ಏಕವಲಯಕ್ಕೆ ಕಲ್ಯಾಣ ಕರ್ನಾಟಕ ರೈಲ್ವೆ ಸೇರಿಸಿ

KannadaprabhaNewsNetwork |  
Published : Aug 26, 2026, 02:00 AM IST
ಫೋಟೋ- ಕಲಬುರಗಿ ರೇಲ್ವೆ ಡಿವಿಜನ್‌ಗಾಗಿ ನೀಡಿರುವ ನಿವೇಶನ ನೋಟ | Kannada Prabha

ಸಾರಾಂಶ

ಕಲ್ಯಾಣ ಕರ್ನಾಟಕ ಭಾಗದ ರೈಲ್ವೆ ಮಾರ್ಗಗಳು ವಿವಿಧ ರೈಲ್ವೆ ವಲಯ ಮತ್ತು ವಿಭಾಗಗಳಡಿ ಹಂಚಿಹೋಗಿರುವುದರಿಂದ ಅಭಿವೃದ್ಧಿ ಕಾಮಗಾರಿಗಳು, ಹೊಸ ರೈಲುಗಳ ಪ್ರಾರಂಭ ಹಾಗೂ ರೈಲ್ವೆ ಸೌಲಭ್ಯಗಳ ವಿಸ್ತರಣೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಭಾಗದ ರೈಲ್ವೆ ಮಾರ್ಗಗಳನ್ನು ಸಾಧ್ಯವಾದಷ್ಟು ಒಂದೇ ವಲಯದಡಿ ತರಬೇಕು ಹಾಗೂ ಕಲಬುರಗಿ ರೈಲ್ವೆ ವಿಭಾಗದ ಬಹುದಿನಗಳ ಬೇಡಿಕೆ ಮರುಪರಿಶೀಲಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಕನ್ನಡಪ್ರಭ ವಾರ್ತೆ, ಕಲಬುರಗಿ.ಕಲ್ಯಾಣ ಕರ್ನಾಟಕ ಭಾಗದ ರೈಲ್ವೆ ಮಾರ್ಗಗಳು ವಿವಿಧ ರೈಲ್ವೆ ವಲಯ ಮತ್ತು ವಿಭಾಗಗಳಡಿ ಹಂಚಿಹೋಗಿರುವುದರಿಂದ ಅಭಿವೃದ್ಧಿ ಕಾಮಗಾರಿಗಳು, ಹೊಸ ರೈಲುಗಳ ಪ್ರಾರಂಭ ಹಾಗೂ ರೈಲ್ವೆ ಸೌಲಭ್ಯಗಳ ವಿಸ್ತರಣೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಈ ಭಾಗದ ರೈಲ್ವೆ ಮಾರ್ಗಗಳನ್ನು ಸಾಧ್ಯವಾದಷ್ಟು ಒಂದೇ ವಲಯದಡಿ ತರಬೇಕು ಹಾಗೂ ಕಲಬುರಗಿ ರೈಲ್ವೆ ವಿಭಾಗದ ಬಹುದಿನಗಳ ಬೇಡಿಕೆ ಮರುಪರಿಶೀಲಿಸಿ ಕಾರ್ಯರೂಪಕ್ಕೆ ತರಬೇಕು ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.ಈ ಕುರಿತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ರೇಲ್ವೆ ಮೆಂಬರ್‌ ಶಶಿಕಾಂತ ಪಟೀಲ್‌ ಮನವಿ ಸಲ್ಲಿಸಿದ್ದಾರೆ.ಇತ್ತೀಚೆಗೆ ರೈಲ್ವೆ ಮಂಡಳಿಯು ಮಂಗಳೂರು ಪ್ರದೇಶವನ್ನು ಉಳ್ಳಾಲವರೆಗೆ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಲು ಕೈಗೊಂಡಿರುವ ನಿರ್ಧಾರವನ್ನುಆಡಳಿತಾತ್ಮಕ ಅನುಕೂಲ ಹಾಗೂ ಪ್ರಾದೇಶಿಕ ಅಗತ್ಯಗಳಿಗೆ ಅನುಗುಣವಾಗಿ ರೈಲ್ವೆ ವ್ಯಾಪ್ತಿಯನ್ನು ಪುನರ್ವಿಂಗಡಿಸಲು ಸಾಧ್ಯವಿದೆ ಎಂಬುದಕ್ಕೆ ಈ ನಿರ್ಧಾರ ಉತ್ತಮ ಉದಾಹರಣೆ ಎಂದು ಕೆಕೆಸಿಸಿಐ ತಿಳಿಸಿದೆ.ಇದೇ ಮಾದರಿಯಲ್ಲಿ ಕಲ್ಯಾಣ ಕರ್ನಾಟಕದ ರೈಲ್ವೆ ವ್ಯಾಪ್ತಿಯನ್ನೂ ಪುನರ್ವಿಂಗಡಿಸುವ ಅಗತ್ಯವಿದೆ. ಪ್ರಸ್ತುತ ಕಲಬುರಗಿ–ವಾಡಿ ಮಾರ್ಗ ಮಧ್ಯ ರೈಲ್ವೆಯಡಿ, ವಾಡಿ–ರಾಯಚೂರು ಹಾಗೂ ವಾಡಿ–ಸೇಡಂ ಮಾರ್ಗಗಳು ದಕ್ಷಿಣ ಮಧ್ಯ ರೈಲ್ವೆಯಡಿ ಇದ್ದು, ತಾಜ್ ಸುಲ್ತಾನಪುರ–ಬೀದರ್ ಮಾರ್ಗವೂ ದಕ್ಷಿಣ ಮಧ್ಯ ರೈಲ್ವೆಯ ವ್ಯಾಪ್ತಿಗೆ ಒಳಪಟ್ಟಿದೆ. ಹೀಗೆ ಒಂದೇ ಪ್ರದೇಶದ ರೈಲ್ವೆ ಜಾಲವು ವಿವಿಧ ಆಡಳಿತಗಳಡಿ ಹಂಚಿಹೋಗಿರುವುದರಿಂದ ಸಮಗ್ರ ಯೋಜನೆ ಹಾಗೂ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ.