ಕನ್ನಡಪ್ರಭ ವಾರ್ತೆ ಹೊಸದುರ್ಗ
ನ. 18ರ ಕನಕ ಜಯಂತ್ಯುತ್ಸವ ಲಕ್ಷ ದೀಪೋತ್ಸವ ಕಾರ್ಯಕ್ರಮದಂದು ಕನಕ ಗುರು ಪೀಠದ ನೂತನ ಮಠದ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಯೋಜಿಸಲಾಗಿದೆ ಎಂದು ಶಾಸಕ ಆಹಾರ ನಿಗಮದ ಅಧ್ಯಕ್ಷ ಬಿ.ಜಿ. ಗೋವಿಂದಪ್ಪ ತಿಳಿಸಿದರು.ಅವರು ಪಟ್ಟಣದ ಕುರುಬರ ಸಂಘದ ವಿದ್ಯಾರ್ಥಿ ನಿಲಯದ ಸಮುದಾಯ ಭವನದಲ್ಲಿ ಕನಕ ನೌಕರರ ಸಾಂಸ್ಕೃತಿಕ ಸಂಘ(ರಿ) ದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.ಕೆಲ್ಲೋಡು ಕನಕ ಗುರುಪೀಠದ ಅಭಿವೃದ್ಧಿಗೆ 10 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅಗತ್ಯವಿರುವ ಮೂಲಭೂತ ಅಭಿವೃದ್ಧಿ ಕಾರ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು. ವಿಗ್ರಹ ಪೀಠದ ಸ್ಥಾಪನೆ ಕಾಮಗಾರಿ ನಡೆಯುತ್ತಿರುವುದರಿಂದ ಪ್ರತಿಷ್ಠಾಪನೆ ವಿಳಂಬವಾಗಲಿದೆ ಎಂದರು.ಪಟ್ಟಣದ ಸಿದ್ದೇಶ್ವರ ದೇವಸ್ಥಾನ ಆವರಣದ ಸಮುದಾಯ ಭವನ ನಿರ್ಮಾಣಕ್ಕೆ ₹3 ಕೋಟಿ ಅನುದಾನ ಬಿಡುಗಡೆಯಾಗಿದ್ದು ಅಪೂರ್ಣ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಸಮಾಜಕ್ಕೆ ಸಮರ್ಪಣೆಗೊಳಿಸಲಾಗುವುದು ಎಂದರು.ಕನಕ ಗುರುಪೀಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ಮುಖ್ಯಮಂತ್ರಿ ಎಸ್ಎಂ. ಕೃಷ್ಣ ಅವಧಿಯಲ್ಲಿ 22 ಎಕರೆ ಜಮೀನನ್ನು ಸರ್ಕಾರ ನೀಡಿದ್ದರಿಂದ ಕನಕ ಗುರುಪೀಠ ಮಠದ ಕಟ್ಟಡ, ಶಾಲಾ ಕಾಲೇಜುಗಳ ಸ್ಥಾಪನೆ ಮಾಡಲಾಗುತ್ತಿದೆ. ಕನಕ ಜಯಂತ್ಯುತ್ಸವ ಅಂಗವಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿ ನಡೆಸಲಾಗುವುದು ಎಂದು ತಿಳಿಸಿದರು.ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪ್ರಧಾನ ಕಾರ್ಯದರ್ಶಿ ಮಾಗೋದಿ ಮಂಜುನಾಥ್, ಕನಕ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಹಾಂತೇಶ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಎಂ.ಆರ್.ಸಿ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜದ ಮುಖಂಡರುಗಳಾದ ಡಾ.ಹನುಮಂತಪ್ಪ, ಎಂ.ಎಚ್ ಕೃಷ್ಣಮೂರ್ತಿ,ಇನ್ ಸೈಟ್ ಸಂಸ್ಥೆಯ ಜಿ.ಬಿ.ವಿನಯ್ ಕುಮಾರ್ ಹಾಜರಿದ್ದರು. ಸಮಾಜದ ನಿವೃತ್ತ ನೌಕರರನ್ನು , ದೇಣಿಗೆ ನೀಡಿದ ನೌಕರರನ್ನು ಸನ್ಮಾನಿಸಲಾಯಿತು.