ಕನ್ನಡಪ್ರಭ ವಾರ್ತೆ ಮೈಸೂರು
ಜಿಪಂ ಸಭಾಂಗಣದಲ್ಲಿ ಜವಳಿ ಮತ್ತು ಕೈಮಗ್ಗ ಇಲಾಖೆಯು ಶುಕ್ರವಾರ ಆಯೋಜಿಸಿದ್ದ ಜಾಗತಿಕ ಮಾರುಕಟ್ಟೆಗೆ ಜವಳಿ ಕುರಿತು ಜಿಲ್ಲಾ ಮಟ್ಟದ ಆಂತರಿಕ ಸಲಹಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರ ಹೊರತು ಪಡಿಸಿದರೆ ಅತಿ ಹೆಚ್ಚು ಉದ್ಯೋಗವನ್ನು ಜವಳಿ ಕ್ಷೇತ್ರದಿಂದ ಸೃಷ್ಟಿಸಲಾಗುತ್ತಿದೆ. ಜವಳಿ ಕ್ಷೇತ್ರದಿಂದ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಸಿಗುತ್ತಿದೆ ಎಂದು ಹೇಳಿದರು.
1912 ರಲ್ಲಿ ಮೈಸೂರಿನಲ್ಲಿ ಆರಂಭವಾದ ರೇಷ್ಮೆ ನೇಯ್ಗೆ ಕಾರ್ಖಾನೆಯಿಂದ ಇಂದು ಹೊರ ರಾಜ್ಯಗಳವರು ತರಬೇತಿ ಪಡೆದು ರೇಷ್ಮೆ ಕಾರ್ಖಾನೆಗಳನ್ನು ಆರಂಭಿಸಿದ್ದಾರೆ. ಕೇಂದ್ರ ಸರ್ಕಾರ ರಫ್ತು ಪ್ರಮಾಣ ಹೆಚ್ಚು ಮಾಡುವ ಉದ್ದೇಶದಿಂದ ದೇಶದ ಎಲ್ಲಾ ರಾಜ್ಯಗಳಿಗೂ ಗುರಿ ನೀಡಿದೆ. ಅದರಂತೆ ಕರ್ನಾಟಕಕ್ಕೂ 75200 ಕೋಟಿ ರು. ರಫ್ತು ಮಾಡುವ ಗುರಿ ನೀಡಲಾಗಿದ್ದು, ಇದನ್ನು ಮುಟ್ಟಬೇಕಾದರೆ ನಾವು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗಿದೆ ಎಂದರು.ಜವಳಿ ಮತ್ತು ಕೈಮಗ್ಗ ಕ್ಷೇತ್ರದಲ್ಲಿ ಉತ್ಪಾದಕರು, ರಫ್ತುದಾರರು, ಮರ್ಚೆಂಟ್ಸ್ ಗಳ ಸಮಸ್ಯೆಗಳನ್ನು ಆಲಿಸಲಾಗುವುದು. ಒಂದು ಜಿಲ್ಲೆ- ಒಂದು ಉತ್ಪನ್ನಕ್ಕೆ ಒತ್ತು ನೀಡಿದಂತೆ ಜವಳಿ ಕ್ಷೇತ್ರದ ಉದ್ಯಮದಾರರಿಗೂ ಉತ್ತೇಜನ ನೀಡಲಾಗುತ್ತದೆ. ರಾಜ್ಯದ ಚಾಂಪಿಯನ್ ಜಿಲ್ಲೆಗಳಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಾಸನ ಹಾಗೂ ಮೈಸೂರು ಸೇರಿದೆ. ಜವಳಿ ಕ್ಷೇತ್ರದಿಂದ ಅತಿ ಹೆಚ್ಚು ವಿದೇಶಗಳಿಗೆ ರಫ್ತು ಆಗುತ್ತಿರುವ ಕಾರಣ ಮತ್ತಷ್ಟು ಪೂರಕವಾದ ಉತ್ತೇಜನ ನೀಡಲಾಗುವುದು ಎಂದು ಅವರು ತಿಳಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಹೆಚ್ಚುವರಿ ನಿರ್ದೇಶಕ ಸಿ.ಎಸ್. ಯೋಗೇಶ್ ಮಾತನಾಡಿ, ಜವಳಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ಕಲಬುರಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಅದೇ ರೀತಿ ಬೇರೆ ಜಿಲ್ಲೆಗಳಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಮೈಸೂರು ಜಿಲ್ಲೆ ಶೇ.37 ರಷ್ಟು ಬಿಲಿಯನ್ ಡಾಲರ್ ರಫ್ತು ಮಾಡಲಾಗುತ್ತಿದ್ದು, 100 ಬಿಲಿಯನ್ ಡಾಲರ್ ರಫ್ತು ಮಾಡುವ ಗುರಿ ಹೊಂದಿರುವುದರಿಂದ ಅದಕ್ಕೆ ಬೇಕಾದ ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಉದ್ಘಾಟಿಸಿದರು. ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ಕೈಮಗ್ಗ ಮತ್ತು ಜವಳಿ ಇಲಾಖೆ ದಕ್ಷಿಣ ವಿಭಾಗದ ಜಂಟಿ ನಿರ್ದೇಶಕ ಬಿ.ಆರ್. ಯೋಗೀಶ್, ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಡಾ.ಕೆ.ಬಿ. ಲಿಂಗರಾಜು, ಕೇಂದ್ರೀಯ ರೇಷ್ಮೆ ಸಂಶೋಧನಾ ಮಂಡಳಿಯ ಶ್ರೀದೇವಿ ಮೊದಲಾದವರು ಇದ್ದರು.ದೇಶದಲ್ಲಿ ಅತಿ ಹೆಚ್ಚು ಕಾರ್ಮಿಕರನ್ನು ಜವಳಿ ಕ್ಷೇತ್ರ ಹೊಂದಿದೆ. ಈ ವಲಯಕ್ಕೆ ಕಾರ್ಮಿಕರು ಬೇಕಿರುವಷ್ಟು ಬೇರೆ ಉದ್ಯಮಕ್ಕೆ ಬೇಕಿಲ್ಲ. ವಿಯೆಟ್ನಾಂ, ಬಾಂಗ್ಲಾದೇಶ ಜವಳಿ ಕ್ಷೇತ್ರದಿಂದಲೇ ಬೇರೆ ದೇಶಗಳಿಗೆ ಹೆಚ್ಚಿನ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಮೈಸೂರು ಜಿಲ್ಲೆಯಲ್ಲಿ 100 ಬಿಲಿಯನ್ ಡಾಲರ್ ರಫ್ತು ಮಾಡುವುದಕ್ಕೆ ಗುರಿ ತಲುಪಲು ಜಿಲ್ಲಾಡಳಿತ ಎಲ್ಲಾ ನೆರವನ್ನು ನೀಡಲಿದೆ.