ಆದ್ದರಿಂದ ಕಲಬುರಗಿ, ವಾಡಿ, ಸೇಡಂ, ರಾಯಚೂರು, ಬೀದರ್ ಹಾಗೂ ಸುತ್ತಮುತ್ತಲಿನ ರೈಲ್ವೆ ಮಾರ್ಗಗಳನ್ನು ಸಮಗ್ರವಾಗಿ ಪರಿಶೀಲಿಸಿ ಸಾಧ್ಯವಾದಷ್ಟು ನೈಋತ್ಯ ರೈಲ್ವೆ ಅಥವಾ ದಕ್ಷಿಣ ಮಧ್ಯ ರೈಲ್ವೆ ಪೈಕಿ ಒಂದೇ ವಲಯದಡಿ ತರಬೇಕು ಎಂದು ಕೆಕೆಸಿಸಿಐ ಒತ್ತಾಯಿಸಿದೆ.ಕಲಬುರಗಿ ವಲಯದ ಬೇಡಿಕೆಗೆ ಮರುಜೀವ: ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ಸ್ಥಾಪಿಸಬೇಕೆಂಬುದು ಈ ಭಾಗದ ದಶಕಗಳ ಹಳೆಯ ಬೇಡಿಕೆಯಾಗಿದೆ. ಕಲಬುರಗಿ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಹಾಗೂ ಆಡಳಿತಾತ್ಮಕ ಕೇಂದ್ರವಾಗಿದ್ದರೂ, ಅಗತ್ಯ ರೈಲ್ವೆ ಮೂಲಸೌಕರ್ಯ ಕಾಮಗಾರಿಗಳು ವಿಳಂಬವಾಗುತ್ತಿರುವುದು ಕಳವಳಕಾರಿ ಎಂದು ಕೆಕೆಸಿಸಿಐ ತಿಳಿಸಿದೆ.ಕಲಬುರಗಿಯಲ್ಲಿ ಸ್ಟೇಬ್ಲಿಂಗ್ ಲೈನ್ ಕಾಮಗಾರಿ ಪೂರ್ಣಗೊಳ್ಳಲು ಹಲವು ವರ್ಷಗಳು ಬೇಕಾಗಿದ್ದು, ಬಹುಕಾಲದಿಂದ ಬಾಕಿ ಇರುವ ಎರಡನೇ ಪಿಟ್ ಲೈನ್ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇಂತಹ ವಿಳಂಬಗಳಿಂದ ಕಲಬುರಗಿಯಿಂದ ಹೆಚ್ಚಿನ ರೈಲುಗಳನ್ನು ಪ್ರಾರಂಭಿಸಲು ಮತ್ತು ಅವುಗಳ ನಿರ್ವಹಣೆಗೆ ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ತೊಂದರೆಯಾಗುತ್ತಿದೆ.ಮಂಗಳೂರು ಭಾಗದ ರೈಲ್ವೆ ವ್ಯಾಪ್ತಿಯನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ಪುನರ್ವಿಂಗಡಿಸಲು ಸಾಧ್ಯವಾದರೆ, ಕಲ್ಯಾಣ ಕರ್ನಾಟಕದ ಬಹುದಿನಗಳ ಸಮಸ್ಯೆಯನ್ನೂ ಅದೇ ರೀತಿಯಲ್ಲಿ ಪರಿಹರಿಸಬೇಕು ಎಂದು ಕೆಕೆಸಿಸಿಐ ಆಗ್ರಹಿಸಿದೆ.ವಂದೇ ಭಾರತ್‌ ಕುರಿತು ವದಂತಿ: ಇದೇ ವೇಳೆ, ಪ್ರಸ್ತಾವಿತ ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿನ ಮಾರ್ಗದ ಕುರಿತು ಹರಿದಾಡುತ್ತಿರುವ ವದಂತಿ ಮತ್ತು ಊಹಾಪೋಹಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಈ ರೈಲಿನ ಮಾರ್ಗದ ಕುರಿತು ರೈಲ್ವೆ ಸಚಿವಾಲಯದಿಂದ ಅಂತಿಮ ಅಧಿಕೃತ ಅಧಿಸೂಚನೆ ಇನ್ನೂ ಹೊರಬಂದಿಲ್ಲ. ಆದರೆ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಅವರೊಂದಿಗೆ ನಡೆದ ಸಂವಹನದ ಆಧಾರದ ಮೇಲೆ, ಪ್ರಸ್ತಾವಿತ ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕಲಬುರಗಿ ಮಾರ್ಗವಾಗಿ, ಕಲ್ಯಾಣ ಕರ್ನಾಟಕದ ಮೂಲಕವೇ ಸಂಚರಿಸಲಿದೆ ಎಂಬ ವಿಶ್ವಾಸ ಮತ್ತು ಭರವಸೆ ಕೆಕೆಸಿಸಿಐಗೆ ಇದೆ ಎಂದು ಸಂಸ್ಥೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗು, ಕರಾವಳಿಯಲ್ಲಿ ಭರ್ಜರಿ ಮಳೆ
ಕರ್ನಾಟಕಕ್ಕೆ ಮತ್ತೆ ಕಾವೇರಿ ಶಾಕ್​