ಫೋಟೋ- 4ಎಂವೈಎಸ್ 7, 8- ಮೈಸೂರಿನ ಮೇಲ್ದರ್ಜೆಗೇರಿದ ಅಶೋಕಪುರಂ ರೈಲು ನಿಲ್ದಾಣವನ್ನು ಸಂಸದ ಪ್ರತಾಪ ಸಿಂಹ ಉದ್ಘಾಟಿಸಿದರು. ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಮೇಯರ್ ಶಿವಕುಮಾರ್, ಶಿಲ್ಪಿ ಅಗರವಾಲ್, ವಿನಾಯಕ್ ನಾಯಕ್, ರವಿಚಂದ್ರ, ಕೇಶವಮೂರ್ತಿ ಮೊದಲಾದವರು ಇದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮುಖ್ಯ ರೈಲು ನಿಲ್ದಾಣದ ಮೇಲಿನ ಒತ್ತಡ ತಗ್ಗಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾದ ಅಶೋಕಪುರಂ ರೈಲ್ವೆ ನಿಲ್ದಾಣವನ್ನು ಸಂಸದ ಪ್ರತಾಪಸಿಂಹ ಸೋಮವಾರ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಅಶೋಕಪುರಂ ರೈಲ್ವೆ ಯಾರ್ಡ್ ಅನ್ನು ಮೈಸೂರಿನ ಎರಡನೇ ರೈಲ್ವೆ ನಿಲ್ದಾಣವಾಗಿ ಪರಿವರ್ತನೆಗೊಳಿಸಲಾಗಿದ್ದು, ಶೀಘ್ರದಲ್ಲೇ ಆರನೇ ಪ್ಲ್ಯಾಟ್ ಫಾರಂ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಅಶೋಕಪುರಂ ರೈಲ್ವೆ ನಿಲ್ದಾಣ ಅಂದರೆ ಜನರಿಗೆ ಬೇರೆಯದೆ ಕಲ್ಪನೆ ಇತ್ತು. ಇದೊಂದು ಗುಜರಿ ಅಂಗಡಿಯಂತೆ ಮಾರ್ಪಾಡಾಗಿತ್ತು. ಈಗ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಸದಾ ಮುಂದಿರುತ್ತಾರೆ. ದಶಪಥ, ರೈಲು ಮಾರ್ಗ, ಹೊಸ ರೈಲು ಎಲ್ಲವನ್ನೂ ಮೈಸೂರಿಗೆ ಕೊಡುಗೆಯಾಗಿ ನೀಡಿದ್ದಾರೆ. ಅಶೋಕಪುರಂ ರೈಲ್ವೆ ನಿಲ್ದಾಣದ ಬಳಿ ಸಂಜೆಯಾದರೆ ಜನರು ಓಡಾಡಲು ಭಯಪಡುತ್ತಿದ್ದರು. ಕಸದ ತೊಟ್ಟಿಯಾಗಿ ಮಾರ್ಪಟ್ಟಿತ್ತು. ಈಗ ನಿಲ್ದಾಣಕ್ಕೆ ಕಾಯಕಲ್ಪ ಸಿಕ್ಕಿದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಮುಖ್ಯ ರೈಲ್ವೆ ನಿಲ್ದಾಣಕ್ಕೆ ಒತ್ತಡ ಕಡಿಮೆ ಆಗುತ್ತದೆ ಎಂದರು.
ಮೂರು ಪ್ಲಾಟ್ಫಾರಂ, ಮೂರು ಚಾಲನೆಯಲ್ಲಿರುವ ಮಾರ್ಗಗಳು ಮತ್ತು ಎರಡು ಸ್ಟೇಬ್ಲಿಂಗ್ ಲೈನ್ ಹೊಂದಿರುವ ಅಶೋಕಪುರಂ ರೈಲ್ವೆ ನಿಲ್ದಾಣ ಮೈಸೂರು ನಗರ ರೈಲು ನಿಲ್ದಾಣಕ್ಕೆ ಸಮೀಪದಲ್ಲಿದೆ (5.2 ಕಿಮೀ).
ಸದ್ಯ ಐದು ಚಾಲನೆಯಲ್ಲಿರುವ ಹಳಿ ಮಾರ್ಗಗಳು ಮತ್ತು ಎರಡು ಸ್ಟೇಬ್ಲಿಂಗ್ ಲೈನ್ ಒಳಗೊಂಡಿದೆ. ಪ್ರಯಾಣಿಕರು ಪ್ಲಾಟ್ ಫಾರಂಗೆ ತೆರಳಲು ಫುಟ್ ಓವರ್ ಬ್ರಿಡ್ಜ್ ನಿರ್ಮಿಸಲಾಗಿದೆ.
ಇಲ್ಲಿ ರೈಲು ಬೋಗಿಗೆ ನೀರು ತುಂಬಿಸುವ ವ್ಯವಸ್ಥೆ, ಪ್ರಯಾಣಿಕರ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿದ್ದು, ಒಟ್ಟಾರೆ 32.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ 22 ಕೋಟಿಯನ್ನು ಸಂಚಾರ ಸೌಲಭ್ಯಗಳ ಉನ್ನತೀಕರಣಕ್ಕೆ, 10,5 ಕೋಟಿಯನ್ನು ಪ್ರಯಾಣಿಕರ ಸೌಕರ್ಯ ವೃದ್ಧಿಸಲು ಬಳಸಲಾಗಿದೆ.
---
ಮೈಸೂರಿಗೆ ಶೀಘ್ರದಲ್ಲೇ ನಾಲ್ಕು ಮೆಮೊ ರೈಲುಗಳು ಬರಲಿವೆ. ಜತೆಗೆ ಚೆನ್ನೈಗೆ ಹೋಗಲು ಮತ್ತೊಂದು ಕಾವೇರಿ ಎಕ್ಸಪ್ರೆಸ್ ಮತ್ತು ಮಾಲ್ಗುಡಿ ರೈಲು ಶೀಘ್ರವೇ ಕಾರ್ಯಾರಂಭ ಮಾಡಲಿದೆ. ತಿರುಪತಿ ರೈಲು ಅಶೋಕಪುರಂನಲ್ಲಿ ನಿಲ್ಲುವಂತೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಪ್ರತಾಪ ಸಿಂಹ, ಸಂಸದ.