ತರಕಾರಿ ಬೆಲೆ ಏರಿಕೆ; ಜನಸಾಮಾನ್ಯರ ಜೇಬಿಗೆ ಬರೆ

KannadaprabhaNewsNetwork | Published : Jun 26, 2024 12:36 AM

ಸಾರಾಂಶ

ತರಕಾರಿ ಬೆಲೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರ ಜೇಬನ್ನು ಸುಡುತ್ತಿದೆ. ಬೀನ್ಸ್‌ ಕೆಜಿಗೆ 200 ರು. ಹಾಗೂ ಹಸಿಮೆಣಸಿನಕಾಯಿ ಕೆ.ಜಿ.ಗೆ 100 ರು. ದಾಟಿದ್ದು, ಅದೇ ಹಾದಿಯಲ್ಲಿ ಟೊಮೆಟೋ ಸೇರಿದಂತೆ ಉಳಿದ ತರಕಾರಿಗಳೂ ಸಾಗಿವೆ.

ಬಿಂದುಮಾಧವ ಮಣ್ಣೂರ

ಕನ್ನಡಪ್ರಭ ವಾರ್ತೆ ಅಫಜಲ್ಪುರ

ತರಕಾರಿ ಬೆಲೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರ ಜೇಬನ್ನು ಸುಡುತ್ತಿದೆ. ಬೀನ್ಸ್‌ ಕೆಜಿಗೆ 200 ರು. ಹಾಗೂ ಹಸಿಮೆಣಸಿನಕಾಯಿ ಕೆ.ಜಿ.ಗೆ 100 ರು. ದಾಟಿದ್ದು, ಅದೇ ಹಾದಿಯಲ್ಲಿ ಟೊಮೆಟೋ ಸೇರಿದಂತೆ ಉಳಿದ ತರಕಾರಿಗಳೂ ಸಾಗಿವೆ. ಇದರಿಂದ ಸಾಮಾನ್ಯ ಜನರು ಕಂಗಾಲಾಗಿ, ಒಂದು ಕೆಜಿ ಬೇಕಿದ್ದಲ್ಲಿ ಅರ್ಧ ಕೆಜಿ ಖರೀದಿಸುವಂತಾಗಿದೆ.

ಈ ಬಾರಿ ಕಡು ಬೇಸಿಗೆಯಿಂದಾಗಿ ಬೆಳೆ ಬೆಳೆಯಲು ಕಷ್ಟಕರವಾಗಿತ್ತು.ಇದು ಕೃಷಿ ವಲಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ತಾಲೂಕಿನಲ್ಲಿ ತರಕಾರಿ ಬೆಳೆಗಳ ಉತ್ಪಾದನೆಯಲ್ಲಿ ಕುಂಠಿತವಾಗಿದೆ.ಹೀಗಾಗಿ ತರಕಾರಿ, ಹಣ್ಣುಗಳ ಪೂರೈಕೆ ಕಡಿಮೆಯಾದ ಕಾರಣ ಬೇಡಿಕೆ ಜತೆ ಬೆಲೆ ಕೂಡ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.

ಸೆಂಚುರಿ ದಾಟಿದ ಟೊಮೆಟೋ: ಸಾಮಾನ್ಯವಾಗಿ ಒಂದೆರಡು ತರಕಾರಿಗಳ ಬೆಲೆ ಜಾಸ್ತಿ ಇರುತ್ತಿತ್ತು. ಆದರೆ, ಈಗ ಎಲ್ಲ ತರಕಾರಿಗಳು ಕೆಜಿಗೆ ಕನಿಷ್ಠ 60ರಿಂದ 100 ರು. ಅಸುಪಾಸಿನಲ್ಲಿವೆ. ಹೀಗಾಗಿ ತರಕಾರಿ ಖರೀದಿಸಲು ಬಂದವರಿಗೆ ದಿಕ್ಕು ತೋಚದಂತಾಗಿದೆ. ತರಕಾರಿ ಮಾರುಕಟ್ಟೆಯನ್ನೆಲ್ಲ ಸುತ್ತಾಡಿ, ವಿಚಾರಿಸಿ, ವಿಧಿ ಇಲ್ಲದೇ ವ್ಯಾಪಾರಸ್ಥರು ಕೇಳಿದಷ್ಟು ಹಣ ನೀಡಿ ಕೊಂಡೊಯ್ಯುತ್ತಿದ್ದಾರೆ. ಕಾಯಿಪಲ್ಲೆ ಹೀಗೆ ತುಟ್ಟಿಯಾದರೆ ಮನೆ ನಡೆಸುವುದು ಭಾರಿ ಕಷ್ಟ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಬೆಲೆ ಏರಿಕೆ ಬಿಸಿ: ತರಕಾರಿ, ಹಣ್ಣುಗಳ ಬೆಲೆ ಏರಿಕೆಯಿಂದ ಗ್ರಾಹಕರ ಕೈಸುಡುತ್ತಿದೆ. ಮಾರುಕಟ್ಟೆಯಲ್ಲಿರುವ ತರಕಾರಿ ಬೆಲೆಗಿಂತ ಹೆಚ್ಚಿನ ದರ ನೀಡಿ ತರಕಾರಿ ಖರೀದಿಸಬೇಕಾಗಿದೆ. ಗ್ರಾಹಕರು ಬೆಲೆ ಹೆಚ್ಚು ನೀಡಿದರೂ ಗುಣಮಟ್ಟದ ತರಕಾರಿ ಸಿಗುತ್ತಿಲ್ಲ.

