ಅರಣ್ಯವಲ್ಲದ ಇತರೆ ಪ್ರದೇಶಗಳನ್ನು ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಸಮಂಜಸವಲ್ಲ. ಅಂತಹ ಪರಿಭಾವಿತ ಅರಣ್ಯ ಪ್ರದೇಶವನ್ನು ಅರಣ್ಯ ವ್ಯಾಪ್ತಿಯಿಂದ ಕೈ ಬಿಡಲು ಕ್ರಮ ವಹಿಸಲು ತಜ್ಞರಿಂದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಕಂದಾಯ, ಅರಣ್ಯ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಸಹಯೋಗದಲ್ಲಿ ಜಂಟಿ ಸಮೀಕ್ಷೆಯನ್ನು ನಡೆಸಿ ಜಿಲ್ಲೆಯಲ್ಲಿ 49,463 ಎಕರೆಯಷ್ಟು ಪರಿಭಾವಿತ ಅರಣ್ಯ ಪ್ರದೇಶದ ಸರ್ವೇ ಮಾಡಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಅಧಿಸೂಚಿತ ಪರಿಭಾವಿತ ಅರಣ್ಯ ಪ್ರದೇಶಗಳ ಜಂಟಿ ಸರ್ವೆ ಅಳತೆ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
49,463 ಎಕರೆ ರಕ್ಷಿತ ಅರಣ್ಯ
ಜಿಲ್ಲೆಯಲ್ಲಿ ಪರಿಭಾವಿತ ಅರಣ್ಯವೆಂದು ಸರ್ಕಾರದಿಂದ ಘೋಷಣೆಯಾಗಿರುವ ಪ್ರದೇಶವದಲ್ಲಿರುವ ಸ್ವಾಭಾವಿಕ ಗಿಡ, ಮರ, ಕೆರೆ ಕುಂಟೆ, ಕಲ್ಲುಬಂಡೆ, ಲೀಸ್ ಲ್ಯಾಂಡ್, ಮುಜರಾಯಿ ಜಮೀನು, ಅರಣ್ಯ, ರೈತರ ಹಿಡುವಳಿ ಜಮೀನನ್ನು ಸರಿಯಾಗಿ ದೃಢೀಕರಿಸಲು ಅಧಿಕಾರಿಗಳು ಮರು ಸರ್ವೆ ಸಮೀಕ್ಷೆಯನ್ನು ಕೈಗೊಂಡು ಪುನರ್ ಪರಿಶೀಲಿಸುವ ಕಾರ್ಯ ಚಾಲನೆಯಲ್ಲಿದೆ. ಜಿಲ್ಲೆಯ ಸುಮಾರು 49,463 ಎಕರೆಯಷ್ಟು ಪ್ರದೇಶವನ್ನು ಪರಿಭಾವಿತ ಅರಣ್ಯ ಪ್ರದೇಶವೆಂದು ಸರ್ಕಾರ 2022ರ ಮೇ ಮಾಹೆಯಲ್ಲಿ ಘೋಷಿಸಿದೆ ಎಂದರು.
ಈ ಮಧ್ಯೆ ಖಾಸಗಿ ಹಿಡುವಳಿ ಜಮೀನುಗಳನ್ನು ಮತ್ತು ಸರ್ಕಾರಿ ಜಾಗಳನ್ನು ಭೋಗ್ಯಕ್ಕೆ ನೀಡಿರುವಂತಹ ಜಮೀನುಗಳನ್ನು ಸಹ ಪರಿಭಾವಿತ ಅರಣ್ಯ ಪ್ರದೇಶವೆಂದು ಘೋಷಿಸಿರುವ ಬಗ್ಗೆ ರಾಜ್ಯದಾದ್ಯಂತ ದೂರು ಆಕ್ಷೆಪಣೆ ಅರ್ಜಿಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪುನರ್ ಪರಿಶೀಲಿಸಲು ಅವಕಾಶ ಮಾಡಿ ಕೊಟ್ಟಿದೆ. ಅದರಂತೆ ಅಧಿಕಾರಿಗಳು ಜಂಟಿ ಸಮೀಕ್ಷೆಗಳನ್ನು ನಡೆಸಿರುವ ಕಾರ್ಯವು ಬಹುತೇಕ ಪೂರ್ಣಗೊಂಡಿದೆ. ಕಾನೂನು ರೀತ್ಯಾ ಕೆಲವು ಮರು ಮಾರ್ಪಾಡುಗಳನ್ನು ಅರಣ್ಯ ಇಲಾಖೆಯ ಸಹಯೋಗದಲ್ಲಿ ಪರಿಶೀಲಿಸಿ ಮುಂದಿನ 10 ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ತಿಳಿಸಿದರು.ಮ
ಈ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಕೆರೆ ಕುಂಟೆ, ಹಿಡುವಳಿ ಜಮೀನು, ಕಲ್ಲುಬಂಡೆ, ಜಮೀನು ಅಥವಾ ಅರಣ್ಯ ಇದ್ದರೆ ವಾಸ್ತವ ಅಂಶಗಳನ್ನು ದಾಖಲೆಗಳಲ್ಲಿ ನಮೂದಿಸಿ ಷರಾ ಬರೆದು ದೃಢೀಕರಿಸಬೇಕು. ಈ ಕಾರ್ಯವು ಕರಾರುವಕ್ಕಾಗಿ ನಿಯಮಾವಳಿ ರೀತ್ಯ ಆಗಬೇಕು. ಪ್ರತಿ ತಾಲ್ಲೂಕುವಾರು, ಗ್ರಾಮವಾರು, ಸರ್ವೆ ನಂಬರ್ ವಾರು ಬಾಕಿ ಸಮೀಕ್ಷೆ ಮತ್ತು ಸರ್ವೆ ಆಗಬೇಕು. ಸಮೀಕ್ಷೆ ಆಗಿರುವುದಕ್ಕೆ ಜಿ.ಪಿ.ಆರ್.ಎಸ್ ಫೋಟೋಗ್ರಫಿ ಮಾಡಿ ದಾಖಲೆಗಳನ್ನು ಮೇಲಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ಜಿಲ್ಲಾ ಮಟ್ಟದ ಸಮಿತಿ
ಅರಣ್ಯವಲ್ಲದ ಇತರೆ ಪ್ರದೇಶಗಳನ್ನು ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೇರ್ಪಡೆ ಮಾಡುವುದು ಸಮಂಜಸವಲ್ಲ. ಅಂತಹ ಪರಿಭಾವಿತ ಅರಣ್ಯ ಪ್ರದೇಶವನ್ನು ಅರಣ್ಯ ವ್ಯಾಪ್ತಿಯಿಂದ ಕೈ ಬಿಡಲು ಕ್ರಮ ವಹಿಸಲು ತಜ್ಞರಿಂದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಯ ಅಧಿಕಾರಿಗಳು ತಮ್ಮ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ರೈತರಿಗೆ ನ್ಯಾಯ ದೊರಕಿಸಿಕೊಡಬಹುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ. ಟಿ ನಿಟಾಲಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್, ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್, ಜಿಲ್ಲಾ ಉಪವಿಭಾಗಾಧಿಕಾರಿ ಡಿ. ಎಚ್ ಆಶ್ವಿನ್, ಎಲ್ಲಾ ತಾಲ್ಲೂಕು ತಹಸೀಲ್ದಾರ್ ಗಳು, ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.