ಬಿಡದಿ ಟೌನ್ ಶಿಪ್ ನಿಲ್ಲಿಸಿ, ಫಲವತ್ತಾದ ರೈತರ ಜಮೀನು ಉಳಿಸುವಂತೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jul 04, 2026, 01:15 AM IST
2 | Kannada Prabha

ಸಾರಾಂಶ

ರಾಜ್ಯ ಸರ್ಕಾರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಡದಿಯ ಸುತ್ತಮುತ್ತಲ ಹಳ್ಳಿಗಳ ರೈತರ ಫಲವತ್ತಾದ 7500 ಎಕರೆ ಜಮೀನುಗಳನ್ನು ವಶಪಡಿಸಿಕೊಂಡು ಬಂಡವಾಳಶಾಹಿಗಳಿಗೆ ಅನುಕೂಲಕ್ಕೆ ಟೌನ್‌ ಶಿಪ್ ಮಾಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಬಿಡದಿ ಟೌನ್ ಶಿಪ್ ನಿಲ್ಲಿಸಿ, ಫಲವತ್ತಾದ ರೈತರ ಜಮೀನು ಉಳಿಸಲು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದವರು ನಗರದ ಗಾಂಧಿ ಚೌಕದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟಿಸಿದ ನೂರಾರು ರೈತರು, ಬಿಡದಿ ರೈತರ ಹೋರಾಟವನ್ನು ಬೆಂಬಲಿಸಿದರು.

ರಾಜ್ಯ ಸರ್ಕಾರವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಡದಿಯ ಸುತ್ತಮುತ್ತಲ ಹಳ್ಳಿಗಳ ರೈತರ ಫಲವತ್ತಾದ 7500 ಎಕರೆ ಜಮೀನುಗಳನ್ನು ವಶಪಡಿಸಿಕೊಂಡು ಬಂಡವಾಳಶಾಹಿಗಳಿಗೆ ಅನುಕೂಲಕ್ಕೆ ಟೌನ್‌ ಶಿಪ್ ಮಾಡಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಈ ಭೂಮಿಯಲ್ಲಿರುವ ಸಾವಿರಾರು ತೆಂಗು ಅಡಿಕೆ ಮರಗಳನ್ನು ಕಡಿದು ಪರಿಸರ ಮಾರಕ ನೀತಿ ಅನುಸರಿಸುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಅವರು ಕಿಡಿಕಾರಿದರು.

ಜಮೀನು ಮಾಲಿಕತ್ವದ ರೈತರು 470 ದಿನಗಳಿಂದ ಹೋರಾಟ ಮಾಡುತ್ತಾ ಸರ್ಕಾರಕ್ಕೆ ಜಮೀನು ಬಿಟ್ಟು ಕೊಡುವುದಿಲ್ಲ ಎಂದಿದ್ದಾರೆ. ರೈತರ ಮನವಿಯನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ಮಾಡುವುದು ಖಂಡನಿಯ. ಮುಖ್ಯಮಂತ್ರಿಗಳು ಪ್ರಜಾ ಸೇವಕರು, ಪ್ರಜೆಗಳ ಅಭಿಪ್ರಾಯವನ್ನು ಧಿಕ್ಕರಿಸಿ ಆಡಳಿತ ನಡೆಸಬಾರದು. ಇಂತಹ ವಿಚಾರದಲ್ಲಿ ರಾಜಕೀಯ ಪಕ್ಷಗಳ ಕಿತ್ತಾಟಕ್ಕೆ ರೈತರು ಕೂಡ ಬಲಿಯಾಗಬಾರದು ಎಂಬ ಅರಿವಿರಲಿ ಎಂದು ಅವರು ಆಗ್ರಹಿಸಿದರು.

ಬರ ಪರಿಸ್ಥಿತಿ-ಕ್ರಮ ಕೈಗೊಳ್ಳಿ:

ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದ ತೀವ್ರ ಬರ ಪರಿಸ್ಥಿತಿ ಉಂಟಾಗಿದೆ. ಕೃಷಿ, ತೋಟಗಾರಿಕೆ ಮತ್ತು ಜಾನುವಾರು ಸಾಕಾಣಿಕೆ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿದ್ದು, ರೈತರು ಆರ್ಥಿಕವಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಹಲವೆಡೆ ಗಂಭೀರವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಬರಪೀಡಿತ ಪ್ರದೇಶಗಳನ್ನು ವೈಜ್ಞಾನಿಕ ಸಮೀಕ್ಷೆಯ ಆಧಾರದ ಮೇಲೆ ತಕ್ಷಣ ಘೋಷಿಸಬೇಕು. ರೈತರಿಗೆ ಸಮರ್ಪಕ ಬರ ಪರಿಹಾರವನ್ನು ವಿಳಂಬವಿಲ್ಲದೆ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಕೃಷಿ ಸಾಲಗಳ ಮರುಪಾವತಿಗೆ ವಸೂಲಾತಿ ನಿಲ್ಲಿಸಬೇಕು ಹಾಗೂ ಬಡ್ಡಿ ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸರ್ಕಾರದಿಂದ ತುರ್ತಾಗಿ ಕಲ್ಪಿಸಬೇಕು. ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಬೇಕು. ಬೆಳೆ ವಿಮೆ ಪರಿಹಾರವನ್ನು ತ್ವರಿತವಾಗಿ ರೈತರಿಗೆ ವಿತರಿಸಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಹಾಗೂ ಇತರೆ ಪರ್ಯಾಯ ವ್ಯವಸ್ಥೆಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

ಬರವು ಕೇವಲ ರೈತರ ಸಮಸ್ಯೆಯಲ್ಲ, ಪ್ರಕೃತಿಯ ಶಾಪ ಅದು ಆಹಾರ ಭದ್ರತೆ, ಗ್ರಾಮೀಣ ಆರ್ಥಿಕತೆ ಮತ್ತು ಜನಜೀವನದ ಮೇಲೆಯೇ ಪರಿಣಾಮ ಬೀರುತ್ತದೆ. ಆದ್ದರಿಂದ ಸರ್ಕಾರಗಳು ರಾಜಕೀಯ ಭೇದ ಮರೆತು ಮಾನವೀಯ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು. ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ರೈತರ ನೆರವಿಗೆ ನಿಲ್ಲಬೇಕು. ರಾಜ್ಯದಲ್ಲಿ ಮಳೆ ರಾಜ್ಯಾದ್ಯಂತ ಉಸ್ತುವಾರಿ ಕಾರ್ಯದರ್ಶಿಗಳು ನೇಮಿಸಿ ಬರ ಅಧ್ಯಯನ ನಡೆಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಪದಾಧಿಕಾರಿಗಳಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕಳ್ಳಿ ಮಹದೇವಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ, ವರಕೋಡು ನಾಗೇಶ್, ಪಟೇಲ್ ಶಿವಮೂರ್ತಿ, ಸತೀಶ್, ಗುರುಸ್ವಾಮಿ, ಕುರುಬೂರು ಸಿದ್ದೇಶ್, ವಿಜಯೇಂದ್ರ, ಉಡಿಗಾಲ ರೇವಣ್ಣ, ಸುಂದರಪ್ಪ, ಕೆಂಡಗಣಪ್ಪ, ಕುರುಬೂರು ಪ್ರದೀಪ್, ಗೌರಿಶಂಕರ್, ಬಿ.ಪಿ. ಪರಶಿವಮೂರ್ತಿ, ಕೋಟೆ ಸುನಿಲ್, ಕುಮಾರ್, ದೊಡ್ಡಕಾಟೂರು ಮಹದೇವಸ್ವಾಮಿ, ಕಾಟೂರು ನಾಗೇಶ್, ಸಾತಗಳ್ಳಿ ಬಸವರಾಜ, ಅಂಬಳೆ ಮಂಜುನಾಥ್, ವಾಜಮಂಗಲ ಮಹಾದೇವ, ಶಿವಣ್ಣ, ಹೆಗ್ಗೊಠಾರ ಶಿವಸ್ವಾಮಿ, ಉಮೇಶ್, ನಾಗೇಂದ್ರ, ನಂಜುಂಡ, ಕೆಂಡಗಣಸ್ವಾಮಿ, ಮಂಜೇಶ್, ಶಿವಪ್ರಸಾದ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಸಿರಾಟ ಸಮಸ್ಯೆಯಲ್ಲಿದ್ದ ಮಹಿಳೆ ರಕ್ಷಣೆ
ಪರಿಸರ ಸ್ವಚ್ಛಗೊಳಿಸಿ, ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ: ಶ್ರೀ ಮುರುಘೇಂದ್ರ ಶಿವಾಚಾರ್ಯ ಸ್ವಾಮೀಜಿ