ದೇವಾಲಯಗಳು ಭಾವೈಕ್ಯತೆಯ ಪ್ರತೀಕ: ಸೋಮೇಶ್ವರನಾಥ ಸ್ವಾಮೀಜಿ

KannadaprabhaNewsNetwork |  
Published : Jul 04, 2026, 01:15 AM IST
51 | Kannada Prabha

ಸಾರಾಂಶ

ದೇವರು ಮನುಷ್ಯನಿಗೆ ಬದುಕಲು ಅಗತ್ಯವಾದ ಅನ್ನ, ನೀರು, ಗಾಳಿ, ಉತ್ತಮ ಪರಿಸರ ಹಾಗೂ ನೆಲೆಸಲು ಭೂಮಿಯನ್ನು ಕರುಣಿಸಿದ್ದಾನೆ. ಆತನ ಈ ಅಮೂಲ್ಯ ಕೊಡುಗೆಗಳಿಗೆ ಕೃತಜ್ಞತೆಯ ಸಂಕೇತವಾಗಿ ದೇವಾಲಯಗಳನ್ನು ನಿರ್ಮಿಸಿ, ಭಕ್ತಿ ಮತ್ತು ಸಮರ್ಪಣೆಯನ್ನು ಅರ್ಪಿಸುವುದು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯಾಗಿದೆ.

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ಪಟ್ಟಣದ ಬನ್ನಿಮರದ ರಸ್ತೆಯಲ್ಲಿರುವ ಶ್ರೀ ಚಾಮುಂಡೇಶ್ವರಿ ಅಮ್ಮನವರ ನೂತನ ದೇವಸ್ಥಾನವು ಮೂರು ದಿನಗಳ ವೈಭವದ ಧಾರ್ಮಿಕ ಮಹೋತ್ಸವದೊಂದಿಗೆ ಲೋಕಾರ್ಪಣೆಗೊಂಡಿತು.

ಸುಮಾರು ರು. 65 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ದೇವಾಲಯದಲ್ಲಿ ವಿಗ್ರಹ ಪುನರ್ ಪ್ರತಿಷ್ಠಾಪನೆ, ಕುಂಭಾಭಿಷೇಕ, ಅಷ್ಟಬಂಧ, ಪ್ರಾಣಪ್ರತಿಷ್ಠೆ ಹಾಗೂ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮಗಳು ಜು. 1ರಿಂದ 3ರವರೆಗೆ ಆಗಮೋಕ್ತ ವಿಧಿವಿಧಾನಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.

ಮೂರು ದಿನಗಳ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಅಮ್ಮನವರ ದರ್ಶನ ಪಡೆದು ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು.

ಮಹೋತ್ಸವದ ಪ್ರಮುಖ ದಿನವಾದ ಗುರುವಾರ ಬ್ರಹ್ಮ ಮುಹೂರ್ತದಲ್ಲಿ ಪೀಠಪೂಜೆ, ನವರತ್ನನ್ಯಾಸ, ವಿಮಾನ ಕಳಸ ಸ್ಥಾಪನೆ, ಅಮ್ಮನವರ ಪ್ರತಿಷ್ಠಾಪನೆ, ಅಷ್ಟಬಂಧ, ಪ್ರಾಣ ಪ್ರತಿಷ್ಠೆ ಸೇರಿದಂತೆ ವಿವಿಧ ಆಗಮೋಕ್ತ ವಿಧಿವಿಧಾನಗಳು ನೆರವೇರಿತು.

ಬಳಿಕ ಕುಂಭಾಭಿಷೇಕ, ಮಹಾಮಂಗಳಾರತಿ ಹಾಗೂ ವಿಶೇಷ ಪೂಜೆಗಳು ನಡೆದವು. ಪೂಜಾ ಕಾರ್ಯಕ್ರಮಗಳ ನಂತರ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ಭಕ್ತರು ಪ್ರಸಾದ ಸ್ವೀಕರಿಸಿದರು.

ಗೋಪುರದ ಕಳಶ ಪ್ರತಿಷ್ಠಾಪನೆ ನೆರವೇರಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರು ಶಾಖೆಯ ಸೋಮೇಶ್ವರನಾಥ ಸ್ವಾಮೀಜಿ, ದೇವಾಲಯಗಳು ಸಮಾಜದಲ್ಲಿ ಭಾವೈಕ್ಯತೆ, ಸೌಹಾರ್ದತೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಪವಿತ್ರ ಕೇಂದ್ರಗಳಾಗಿವೆ ಎಂದು ಹೇಳಿದರು.

