ಶಿಕ್ಷಕರು ಹಾಗೂ ಪೋಷಕರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು ಎಂದರು.

ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎ. ಹಂಸ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಟೆಕಾಡು ಸರ್ಕಾರಿ ಶಾಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದಿಂದ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಬರುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು .

ಹೊದ್ದೂರು ಗ್ರಾಮ ಪಂಚಾಯಿತಿ ವಾರ್ಡ್ ಸದಸ್ಯ ಕೆ ಮೊಣ್ಣಪ್ಪ ಮಾತನಾಡಿ, ಉತ್ತಮ ಜ್ಞಾನ ಪಡೆಯಲು ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ಇದೆ. ಜ್ಞಾನ ದೇಗುಲಗಳನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದರು .

ಪೂರ್ವ (ಆಂಗ್ಲ) ಪ್ರಾಥಮಿಕ ಶಾಲೆ ಕೊಠಡಿಯ ಉದ್ಘಾಟಿಸಲಾಯಿತು. ‘ಚಿನ್ನರ ಕನವರಿಕೆಗಳು’ ಮಕ್ಕಳ ಸ್ವರಚಿತ ಪದಪುಂಜ ಪುಸ್ತಕ ಬಿಡುಗಡೆ ಮಾಡಲಾಯಿತು.

ಶಾಸಕ ಡಾ. ಮಂತರ್ ಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್ ಎ ಹಂಸ, ಬಿಲ್ಡಿಂಗ್ ಕಂಟ್ರಾಕ್ಟರ್ ಅಬ್ದುಲ್ಲಾ ಇವರನ್ನು ಗೌರವಿಸಲಾಯಿತು.

ವಾರ್ಡ್‌ ಸಮಿತಿ ಸದಸ್ಯ ಕೆ. ಪೊನ್ನಪ್ಪ, ಹಮೀದ್, ಕುಸುಮಾವತಿ, ಲಕ್ಷ್ಮಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಜುಮೇರಿಯಾ, ಗೌರವ ಸದಸ್ಯ ಸುಬ್ರಮಣಿ, ಕ್ಷೇತ್ರ ಶಿಕ್ಷಣ ಅಧಿಕಾರಿ ಡಾ.ದೊಡ್ಡೇಗೌಡ, ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೌಮ್ಯ, ಪಿಡಿಒ ಅಬ್ದುಲ್ಲ, ಬಿಆರ್‌ಸಿ ಗುರುರಾಜ್, ಮುಖ್ಯ ಶಿಕ್ಷಕಿ ಸುಗಂಧಿನಿ, ಶಿಕ್ಷಕ ಕುಮಾರಸ್ವಾಮಿ ಮತ್ತಿತರರಿದ್ದರು.

ಡಾ. ದೊಡ್ಡೇಗೌಡ ಸ್ವಾಗತಿಸಿದರು. ಶಿಕ್ಷಕಿ ಸೌಮ್ಯ ಬಿ.ಜಿ.ನಿರೂಪಿಸಿದರು. ಶಿಕ್ಷಕಿ ಮಮತಾ ವಂದಿಸಿದರು.

Share this article