ಇಲ್ಲಿ ಟೊಮೆಟೋಗೆ ಬೇಡಿಕೆ ಹೆಚ್ಚಿದೆ. ಪೂರೈಕೆ ಕುಸಿತ ಕಂಡಿದೆ. ಹೀಗಾಗಿ ಟೊಮೆಟೋ ದರ ಹೆಚ್ಚಾಗಿದೆ. ಮಳೆ ಕಡಿಮೆಯಾದರೂ ಟೊಮೆಟೋ ದರ ಮಾತ್ರ ಏರಿಕೆಯಾಗುತ್ತಲೇ ಇದೆ. ಒಂದು ಬಾಕ್ಸ್‌ಗೆ 1100 ರು. ಇದೆ. ಕೆಜಿಗೆ 80ರಿಂದ 90 ರು. ಇದೆ. ಹಣ್ಣುಗಳಾದ ಸೇಬುಹಣ್ಣು, ದಾಳಿಂಬೆ, ಕಿತ್ತಳೆ, ಮಾವು ಸೇರಿದಂತೆ ಇನ್ನಿತರೆ ಹಣ್ಣುಗಳು ಸಹ ಏರಿಕೆಯಾಗಿದ್ದು ಬಡವರು, ಮಧ್ಯಮ ವರ್ಗದವರು ಜೀವನ ನಡೆಸುವುದು ಕಷ್ಟವಾಗಿದೆ ಎನ್ನುತ್ತಾರೆ ಗ್ರಾಹಕರು.

ತರಕಾರಿ ಬೆಲೆ

ಟೊಮೆಟೋ 80-90 ರು.

ಬದನೆ 80 ರು.

ಮೂಲಂಗಿ 40 ರು.

ಹಾಗಲಕಾಯಿ 80 ರು.

ಹೀರೇಕಾಯಿ 80 ರು.

ಮೆಣಸಿನಕಾಯಿ 120 ರು.

ಬೀನ್ಸ್‌ 180 ರು.

ಕ್ಯಾರೆಟ್‌ 80 ರು.

ಬಟಾಣಿ 200 ರು.

ನುಗ್ಗೆ 80 ರು.

ಬೆಂಡೆ 80 ರು.

ಗೆಡ್ಡೆಕೋಸು 80 ರು.

ಶುಂಠಿ 80 ರು.

ಬೆಳ್ಳುಳ್ಳಿ 100 ರು.ಎಲ್ಲ ತರಕಾರಿ ಬೆಲೆಯೂ ಗಗನಕ್ಕೇರಿದೆ. ಬೆಲೆ ಹೆಚ್ಚಾದರೂ ಅನಿವಾರ್ಯವಾಗಿ ಖರೀದಿಸಬೇಕಾದ ಪರಿಸ್ಥಿತಿ ಇದೆ. ಬಡವರು ಹಾಗೂ ಮಧ್ಯಮ ವರ್ಗದವರು ಜೀವನ ನಿರ್ವಹಣೆ ಮಾಡಲು ತೊಂದರೆ ಅನುಭವಿಸುವಂತಾಗಿದೆ.

- ಮಲಕಮ್ಮ ಪಾರ್ವತಿ, ಗ್ರಾಹಕರು

------

ಮಾರುಕಟ್ಟೆಗೆ ನಿಗದಿತ ಸಮಯಕ್ಕೆ ತರಕಾರಿ ಬರುತ್ತಿಲ್ಲ. ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಾಗಿದ್ದರಿಂದ ಸರಕು ವಾಹನಗಳ ಬಾಡಿಗೆ ಹೆಚ್ಚಳವಾಗಿದ್ದರಿಂದ ಖರ್ಚು ವೆಚ್ಚ ದುಬಾರಿಯಾಗಿದೆ.ಮಾರುಕಟ್ಟೆಗೆ ತರಕಾರಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು, ಇದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

- ಸೈಫನಸಾಬ ಗೌರ, ತರಕಾರಿ ವ್ಯಾಪಾರಿ

-----

ಬೇಸಿಗೆ ತೀವ್ರತೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಬೆಳೆಗಳು ರೋಗಕ್ಕೆ ತುತ್ತಾಗಿ ಶೇ.30ರಷ್ಟು ಮಾತ್ರ ಇಳುವರಿ ಬಂದಿದೆ. ಈಗ ಮಳೆಯಾಗುತ್ತಿದ್ದರೂ ಬೆಳೆಗಳಿಗೆ ತೇವಾಂಶ ಹೆಚ್ಚಳವಾಗಿ ಫಸಲು ಬರುವ ನಿರೀಕ್ಷೆಯಲ್ಲಿದ್ದೇವೆ. ಗುಣಮಟ್ಟದ ತರಕಾರಿ ಸಿಗದ ಕಾರಣ ಮಾರುಕಟ್ಟೆಯಲ್ಲಿತರಕಾರಿ ಬೆಲೆ ಹೆಚ್ಚಳವಾದರೂ ರೈತರಿಗೆ ಇದರ ಲಾಭ ದೊರೆಯುತ್ತಿಲ್ಲ.

- ಅಣ್ಣಪ್ಪ ಬಿಜಾಪುರ, ರೈತ

Share this article