ದೇವರು ಮನುಷ್ಯನಿಗೆ ಬದುಕಲು ಅಗತ್ಯವಾದ ಅನ್ನ, ನೀರು, ಗಾಳಿ, ಉತ್ತಮ ಪರಿಸರ ಹಾಗೂ ನೆಲೆಸಲು ಭೂಮಿಯನ್ನು ಕರುಣಿಸಿದ್ದಾನೆ. ಆತನ ಈ ಅಮೂಲ್ಯ ಕೊಡುಗೆಗಳಿಗೆ ಕೃತಜ್ಞತೆಯ ಸಂಕೇತವಾಗಿ ದೇವಾಲಯಗಳನ್ನು ನಿರ್ಮಿಸಿ, ಭಕ್ತಿ ಮತ್ತು ಸಮರ್ಪಣೆಯನ್ನು ಅರ್ಪಿಸುವುದು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯಾಗಿದೆ. ಈ ನೂತನ ದೇವಸ್ಥಾನವು ಭಕ್ತಿ, ಸೇವೆ ಹಾಗೂ ಸಮರ್ಪಣೆಯ ಪ್ರತೀಕವಾಗಿ ಮುಂದಿನ ಪೀಳಿಗೆಗೂ ಮಾರ್ಗದರ್ಶಿಯಾಗಲಿ ಎಂದು ಆಶಿಸಿದರು.

ಮಹೋತ್ಸವದ ಅಂಗವಾಗಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೂತನ ದೇವಸ್ಥಾನ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು.

ಮಾಜಿ ಸಚಿವ ಎಂ. ಶಿವಣ್ಣ, ಮಾಜಿ ಶಾಸಕ ಚಿಕ್ಕಣ್ಣ ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಮಠಾಧೀಶರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.

ಮಹೋತ್ಸವದ ಮೊದಲ ದಿನ ಪಟ್ಟಣದ ತಾರಕಾ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಿಂದ ಮಂಗಳವಾದ್ಯಗಳೊಂದಿಗೆ ನೂರಾರು ಮಹಿಳೆಯರು ಕಳಶಗಳಲ್ಲಿ ಗಂಗಾಜಲ ತಂದು ಭವ್ಯ ಮೆರವಣಿಗೆಯ ಮೂಲಕ ದೇವಾಲಯ ಪ್ರವೇಶಿಸಿದರು. ನಂತರ ಗಣಪತಿ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಎರಡನೇ ದಿನ ಪುಣ್ಯಾಹ, ವಾಸ್ತು ಪೂಜೆ, ಕಳಸ ಪೂಜೆ, ಹೋಮ, ಪೂರ್ಣಾಹುತಿ ಸೇರಿದಂತೆ ವಿಶೇಷ ಪೂಜೆಗಳು ನೆರವೇರಿದವು. ಸಂಜೆ ನಡೆದ ಭಕ್ತಿಗೀತೆಗಳ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು.

ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಭಕ್ತಿಗೀತೆಗಳ ಗಾಯನ, ನೃತ್ಯರೂಪಕಗಳು ಹಾಗೂ ಪೌರಾಣಿಕ ನಾಟಕ ಪ್ರದರ್ಶನಗಳು ಭಕ್ತರ ಮೆಚ್ಚುಗೆಗೆ ಪಾತ್ರವಾದವು. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ವೈಭವವೂ ಮಹೋತ್ಸವಕ್ಕೆ ವಿಶೇಷ ಮೆರುಗು ನೀಡಿತು.

ದೇವಾಲಯ ನಿರ್ಮಾಣಕ್ಕೆ ಸಾರ್ವಜನಿಕರು, ದಾನಿಗಳು ಹಾಗೂ ಟ್ರಸ್ಟ್ ಸದಸ್ಯರು ಉದಾರವಾಗಿ ಸಹಕಾರ ನೀಡಿದ್ದರು. ಅವರ ಸಹಭಾಗಿತ್ವದಿಂದ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ನೂತನ ದೇವಸ್ಥಾನವು ಪಟ್ಟಣದ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾಗಿ ರೂಪುಗೊಂಡಿದೆ. ಮೂರು ದಿನಗಳ ಮಹೋತ್ಸವವು ಭಕ್ತಿ, ಸಂಭ್ರಮ, ಶಿಸ್ತು ಹಾಗೂ ಜನಸಹಭಾಗಿತ್ವದೊಂದಿಗೆ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಸಿರಾಟ ಸಮಸ್ಯೆಯಲ್ಲಿದ್ದ ಮಹಿಳೆ ರಕ್ಷಣೆ
ಪರಿಸರ ಸ್ವಚ್ಛಗೊಳಿಸಿ, ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ: ಶ್ರೀ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