ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ನಲ್ಲಿ ಅತಿ ಹೆಚ್ಚು ಟೋಲ್ ಎಂದು ಹೇಳಲಾಗಿತ್ತು. ಅದರಂತೆ ಹೆದ್ದಾರಿಯ ಟೋಲ್ ಮತ್ತಷ್ಟು ದುಬಾರಿಯಾಗಿದೆ. ಹೊಸ ದರ ಇಂದಿನಿಂದ ಜಾರಿಯಾಗಿದೆ.
ಕನಿಷ್ಠ 5 ರಿಂದ ನಿಂದ 25 ರು.ಗಳವರೆಗೆ ನೂತನ ದರ ಏರಿಕೆಯಾಗಿದೆ. ಮಂಡ್ಯದ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾ ಮತ್ತು ರಾಮನಗರದ ಕಣಮಿಣಿಕೆಯಲ್ಲಿನ ಮತ್ತೊಂದು ಟೋಲ್ ಪ್ಲಾಜ್‌ಗಳಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹಿಸಲಾಗುತ್ತಿದೆ. ಈ ಎರಡೂ ಟೋಲ್‌ಗಳಲ್ಲಿ ಒಂದೇ ಮಾದರಿ ದರ ಏರಿಕೆಯಾಗಿದೆ.ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ಸಂಚಾರ ಮಾಡುವವರಿಗೆ 10 ರು. ಟೋಲ್ ದರ ಏರಿಕೆಯಾಗಿದೆ. 118 ಕಿ.ಮೀ. ಇರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಎರಡು ಟೋಲ್‌ಗಳಿಂದ ಈ ಮೊದಲು 345 ರು.ಗಳ ಟೋಲ್ ದರ ಇತ್ತು. ಇದೀಗ 355 ರು. ಆಗಿದೆ. ಇದು ಇಂದಿನಿಂದಲೇ ಅನ್ವಯವಾಗಿದೆ.
3 ಆಕ್ಸೆಲ್ ವಾಣಿಜ್ಯ ವಾಹನಗಳಿಗೆ ಈ ಹಿಂದೆ 625 ರು. ಇದ್ದು, ಇಂದಿನಿಂದ 640 ರು .ಗಳೊಂದಿಗೆ 15 ರು. ಏರಿಕೆ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜ್‌ಗಳಲ್ಲಿನ ದರ ಏರಿಕೆಯಿಂದಾಗಿ ವಾಹನ ಸವಾರರು, ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಹೊರೆ ಬಿದ್ದಂತಾಗಿದೆ. ವಾರ್ಷಿಕ ಪಾಸ್‌ನಲ್ಲೂ ಏರಿಕೆಯಾಗಿದ್ದು, ಲಘು ವಾಹನಗಳಿಗೆ 3 ಸಾವಿರ ರು ಇದ್ದ ದರ ಈಗ 3075 ರು.ಗಳಿಗೆ ಏರಿಕೆಯಾಗಿದೆ. ಮತ್ತೆ ಸರ್ಕಾರ ಟೋಲ್ ದರ ಹೆಚ್ಚಳ ಮಾಡಿರುವುದು ವಾಹನ ಸವಾರರಿಗೆ ಬರೆ ಎಳೆದಂತಾಗಿದೆ. ಸರ್ಕಾರಿ ಸಾರಿಗೆ ಸಂಸ್ಥೆ ವಾಹನಗಳಲ್ಲೂ ಪ್ರಯಾಣಿಕರ ದರವನ್ನು ಹೆಚ್ಚಳ ಮಾಡಲಾಗುತ್ತಿದೆ. ಇದು ಸಾರ್ವಜನಿಕರಿಗೆ ಹೆಚ್ಚಿನ ಹೊರೆಯಾಗಿದೆ.